More

    ಆಂಬುಲೆನ್ಸ್ ಸಿಬ್ಬಂದಿಗಿಲ್ಲ ವೇತನ

    ಧಾರವಾಡ: ಕರೊನಾ ಪಾಸಿಟಿವ್ ಬಂದ ವ್ಯಕ್ತಿಗಳು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯುವಲ್ಲಿ ಇವರ ಪ್ರಯತ್ನ ಸಾಕಷ್ಟಿದೆ. ತಮ್ಮ ಜೀವದ ಹಂಗು ತೊರೆದು ಇಷ್ಟೆಲ್ಲ ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರ ಮಾತ್ರ ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡುತ್ತಿಲ್ಲ.

    ಹೌದು… ಕರೊನಾ ಪಾಸಿಟಿವ್ ವ್ಯಕ್ತಿಗಳನ್ನು ಆಸ್ಪತ್ರೆಗೆ ಸೇರಿಸುವುದು, ಸೋಂಕಿನಿಂದ ಮೃತಪಟ್ಟವರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸುವುದು… ಹೀಗೆ ತುರ್ತು ಆರೋಗ್ಯ ಸೇವೆ ಸಲ್ಲಿಸುತ್ತಿರುವ 108 ಆಂಬುಲೆನ್ಸ್ ಸಿಬ್ಬಂದಿ ಮೂರು ತಿಂಗಳಿಂದ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸದ್ಯ ಕರೊನಾ ಮಹಾಮಾರಿ ತೀವ್ರವಾಗಿ ಹಬ್ಬುತ್ತಿರುವ ಕಠಿಣ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಮುಂಚೂಣಿ ಕರೊನಾ ಸೇನಾನಿಗಳಾಗಿ ಆಂಬುಲೆನ್ಸ್ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಮಾರ್ಚ್ ತಿಂಗಳಿಂದ ವೇತನ ಇಲ್ಲದೆ ಜೀವನ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಕೆಲ ಸಿಬ್ಬಂದಿ ಸಾಲ ಮಾಡಿಕೊಂಡಿದ್ದರೆ, ಹಲವರು ಪಿಎಫ್ ಹಣ ತೆಗೆದು ಜೀವನ ಸಾಗಿಸುತ್ತಿದ್ದಾರೆ.

    ಒಂದೆಡೆ ವೇತನ ಇಲ್ಲದೆ ಕುಟುಂಬ ನಿರ್ವಹಣೆ ಹೇಗೆ ಎಂಬ ಚಿಂತೆಯಾಗಿದ್ದರೆ, ಜೀವರಕ್ಷಕ ಸಾಮಗ್ರಿಗಳಿಲ್ಲದೆ ಈ ಕಷ್ಟದ ಕೆಲಸ ನಿರ್ವಹಿಸುವುದು ಹೇಗೆ ಎಂಬ ಭೀತಿ ಇನ್ನೊಂದೆಡೆ. ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಎನ್ 95 ಮಾಸ್ಕ್, ಕೈಗವಸು, ಸ್ಯಾನಿಟೈಸರ್ ಹಾಗೂ ಪಿಪಿಇ ಕಿಟ್​ಗಳನ್ನೂ ಸರಿಯಾಗಿ ವಿತರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ, 108 ವಾಹನಗಳ ಸಿಬ್ಬಂದಿ ನಿತ್ಯವೂ ಆತಂಕದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.

    ಒಂದು ಆಂಬುಲೆನ್ಸ್​ನಲ್ಲಿ ಪೈಲೆಟ್, ಸ್ಟಾಫ್ ನರ್ಸ್ ಸೇರಿ ಒಟ್ಟು ಇಬ್ಬರು ಕಾರ್ಯ ನಿರ್ವಹಿಸುತ್ತಾರೆ. ಧಾರವಾಡ ಜಿಲ್ಲೆಯಲ್ಲಿ 23 ವಾಹನಗಳು ಸೇವೆ ಸಲ್ಲಿಸುತ್ತಿವೆ. ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚಿನ ವಾಹನಗಳಿವೆ. ಪಾಸಿಟಿವ್ ಬಂದ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ಸುರಕ್ಷಾ ಸಾಮಗ್ರಿಗಳು ಅಗತ್ಯ. ಆದರೆ, ಪಿಪಿಇ ಕಿಟ್ ಇರಲಿ, ಕೈಗವಸುಗಳನ್ನು ಕೂಡ ಆಸ್ಪತ್ರೆಗಳಲ್ಲಿ ಕಾಡಿಬೇಡಿ ಪಡೆಯುವಂತಹ ಸ್ಥಿತಿ ಇದೆ. ಪಾಸಿಟಿವ್ ವ್ಯಕ್ತಿಗಳನ್ನು ಬಿಟ್ಟು ಬಂದ ಬಳಿಕ ವಾಹನವನ್ನು ಸರಿಯಾಗಿ ಸ್ವಚ್ಛಗೊಳಿಸಲು ಸ್ಯಾನಿಟೈಸರ್ ಸಹ ಇಲ್ಲದಂತಾಗಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.

    ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಸಿಬ್ಬಂದಿ ಪರದಾಟಕ್ಕೆ ಕಾರಣವಾಗಿದೆ. ಇನ್ನು ಸಿಬ್ಬಂದಿ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಜಿವಿಕೆ ಪ್ರತಿಷ್ಠಾನದ ಮುಖ್ಯಸ್ಥರೂ ಸರ್ಕಾರದತ್ತ ಬೊಟ್ಟು ತೋರಿಸಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಷಯವಾಗಿ ಜಿವಿಕೆ ಪ್ರತಿಷ್ಠಾನದ ಮುಖ್ಯಸ್ಥರನ್ನು ಸಂರ್ಪಸಿದಾಗ, ‘ಸರ್ಕಾರದಿಂದ ಅನುದಾನ ಬರದ ಕಾರಣಕ್ಕೆ ವೇತನ ಪಾವತಿಸಿಲ್ಲ. ಅನುದಾನ ಬಿಡುಗಡೆಗೆ ಮಾತುಕತೆ ನಡೆದಿದ್ದು, ಒಂದು ವಾರದಲ್ಲಿ ಬಿಡುಗಡೆಯಾಗಲಿದೆ. ಸುರಕ್ಷಾ ಸಾಮಗ್ರಿಗಳ ವಿತರಣೆಯಲ್ಲಿ ಯಾವುದೇ ದೋಷವಾಗಿಲ್ಲ. ಎಲ್ಲ ಸಾಮಗ್ರಿಗಳನ್ನು ನೀಡಲಾಗಿದೆ’ ಎಂದು ಉತ್ತರಿಸಿದ ಮುಖ್ಯಸ್ಥ ಹೆಸರು ಹೇಳಲು ಸಹ ಹಿಂದೇಟು ಹಾಕಿದರು.

    ಕರೊನಾ ಅವಧಿಯಲ್ಲಿ ರಜೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದಾಗ್ಯೂ ಸರ್ಕಾರ ಸರಿಯಾಗಿ ವೇತನ ಪಾವತಿಸುತ್ತಿಲ್ಲ. ಹೀಗಾಗಿ, ಜೀವನ ನಿರ್ವಹಣೆ ಕಷ್ಟವಾಗಿದೆ. ಸರಿಯಾಗಿ ಸುರಕ್ಷಾ ಸಾಮಗ್ರಿಗಳನ್ನು ನೀಡದಿರುವುದು ಸಹ ಸಮಸ್ಯೆಗೆ ಸಿಲುಕಿಸಿದೆ. ಸರ್ಕಾರ ಕೂಡಲೇ ಬಾಕಿ ವೇತನ ಪಾವತಿ ಮಾಡಿದರೆ ಅನುಕೂಲ.

    | 108 ವಾಹನ ಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts