More

    ಮುಚ್ಚಿಸಿರುವ ಕೋಳಿ ಅಂಗಡಿ ತೆರೆಯಲು ಅನುಮತಿ ಬೇಡ

    ಬೇಲೂರು: ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ಮುಚ್ಚಿಸಿರುವ ಕೋಳಿ ಅಂಗಡಿಗಳನ್ನು ತೆರೆಯಲು ಅನುಮತಿ ಕೊಡದೆ ನಗರವನ್ನು ಸ್ವಚ್ಛವಾಗಿಡಲು ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಪುರಸಭೆಯ 5 ಮತ್ತು 6ನೇ ವಾರ್ಡ್ ನಿವಾಸಿಗಳು ಪುರಸಭೆಗೆ ಮುಖ್ಯಾಧಿಕಾರಿ ಇಂದೂ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.

    ಪಾಂಡುರಂಗ ದೇಗುಲ ಸಮಿತಿ ಅಧ್ಯಕ್ಷ ಭಗವಾನ್ ಮಾತನಾಡಿ, ಪಟ್ಟಣದ ಅಂಬೇಡ್ಕರ್ ಭವನ ಪಕ್ಕದಲ್ಲಿರುವ ಕೋಳಿ ಅಂಗಡಿಗಳನ್ನು ತೆರವುಗೊಳಿಸುವಂತೆ ಈ ಹಿಂದೆಯೇ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾರೂ ಗಮನ ಹರಿಸಿರಲಿಲ್ಲ. ಇದರಿಂದಾಗಿ ಕೋಳಿ ಅಂಗಡಿಗಳ ತ್ಯಾಜ್ಯ ತಿನ್ನುವ ನಾಯಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಜತೆಗೆ ಕೋಳಿ ಅಂಗಡಿಗಳ ಮಲೀನ ನೀರು ಚರಂಡಿ ಮೂಲಕ 5 ಮತ್ತು 6ನೇ ವಾರ್ಡ್‌ನ ಚರಂಡಿಗಳಲ್ಲಿ ಹರಿದು ಗಬ್ಬು ವಾಸನೆ ಬರುತ್ತಿತ್ತು.

    ಕೆಲ ದಿನಗಳ ಹಿಂದೆ ಶಾಸಕರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಎಸ್ಸಿ-ಎಸ್ಟಿ ಹಿತರಕ್ಷಣಾ ಸಭೆಯಲ್ಲಿ ಕೋಳಿ ಅಂಗಡಿ ತೆರವಿಗೆ ದಲಿತ ಮುಖಂಡರು ಒತ್ತಾಯಿಸಿದ್ದರಿಂದಾಗಿ ಪುರಸಭೆ ಅಧಿಕಾರಿಗಳು ಕಳೆದ ವಾರ ಕೋಳಿ ಅಂಗಡಿ ತೆರೆವು ಮಾಡಿದ್ದು, ಈ ಭಾಗದ ಜನರಿಗೆ ಅನುಕೂಲವಾಗಿದೆ. ಆದರೆ ಕೋಳಿ ಅಂಗಡಿಯವರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ಅವರಿಗೆ ಕೋಳಿ ಅಂಗಡಿ ತೆರೆಯಲು ಅನುಮತಿ ನೀಡದೆ ಬೇರೆಡೆ ಜಾಗ ಕೊಟ್ಟು ಅನುಕೂಲ ಕಲ್ಪಿಸಲಿ ಎಂದರು.

    6ನೇ ವಾರ್ಡ್ ನಿವಾಸಿ ಪ್ರಕಾಶ್ ಮಾತನಾಡಿ, ಕೋಳಿ ಅಂಗಡಿಗಳಿಂದ ಇಲ್ಲಿನ ಜನರು ಸಾಕಷ್ಟು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಜತೆಗೆ ಕೋಳಿ ಅಂಗಡಿಯ ತ್ಯಾಜ್ಯ ತೊಳೆದ ನೀರು ಚರಂಡಿಗಳಲ್ಲಿ ಹರಿಯುವುದರಿಂದ ವಾಸನೆ ಮತ್ತು ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿದೆ. ಆದ್ದರಿಂದ ಅಂಗಡಿಗಳನ್ನು ಮತ್ತೆ ತೆರೆಯಲು ಅವಕಾಶ ಕೊಡದಂತೆ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದರು.

    ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಇಂದೂ, ಯಾವುದೇ ಕಾರಣಕ್ಕೂ ಇಲ್ಲಿ ಕೋಳಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವುದಿಲ್ಲ. ಈ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

    5 ಮತ್ತು 6 ನೇ ವಾರ್ಡ್ ವಾಸಿಗಳಾದ ಅಬ್ದುಲ್ ಖಾದರ್, ವಿನೀಶ್, ಚಂದ್ರೇಗೌಡ, ಗಣೇಶ್, ಪ್ರಮೋದ್, ವೀರೇಂದ್ರ, ಸುಬ್ರಮಣ್ಯ, ಕೇಶವಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts