More

    ಸರ್ವಿಸ್ ರಸ್ತೆಯಲ್ಲಿ ನೋ ಪಾರ್ಕಿಂಗ್: ವಾಹನ ನಿಲ್ಲಿಸಿದರೆ ದಂಡ ಪಡುಬಿದ್ರಿ ಗ್ರಾಪಂ ದಿಟ್ಟ ಕ್ರಮ

    ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪೇಟೆಗೆ ಆಗಮಿಸುವ ವಾಹನ ಸವಾರರೇ ಎಚ್ಚರವಹಿಸಿ, ಮನಬಂದಂತೆ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿದರೆ ಇನ್ಮುಂದೆ ಬೀಳಲಿದೆ ಜೇಬಿಗೆ ದಂಡದ ಕತ್ತರಿ.

    ಪಡುಬಿದ್ರಿ ಪೇಟೆಯಲ್ಲಿ ಸಂಚಾರ ದಟ್ಟಣೆ ನಿಭಾಯಿಸಲು ಹಾಗೂ ಸುಗಮ ಸಂಚಾರಕ್ಕಾಗಿ ಸ್ಥಳೀಯ ಗ್ರಾಪಂ ಹಾಗೂ ಪೊಲೀಸ್ ಇಲಾಖೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡರೂ ಹತೋಟಿಗೆ ತರಲು ವಿಫಲವಾಗುತ್ತಿತ್ತು. ಇದೀಗ ಸರ್ವಿಸ್ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಗ್ರಾಪಂ ಫಲಕಗಳನ್ನು ಅಳವಡಿಸುವ ಮೂಲಕ ಬಸ್ ಹಾಗೂ ಇತರ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲು ದಿಟ್ಟ ಕ್ರಮಕ್ಕೆ ಮುಂದಾಗಿದೆ. ಪೇಟೆಯ ಸರ್ವಿಸ್ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಬರುವ ಗ್ರಾಹಕರ ಸಹಿತ ಇತರ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುವ ಪರಿಣಾಮ ಪಾದಚಾರಿಗಳ ಸಹಿತ ಈ ರಸ್ತೆಯಲ್ಲಿ ಸಾಗುವ ವಾಹಗಳ ಸವಾರರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರು. ಅಲ್ಲದೆ ನಿರಂತರ ಅವಘಾತಗಳಿಗೂ ಕಾರಣವಾಗುತ್ತಿತ್ತು. ಇದನ್ನು ಮನಗಂಡು ಗ್ರಾಪಂ ಹಾಗೂ ಪೊಲೀಸ್ ಇಲಾಖೆ ಹಲವು ಸಭೆಗಳನ್ನು ನಡೆಸಿ ದಿಟ್ಟ ಕ್ರಮಕ್ಕೆ ಮುಂದಾಗಿದೆ.

    ಪಾರ್ಕಿಂಗ್ ಇಲ್ಲದ ವಾಣಿಜ್ಯ ಮಳಿಗೆಗಳು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭದ ದಿನಗಳಲ್ಲಿ ಪಡುಬಿದ್ರಿಯಲ್ಲಿ ಪ್ರತ್ಯೇಕ ಬೈಪಾಸ್ ನಿರ್ಮಾಣ ಪ್ರಸ್ತಾವನೆಯಿತ್ತಾದರೂ ರಾಜಕೀಯ ಕಾರಣಗಳಿಂದ ಅದನ್ನು ಕೈಬಿಟ್ಟು ಪೇಟೆಯಲ್ಲಿಯೇ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಈ ವೇಳೆ ಅಗತ್ಯವಿರುವಷ್ಟು ಭೂ ಸ್ವಾಧೀನಗೊಳಿಸದ ಪರಿಣಾಮ ಇದೀಗ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೆದ್ದಾರಿಗೆ ಹೊಂದಿಕೊಂಡೆ ವಾಹನ ನಿಲುಗಡೆಗೂ ಸೂಕ್ತ ವ್ಯವಸ್ಥೆ ಕಲ್ಪಿಸದೆ ಅಳಿದುಳಿದ ಕಟ್ಟಡಗಳವರು ನವೀಕರಣ ಮಾಡಿ ಮಳಿಗೆಗಳನ್ನು ತೆರೆದ ಪರಿಣಾಮ ಗ್ರಾಹಕರು ವಾಹನ ನಿಲುಗಡೆಗೆ ರಸ್ತೆಯನ್ನೇ ಅವಲಂಬಿಸುವಂತಾಗಿದೆ. ಆಟೋ ಹಾಗೂ ಟ್ಯಾಕ್ಸಿಗಳಿಗೂ ಸೂಕ್ತ ನಿಲ್ದಾಣಗಳಿಲ್ಲದೆ ಸರ್ವಿಸ್ ರಸ್ತೆಯಲ್ಲೆ ನಿಲುಗಡೆ ಮಾಡಲಾಗುತ್ತಿತ್ತು. ಸರ್ವಿಸ್ ರಸ್ತೆ ಇಕ್ಕೆಲಗಳ ಕಿರಿದಾದ ಜಾಗದಲ್ಲಿ ಅವುಗಳಿಗೆ ನಿಲ್ದಾಣ ಕಲ್ಪಿಸಲಾಗಿದೆ. ಅಲ್ಲದೆ ಪೇಟೆಯಿಂದ ಅವರಾಲು ಮಟ್ಟು ಸಂಪರ್ಕಿಸುವ 7ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ರಸ್ತೆಯಲ್ಲಿಯೂ ಆಟೋ ನಿಲ್ದಾಣಕ್ಕೆ ಅವಕಾಶ ಮಾಡಿ ಅಲ್ಲಿಯೂ ವಾಹನ ನಿಲುಗಡೆಗೆ ತೊಡಕಾಗಿದೆ. ಈ ಭಾಗದಲ್ಲಿ ಹಲವಾರು ಶಾಲಾ ಬಸ್ ಸಹಿತ ಇತರ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿದೆ, ಅಪಪಘಾತಕ್ಕೂ ಕಾರಣವಾಗುತ್ತಿದೆ. ಗ್ರಾಮಾಡಳಿತ ಹಾಗೂ ಪೊಲೀಸ್ ಇಲಾಖೆ ದಿಟ್ಟ ಕ್ರಮಗಳಿಂದ ಇದೀಗ ಗ್ರಾಹಕರು ಹಾಗೂ ದೂರದೂರುಗಳಿಗೆ ಕರ್ತವ್ಯಕ್ಕೆ ತೆರಳುವ ಮಂದಿ ವಾಹನಗಳನ್ನು ಮನೆಗಳಲ್ಲಿಯೇ ನಿಲುಗಡೆ ಮಾಡಿ ಬರಬೇಕಾದ ಪರಿಸ್ಥಿತಿ ತಂದೊಡ್ಡುತ್ತಿದೆ.

    ಪಡುಬಿದ್ರಿ ಪೇಟೆಯ ಇಕ್ಕೆಲಗಳ ಸರ್ವಿಸ್ ರಸ್ತೆಯಲ್ಲಿ ಬಸ್ ಹಾಗೂ ಇತರ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ನೋ ಪಾರ್ಕಿಂಗ್ ಫಲಕಗಳನ್ನು ಅಳವಡಿಸಲಾಗಿದೆ. ವಾಹನಗಳ ಮೇಲೆ ದಂಡ ವಿಧಿಸಲು ಫಲಕಗಳನ್ನು ಅಳವಡಿಸಿ ಕೊಡುವಂತೆ ಪೊಲೀಸರು ಬೇಡಿಕೆಯಿಟ್ಟಿದ್ದು, ಅದನ್ನು ಅಳವಡಿಸಿ ಮುಂದಿನ ಕ್ರಮಕ್ಕಾಗಿ ಅವರಿಗೆ ವಹಿಸಲಾಗಿದೆ. ಸೂಕ್ತ ಸ್ಥಳಾವಕಾಶ ದೊರೆತಲ್ಲಿ ವಾಹನ ನಿಲುಗಡೆಗೂ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.ಸುಗಮ ಸಂಚಾರ ದೃಷ್ಟಿಯಿಂದ ಜನರು ಸಹಕರಿಸಬೇಕು.
    ರವಿ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾಪಂ ಅಧ್ಯಕ್ಷ

    ಪೇಟೆಯಲ್ಲಿ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಗ್ರಾಮಾಡಳಿತದೊಂದಿಗೆ ಹಲವು ಬಾರಿ ಚರ್ಚಿಸಲಾಗಿದೆ. ಇದೀಗ ಗ್ರಾಮಾಡಳಿತ ವ್ಯವಸ್ಥೆ ಕಲ್ಪಿಸಿರುವುದರಿಂದ ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವವರ ಮೆಲೆ ದಂಡ ವಿಧಿಸಿ ಕ್ರಮಕೈಗೊಳ್ಳಲು ಅನುಕೂಲವಾಗಿದೆ. ಸಾರ್ವಜನಿಕ ವಾಹನ ನಿಲುಗಡೆಗೆ ಗ್ರಾಪಂ ಮುಂಭಾಗದಲ್ಲಿನ ಖಾಲಿ ಜಾಗದಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ವಾಣಿಜ್ಯ ಮಳಿಗೆಗಳಿಗೆ ಗ್ರಾಹಕರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ನಿರ್ದೇಶನ ನೀಡಲಾಗಿದೆ. ಪಡುಬಿದ್ರಿ ಹಾಗೂ ಉಚ್ಚಿಲ ಪೇಟೆಯಲ್ಲಿ ಹೆದ್ದಾರಿಯಲ್ಲಿ ಜನ ಸಂಚಾರಕ್ಕೆ ಅನುಕೂಲವಾಗುವಂತೆ ಬ್ಯಾರಿಕೇಡ್ ಅಳವಡಿಸುವ ಹಾಗೂ ಪಡುಬಿದ್ರಿ ಪೇಟೆಯಲಿ ಹೆದ್ದಾರಿ ಹೊಂಡ ಮುಚ್ಚಲು ಕ್ರಮವಹಿಸಲಾಗಿದೆ.
    ಪುರುಷೋತ್ತಮ್, ಪಡುಬಿದ್ರಿ ಠಾಣಾಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts