More

    ಯಾರೇ ವಿರೋಧಿಸಿದರೂ ಸಾಲ ನೀಡುವುದನ್ನು ನಿಲ್ಲಿಸಲಾರೆ

    ಶ್ರೀನಿವಾಸಪುರ: ನನ್ನ ವಿರೋಧಿಗಳು ಎಷ್ಟು ಅಡ್ಡಿಪಡಿಸಿದರೂ ಸಾಲವನ್ನು ನೀಡೇ ನೀಡುತ್ತೇನೆ. ನಿಮಗೆ ತಾಕತ್ತು ಇದ್ದರೆ ನಿಲ್ಲಿಸಿ ನೋಡೋಣ ಎಂದು ಶಾಸಕ ಕೆ.ಆರ್​.ರಮೇಶ್​ಕುಮಾರ್​ ಸವಾಲೆಸೆದರು.

    ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಡಿಸಿಸಿ ಬ್ಯಾಂಕ್​ ವತಿಯಿಂದ ಆಯೋಜಿಸಿದ್ದ ಮಹಿಳೆಯರ ಸಬಲೀಕರಣ ಶಿಬಿರಕ್ಕೆ ಚಾಲನೆ ನೀಡಿ,75 ಸಂಘಗಳಿಗೆ 3.75 ಕೋಟಿ ರೂ.ಗಳ ಸಾಲದ ಚೆಕ್​ ವಿತರಿಸಿ ಮಾತನಾಡಿದರು.

    ವಿರೋಧಿಗಳು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ತಂದು ಸಾಲ ವಿತರಣೆ ಮಾಡದಂತೆ ಪ್ರಯತ್ನಿಸಿದ್ದಾರೆ. ಅವರ ಈ ಕನಸು ನನಸಾಗುವುದಿಲ್ಲ. ಡಿಸಿಸಿ ಬ್ಯಾಂಕ್​ ಮುಚ್ಚಿದಾಗ ನೀವು ಎಲ್ಲಿ ಹೋಗಿದ್ದಿರಿ? ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಇಂಥವರನ್ನು ಬಹಳಷ್ಟು ನೋಡಿದ್ದೇನೆ. ಇದಕ್ಕೆಲ್ಲ ಕೇರ್​ ಮಾಡುವ ವ್ಯಕ್ತಿ ನಾನಲ್ಲ. ನನಗೆ ತಾಯಿ ಎಷ್ಟು ಮುಖ್ಯವೋ ಹಾಗೇ ಇಂದಿರಾಗಾಂಧಿ ಕೂಡ. ನಾನು ಅವರ ಹಾದಿಯಲ್ಲೇ ನಡೆಯುತ್ತೇನೆ ಎಂದರು.

    ನಾನು ಘನತೆ, ಗೌರವಗಳಿಂದ ಬದುಕುತ್ತಿದ್ದೇನೆ. ಕೈ ಚಾಚುವ ಪರಿಸ್ಥಿತಿ ಬಂದರೆ ನಾನು ಬದುಕಿರುವುದಿಲ್ಲ. ನಮ್ಮ ನಡತೆ ಸರಿಯಿರುವವರೆಗೂ ನಾವು ಯಾರಿಗೂ ಹೆದರುವ ಅಗತ್ಯವಿಲ್ಲ. ಸಮಾಜದಲ್ಲಿ ಮಹಿಳೆಯರು ಗೌರವಯುತವಾಗಿ ಬದುಕಬೇಕೆಂಬುದು ನನ್ನ ಉದ್ದೇಶ. ಈ ದೇಶದಲ್ಲಿ ಕೋಟ್ಯಂತರ ರೂ.ಸಾಲ ತೆಗೆದುಕೊಂಡವರು ದೇಶ ಬಿಟ್ಟು ಹೋಗಿದ್ದಾರೆ, ಅಂಥವರ ಬಗ್ಗೆ ಮಾತನಾಡದವರು ಈ ತಾಯಂದಿರಿಗೆ ಸಾಲ ನೀಡುವ ವೇಳೆ ಅಡ್ಡಿಪಡಿಸುತ್ತೀರಾ ಎಂದು ಪ್ರಶ್ನಿಸಿದರು.

    ನಮ್ಮ ತಾಯಂದಿರು ಭಯಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತದೆ. ಈಗ ಕೊಡುತ್ತಿರುವ 50 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳಿಗೆ ಸಾಲ ನೀಡುತ್ತೇವೆ. ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿ. ಮುಂದಿನ ಚುನಾವಣೆಯಲ್ಲಿ ಅಭಿವೃದ್ಧಿಗೆ ಮತ ನೀಡಿ ಎಂದರು.

    ಡಿಸಿಸಿ ಬ್ಯಾಂಕ್​ ನಿರ್ದೇಶಕರಾದ ವೆಂಕಟರೆಡ್ಡಿ, ಶಾಗತ್ತೂರು ಸುಧಾಕರ್​, ಪುರಸಭೆ ಸದಸ್ಯ ಎನ್​ಎನ್​ಆರ್​ ನಾಗರಾಜ್​, ಕಸಬಾ ಸೊಸೈಟಿ ಅಧ್ಯಕ್ಷ ಆಲಂಗಿರಿ ಅಯ್ಯಪ್ಪ, ಮುಖಂಡರಾದ ಸಂಜಯ್​ರೆಡ್ಡಿ, ಕೇತಗಾನಹಳ್ಳಿ ನಾಗರಾಜ್​, ಯಲವಹಳ್ಳಿ ಬೈರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts