ತುಮಕೂರು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ವಿಡಿಯೋ ಸಭೆ ನಡೆಸುವ ಮೂಲಕ ಮಂಡನೆಯಾದ ಬಜೆಟ್ ಹೊಸ ಯೋಜನೆಗಳು, ದೂರದೃಷ್ಟಿತ್ವ ಇಲ್ಲದೇ ನಗರವಾಸಿಗಳಿಗೆ ಭಾರಿ ನಿರಾಸೆ ತಂದಿದೆ. ಕಳೆದ ವರ್ಷದ ಬಜೆಟ್ ಪ್ರತಿಯ ಕಾಪಿ,
ಪೇಸ್ಟ್‌ನಂತಿದ್ದ ಬಜೆಟ್ ಗಾತ್ರ ಹೆಚ್ಚಾಗಿರುವುದಷ್ಟೇ ಈ ವರ್ಷದ ವಿಶೇಷ. 2020-21ನೇ ಸಾಲಿಗೆ 3.81 ಕೋಟಿ ರೂಪಾಯಿ ಉಳಿತಾಯ ಬಜೆಟ್ ಅನ್ನು ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್ ಮಂಡಿಸಿದರು.
2020-21ನೇ ಸಾಲಿನ ನಿರೀಕ್ಷಿತ ಆದಾಯ 228 ಕೋಟಿ ರೂ., ವಿವಿಧ ಬಾಬ್ತುಗಳಿಗೆ 224 ಕೋಟಿ ರೂ. ಖರ್ಚಿಗೆ ಮೀಸಲಿಟ್ಟು 3.81ಕೋಟಿ ರೂ., ಉಳಿತಾಯ ಬಜೆಟ್ ಮಂಡಿಸಲಾಯಿತು. 1, 10, 12, 17, 18, 28 ವಾರ್ಡ್‌ಗಳ ಅಭಿವೃದ್ಧಿಗೆ 90 ಲಕ್ಷ ರೂ. ವಿಶೇಷ ಪ್ಯಾಕೇಜ್ ಹಾಗೂ 4, 7 ಹಾಗೂ 14ನೇ ವಾರ್ಡ್‌ಗಳಲ್ಲಿರುವ ಮಾಂಸದ ಅಂಗಡಿಗಳನ್ನು ಸ್ಥಳಾಂತರಿಸಲು 50 ಲಕ್ಷ ರೂ. ಹಾಗೂ ತರಕಾರಿ ಮಾರುಕಟ್ಟೆಗೆ 25ಲಕ್ಷ ರೂ. ಮೀಸಲಿರಿಸಲಾಗಿದೆ.
ನಗರದ ಸೌಂದರೀಕರಣಕ್ಕೆ ‘ಹಸಿರು-ಉಸಿರು’, ಪ್ರತಿಭಾವಂತ ಬಡಮಕ್ಕಳಿಗೆ ಪ್ರೋತ್ಸಾಹ, ಅಂಗವಿಲಕರಿಗೆ ನೆರವು ಯೋಜನೆ, ಪೌರಕಾರ್ಮಿಕರ ಆರೋಗ್ಯಕ್ಕಾಗಿ ಆರೋಗ್ಯ ಸಿರಿ ಯೋಜನೆ, ಮಹಿಳಾ ಸುರಕ್ಷತೆ, ಪೇಪರ್ ಲೆಸ್ ಆಡಳಿತ, ಪಾಲಿಕೆ ಆಸ್ತಿ ರಕ್ಷಣೆ ಮತ್ತಿತರರ ಯೋಜನೆ ಮುಂದುವರಿಸಲಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಹೊರೆಯಾಗದಂತೆ ಪ್ರತೀ ಮೂರು ವರ್ಷಕ್ಕೆ ಸರ್ಕಾರದ ನಿರ್ದೇಶನದ ಮೇರೆಗೆ ಹೆಚ್ಚಿಸುತ್ತಿದ್ದ ತೆರಿಗೆಯನ್ನು ಹೆಚ್ಚಿಸದಿರಲು ಸಭೆಯಲ್ಲಿ ಸದಸ್ಯರು ಒತ್ತಾಯಿಸಿ, ನಿರ್ಣಯ ಅಂಗೀಕರಿಸಿದರು. ಮೇಯರ್ ಫರಿದಾಬೇಗಂ, ಉಪಮೇಯರ್ ಶಶಿಕಲಾ, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್ ಇದ್ದರು.
ತುಮಕೂರಿಗರ ಬಡತನ ನಿರ್ಮೂಲನೆಗೆ ಒತ್ತು: ನಗರ ಬಡತನ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ವಿದ್ಯಾರ್ಥಿ ವೇತನ, ಲ್ಯಾಪ್‌ಟಾಪ್ ಖರೀದಿ, ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ಸೇರಿ ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ 2.35ಕೋಟಿ ರೂ. ಮೀಸಲಿದೆ. ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ 70 ಲಕ್ಷ ರೂ. ಅಂಗವಿಕಲಿರಿಗಾಗಿ 48.87ಲಕ್ಷ ರೂ.; ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ದಿಬ್ಬೂರು ಬಳಿಯ 2 ಎಕರೆ ಪ್ರದೇಶದಲ್ಲಿ ಜಿ+2 ಮಾದರಿಯ ಮನೆಗಳ ನಿರ್ಮಾಣಕ್ಕಾಗಿ 150ಲಕ್ಷ ರೂ. ಮೀಸಲಿದೆ.
ವಿಡಿಯೋ ಸಂವಾದಲ್ಲಿ ಬಜೆಟ್: ಗುರುವಾರ ಬೆಳಗ್ಗೆ 11ಕ್ಕೆ ಕೃಷ್ಣ ರಾಜೇಂದ್ರ ಭವನ(ಟೌನ್‌ಹಾಲ್)ದಲ್ಲಿ ವಿಡಿಯೋ ಸಭೆ ಮೂಲಕ ಬಜೆಟ್ ಮಂಡಿಸಲಾಯಿತು. ಮೇಯರ್, ಉಪಮೇಯರ್, ಸಂಸದ, ಶಾಸಕರು, ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರು, ಆಯುಕ್ತರು, ಉಪಆಯುಕ್ತರು ಹಾಗೂ ಮುಖ್ಯಲೆಕ್ಕಾಧಿಕಾರಿ ಇದ್ದರು. ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಸರ್ವಾನುಮತದಿಂದ ಹೆಚ್ಚು ಚರ್ಚೆ ಇಲ್ಲದೆ ಬಜೆಟ್‌ಗೆ ಒಪ್ಪಿಗೆ ನೀಡಿದರು.