More

    ನೀರಿಗೆ ಭಿಕ್ಷೆ ಬೇಡುವ ಅವಶ್ಯಕತೆ ಇಲ್ಲ : ಸಂಸದ ಡಿ.ಕೆ.ಸುರೇಶ್

    ಕುಣಿಗಲ್: ಲಿಂಕ್ ಕೆನಾಲ್ ಕಾಮಗಾರಿ ತಡೆ ಹಿಡಿದಿರುವ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಂಸದ ಡಿ.ಕೆ.ಸುರೇಶ್, ಸರ್ಕಾರಕ್ಕೆ ಮರು ಟೆಂಡರ್ ಕರೆದು ತಾಲೂಕಿನ ಜನರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

    ಯಲಿಯೂರಲ್ಲಿ ಭಾನುವಾರ ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರ, ಗ್ರಾಮ ಪಂಚಾಯಿತಿ ಕಟ್ಟಡ, ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನಡಿಯ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ಸುರೇಶ್, ತಾಲೂಕಿಗೆ ನೀರು ಹರಿಸುವಂತೆ ಯಾರನ್ನೂ ಭಿಕ್ಷೆ ಬೇಡುವ ಅವಶ್ಯಕತೆ ಇಲ್ಲ, ಜಿಲ್ಲೆಗೆ ಹೇಮಾವತಿ ನೀರು ಹರಿಯಲು ವೈ.ಕೆ.ರಾಮಯ್ಯ ಮತ್ತು ತಾಲೂಕಿನ ಜನರ ಹೋರಾಟ ಕಾರಣವಾಗಿದೆ, ಇದನ್ನು ಜಿಲ್ಲೆಯ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.

    ಹೇಮಾವತಿ ಟ್ರಿಬ್ಯುನಲ್‌ನಲ್ಲಿ ಕುಣಿಗಲ್ ತಾಲೂಕಿಗೆ 3.5 ಟಿಎಂಸಿ ನೀರು ನಿಗದಿಯಾಗಿದೆ, ಆ ನೀರನ್ನು ನಾವು ಕೇಳುತ್ತಿದ್ದೇವೆ, ಶಿರಾ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ತುಮಕೂರು ಸೇರಿ ಇತರೆ ತಾಲೂಕುಗಳು ನಮ್ಮ ಪಾಲಿನ ನೀರು ಹರಿಸಿಕೊಂಡು ಅನ್ಯಾಯ ಮಾಡಿದ್ದಾರೆ, ತಾಲೂಕಿಗೆ ಆಗಿರುವ ನೀರಿನ ಅನ್ಯಾಯ ಸರಿ ಪಡಿಸಿಕೊಳ್ಳಲು ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಲಿಂಕ್ ಕೆನಾಲ್ ಕಾಮಗಾರಿಗೆ ಅನುಮೋದನೆ ನೀಡಿ ಹಣ ಒದಗಿಸಿ, ಟೆಂಡರ್ ಕರೆಯಲಾಗಿತ್ತು, ಆದರೆ ಬಿಜೆಪಿ ಸರ್ಕಾರ ಟೆಂಡರ್ ರದ್ದುಪಡಿಸಿ ತಾಲೂಕಿನ ಜನರಿಗೆ ಅನ್ಯಾಯ ಮಾಡಿದೆ, ಕುಣಿಗಲ್ ತಾಲೂಕು ತುಮಕೂರು ಜಿಲ್ಲೆಯ ಒಂದು ಭಾಗವೆಂದು ಪರಿಗಣಿಸಿ ಬಜೆಟ್‌ನಲ್ಲಿ ಲಿಂಕ್ ಕೆನಾಲ್ ಯೋಜನೆಗೆ ಆದ್ಯತೆ ನೀಡಿ, ಮರು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

    ಶಾಸಕ ಡಾ.ಎಚ್.ಡಿ.ರಂಗನಾಥ್ ಕಾರ್ಯಕ್ರಮ ಉದ್ಘಾಟಿಸಿದರು, ತಹಸೀಲ್ದಾರ್ ವಿ.ಆರ್.ವಿಶ್ವನಾಥ್, ತಾಪಂ ಇಒ ಶಿವರಾಜಯ್ಯ. ಜಿಪಂ ಸದಸ್ಯೆ ಭಾಗ್ಯಮ್ಮ, ತಾಪಂ ಸದಸ್ಯ ವಿಶ್ವನಾಥ್, ಗ್ರಾಪಂ ಅಧ್ಯಕ್ಷೆ ಮಮತಾರಾಜಣ್ಣ, ಪಿಡಿಒ ಎಸ್.ಶಂಕರ್, ಸದಸ್ಯರಾದ ಜಯಲಕ್ಷ್ಮೀ, ಜಹೀರ್ ಉದ್ದೀನ್, ವೈ.ಎಚ್.ರವೀಶ್, ಮೊಹಮದ್‌ಸಮೀಉಲ್ಲಾ, ರತ್ನಮ್ಮ, ಶಿವಣ್ಣ, ಪ್ರೇಮ, ಶಿವರಾಮು, ಮುನಿಸ್ವಾಮಿ, ಜಿಪಂ ಮಾಜಿ ಸದಸ್ಯ ಗಂಗಶಾನಯ್ಯ ಇದ್ದರು.

    ಹೋರಾಟಕ್ಕೆ ಸಜ್ಜಾಗಿ: ಲಿಂಕ್ ಕೆನಾಲ್ ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಹೋರಾಟದಿಂದ ನೀರು ಹರಿಸಿಕೊಳ್ಳದಿದ್ದರೇ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತೆ, ಹೀಗಾಗಿ ಜನ ಎಚ್ಚರಗೊಂಡು, ನಮ್ಮ ಪಾಲಿನ ನೀರಿನ ಹಕ್ಕು ಪಡೆಯಲು ಹೋರಾಟಕ್ಕೆ ಸಜ್ಜಾಗುವಂತೆ ಸಂಸದ ಡಿ.ಕೆ.ಸುರೇಶ್ ಕರೆ ನೀಡಿದರು.

    28 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹಳ್ಳಿಗಳು ಅಭಿವೃದ್ಧಿಯಾಗಬೇಕಾದರೆ ಇಚ್ಛಾಸಕ್ತಿ ಇರಬೇಕು, ಅದಿಲ್ಲದಿದ್ದರೇ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ.
    ಡಿ.ಕೆ.ಸುರೇಶ್ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts