More

    ಕೀರ್ತಿ ತಂದವರ ಕಾದು ನೋಡುವ ತಂತ್ರ: ಈ ವರ್ಷ ಯಶ್, ಸುದೀಪ್, ರಿಷಬ್ ಸಿನಿಮಾ ಇಲ್ಲ!?

    | ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

    ಕಳೆದ ವರ್ಷ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಮಳೆಯಾಗಿತ್ತು, ಥಿಯೇಟರ್​ಗಳಲ್ಲಿ ಭರ್ಜರಿ ಕಲೆಕ್ಷನ್ ಬೆಳೆಯಾಗಿತ್ತು. ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’, ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’, ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’, ಪುನೀತ್ ರಾಜಕುಮಾರ್ ಅವರ ‘ಜೇಮ್್ಸ’, ರಿಷಬ್ ಶೆಟ್ಟಿ, ನಟಿಸಿ ನಿರ್ದೇಶಿಸಿದ್ದ ‘ಕಾಂತಾರ’ ಚಿತ್ರಗಳು 100 ಕೋಟಿ ರೂ.ನಿಂದ 1200 ಕೋಟಿ ರೂ.ವರೆಗೂ ಗಳಿಕೆ ಮಾಡಿಕೊಂಡು, ಗೆಲುವಿನ ನಗೆ ಬೀರಿದ್ದವು. ಜತೆಗೆ ‘ಗಂಧದ ಗುಡಿ’, ‘ಗಾಳಿಪಟ 2’, ‘ವೇದ’ ಸೇರಿದಂತೆ ಹಲವು ಚಿತ್ರಗಳು ರಾಜ್ಯಾದ್ಯಂತ ಸದ್ದು ಮಾಡಿದ್ದವು. ಈ ವರ್ಷವೂ ಇದೇ ಗೆಲುವು ಮರುಕಳಿಸಲಿದೆ ಎಂಬ ಭರವಸೆ ಹಲವರದು. ಆದರೆ, 2022ರಲ್ಲಿ ಗೆಲುವಿನ ಸಿಹಿ ಸವಿದ ಸ್ಟಾರ್ ನಟರು, ಇದುವರೆಗೂ ಹೊಸ ಸಿನಿಮಾ ಘೋಷಿಸಿಲ್ಲ. ಪ್ಯಾನ್ ಇಂಡಿಯಾ, ದೊಡ್ಡ ಬಜೆಟ್ ಅಂತ ಹೋದರೆ ಸಿನಿಮಾಗಳು ಈಗ ಘೋಷಣೆಯಾದರೂ, ಸಿದ್ಧತೆ, ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್, ಪ್ರಚಾರ ಅಂತ ಬಿಡುಗಡೆಯಾಗಲು ಒಂದು ವರ್ಷ ಸಮಯ ಬೇಕು. ಹೀಗಾಗಿ 2023ರಲ್ಲಿ ಯಶ್, ಕಿಚ್ಚ ಸುದೀಪ್, ರಿಷಬ್ ಶೆಟ್ಟಿ ಸಿನಿಮಾಗಳು ತೆರೆಗೆ ಬರುವುದು ಕಷ್ಟಸಾಧ್ಯ.

    ಉಳಿದಂತೆ ರಕ್ಷಿತ್ ಶೆಟ್ಟಿ ಅಭಿನಯದ ಹೇಮಂತ್ ರಾವ್ ನಿರ್ದೇಶಿಸುತ್ತಿರುವ ‘ಸಪ್ತಸಾಗರದಾಚೆ ಎಲ್ಲೋ’, ಗಣೇಶ್, ಪ್ರೀತಮ್ ಗುಬ್ಬಿ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಬಾನದಾರಿಯಲ್ಲಿ’, ಹಾಗೆಯೇ ಶಿವರಾಜಕುಮಾರ್ ನಟಿಸುತ್ತಿರುವ ಶ್ರೀನಿ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಘೋಸ್ಟ್’ ತೆರೆಗೆ ಬರಲಿದೆ. ಇನ್ನು ಆರ್. ಚಂದ್ರು ನಿರ್ದೇಶನದ ಉಪೇಂದ್ರ, ಕಿಚ್ಚ ಸುದೀಪ್ ಅಭಿನಯದ ‘ಕಬ್ಜಾ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಆದರೆ, ಕಾರಣಾಂತರಗಳಿಂದ ಮುಂದೂಡಲ್ಪಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಹಾಗೆಯೇ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಚಿತ್ರದ ಚಿತ್ರೀಕರಣ ಸಹ ಭರದಿಂದ ಸಾಗಿದೆ. ‘ಉಪ್ಪಿ 2’ ಬಿಡುಗಡೆಯಾಗಿ ಎಂಟು ವರ್ಷಗಳ ನಂತರ ಉಪೇಂದ್ರ ಮತ್ತೆ ‘ಯುಐ’ಗೆ ಆಕ್ಷನ್ ಕಟ್ ಹೇಳುತ್ತಿರುವುದು, ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಮೂಡಿಸಿದೆ. ಮತ್ತೊಂದೆಡೆ ಧ್ರುವ ಸರ್ಜಾ, ಎ.ಪಿ. ಅರ್ಜುನ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ‘ಮಾರ್ಟಿನ್’ ಕೂಡ ಇನ್ನು ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಜತೆಗೆ ಧ್ರುವ ಸರ್ಜಾ, ಪ್ರೇಮ್ ಕಾಂಬಿನೇಷನ್ ಸಿನಿಮಾ ‘ಕೆಡಿ’ ಕೂಡ ಇದೇ ವರ್ಷದಂತ್ಯಕ್ಕೆ ತೆರೆಗೆ ಬಂದರೂ ಆಶ್ಚರ್ಯವಿಲ್ಲ ಎನ್ನಲಾಗಿದೆ.

    ಯಶ್​ಗೆ ನಿಧಾನವೇ ಪ್ರಧಾನ!
    ‘ಕೆಜಿಎಫ್ ಚಾಪ್ಟರ್ 2; ಬಿಡುಗಡೆಯಾಗಿ ಒಂಬತ್ತು ತಿಂಗಳಾದರೂ ಯಶ್ ಹೊಸ ಸಿನಿಮಾ ಘೋಷಣೆಯಾಗಿಲ್ಲ. ಹೊಸ ಸಿನಿಮಾ ಅನೌನ್ಸ್ ಮಾಡಿ ಎಂದು ಪ್ಯಾನ್ ಇಂಡಿಯಾ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರನ್ನು ಕೇಳುತ್ತಿದ್ದಾರೆ. ಯಶ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ ಆಗಲಿದೆ ಎನ್ನಲಾಗಿತ್ತಾದರೂ. ಯಶ್, ‘ನಿಮಗಾಗಿ ವಿಭಿನ್ನವಾಗಿರುವದೇನನ್ನೋ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಪ್ರಯತ್ನ ಮಾಡುತ್ತಿದ್ದೇನೆ. ಇನ್ನು ಸ್ವಲ್ಪ ಕಾಲಾವಕಾಶ ಕೊಡಿ’ ಎಂದು ಓಪನ್ ಲೆಟರ್ ಮೂಲಕ ಹೇಳಿಕೊಂಡಿದ್ದರು. ಅದರ ಬೆನ್ನಲ್ಲೇ ಕೆವಿಎನ್ ಪ್ರೊಡಕ್ಷನ್ಸ್​ನ ವೆಂಕಟ್ ಕೋಣಂಕಿ ಭೇಟಿಯಾದ ಯಶ್ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಬರೋಬ್ಬರಿ 400 ಕೋಟಿ ರೂ. ಬಜೆಟ್​ನಲ್ಲಿ ‘ಮಫ್ತಿ’ ಖ್ಯಾತಿಯ ನರ್ತನ್ ನಿರ್ದೇಶನದಲ್ಲಿ ಯಶ್ 19ನೇ ಸಿನಿಮಾ ಮೂಡಿಬರಲಿದೆ ಎನ್ನಲಾಗಿದೆ. ಇನ್ನಷ್ಟೇ ಈ ಬಗ್ಗೆ ಅಧಿಕೃತ ಘೋಷಣೆಯಾಗಬೇಕಿದೆ.

    ಕಥೆ ಕೇಳುತ್ತಿದ್ದಾರೆ ಕಿಚ್ಚ ಸುದೀಪ್
    ಕಳೆದ ಜುಲೈನಲ್ಲಿ ಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಬಿಡುಗಡೆಯಾಗಿತ್ತು. ಇದೀಗ ಆರು ತಿಂಗಳಾಗಿವೆ, ಹೊಸ ಸಿನಿಮಾ ಅನೌನ್ಸ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅದರ ನಡುವೆಯೇ ಇತ್ತೀಚೆಗಷ್ಟೆ ಸುದೀಪ್, ನಿರ್ದೇಶಕ ನಂದಕಿಶೋರ್, ನಿರ್ವಪಕ ಕಾರ್ತಿಕ್ ಗೌಡರನ್ನು ಭೇಟಿಯಾಗಿದ್ದರು. ಫೋಟೋಗಳು ವೈರಲ್ ಆದಂತೆಯೇ ಇವರ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಬರಲಿದೆ ಎಂದು ಹಲವರು ಭಾವಿಸಿದ್ದರು. ಆದರೆ, ಕರ್ನಾಟಕ ಚಲನಚಿತ್ರ ಕಪ್ ಆಯೋಜನೆಯ ಕುರಿತ ಮಾತುಕತೆಗೆ ಭೇಟಿಯಾಗಿದ್ದರು ಎಂಬ ಸ್ಪಷ್ಟನೆ ದೊರೆತಿತ್ತು. ಅದರ ಬೆನ್ನಲ್ಲೇ ಸದ್ಯ ಕಥೆ ಕೇಳುತ್ತಿದ್ದು, ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಅನೌನ್ಸ್ ಮಾಡುವುದಾಗಿ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.

    ಅಪ್ಪಣೆ ನೀಡಿದ ದೈವ, ಮುಂದೆ?
    ಭಾರತೀಯ ಚಿತ್ರರಂಗಕ್ಕೆ ಕಡಿಮೆ ಬಜೆಟ್​ನಲ್ಲಿ ನಿರ್ವಣವಾಗಿ, ದೊಡ್ಡ ಕಲೆಕ್ಷನ್ ಮಾಡುವ ಕುರಿತು ಸಿನಿಮಾ ಪಾಠ ಮಾಡಿದ ಹೆಗ್ಗಳಿಕೆ ಕನ್ನಡದ ‘ಕಾಂತಾರ’ ಚಿತ್ರಕ್ಕೆ ಸಲ್ಲುತ್ತದೆ. ಮೊದಲ ಚಿತ್ರದ ಸಕ್ಸಸ್ ಬಳಿಕ ನಿರ್ದೇಶಕ, ನಟ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್​ನ ನಿರ್ವಪಕ ವಿಜಯ್ ಕಿರಗಂದೂರು ಮತ್ತೆ ದೈವದ ಬಳಿ ‘ಕಾಂತಾರ 2’ ಮಾಡುವ ಕುರಿತು ಅಪ್ಪಣೆ ಕೇಳಿದ್ದಾರೆ. ಅದಕ್ಕೆ ದೈವ ಸಹ ಅಪ್ಪಣೆ ನೀಡಿದ್ದು, ಸದ್ಯ ರಿಷಬ್ ಶೆಟ್ಟಿ ಕಥೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts