More

    ಚೀನಾ ವಿರುದ್ಧ ಮಾತಾಡಿದ್ರೆ ‘ಟಿಕ್​ಟಾಕ್​’ ಆ್ಯಪ್​ ಸಹಿಸೋಲ್ಲ; ಕಾಮಿಡಿಯನ್​ ನಜಮಾ ಆಪಿಗೆ ಶಾಕ್​ !

    ನವದೆಹಲಿ: ದೇಶದ ಸಾಮಾಜಿಕ ಆಗುಹೋಗುಗಳನ್ನು ಅತ್ಯಂತ ಹಾಸ್ಯಮಯವಾಗಿ ಪ್ರಸ್ತುತಪಡಿಸುವ ಖ್ಯಾತ ಕಾಮಿಡಿಯನ್​, ಮಿಮಿಕ್ರಿ ಕಲಾವಿದೆ ಸಲೋನಿ ಗೌರ್​, ಚೀನಾದ ಟಿಕ್​ಟಾಕ್ ಆ್ಯಪ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಜಮಾ ಆಪಿ ಎಂಬ ಹೆಸರಿನಲ್ಲಿ ಟ್ವಿಟರ್​, ಯೂಟ್ಯೂಬ್, ಇನ್ಸ್ಟಾಗ್ರಾಂ, ಟಿಕ್​ಟಾಕ್​ ಖಾತೆಗಳನ್ನು ಹೊಂದಿರುವ ಸಲೋನಿ ಗೌರ್​ ಅವರು, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಹಾಸ್ಯಮಯವಾಗಿ ವಿವರಿಸಿ, ಅದರ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಇವರಿಗೆ ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಇದ್ದಾರೆ.
    ಆದರೆ 20 ವರ್ಷ ವಯಸ್ಸಿನ ಕಾಮಿಡಿಯನ್​ ನಜಮಾ ಅವರಿಗೆ ಈಗ ಚೀನಾದ ಆ್ಯಪ್​ ಟಿಕ್​ಟಾಕ್​ ಮೇಲೆ ಸಿಕ್ಕಾಪಟೆ ಕೋಪ ಬಂದಿದೆ. ಅದಕ್ಕೆ ಕಾರಣವನ್ನೂ ಅವರು ಹೇಳಿದ್ದಾರೆ.

    ಲಡಾಖ್​ನಲ್ಲಿ ಚೀನಾ ಭಾರತದೊಂದಿಗೆ ಗಡಿ ಕ್ಯಾತೆ ತೆಗೆದು, ಒಂದೇ ಸಮನೆ ಸೈನಿಕರ ಜಮಾವಣೆ ಮಾಡುತ್ತಿದೆ. ಈ ಬಗ್ಗೆ ನಜಮಾ ಒಂದು ವಿಡಿಯೋ ಮಾಡಿದ್ದರು. ಅದರಲ್ಲಿ ಚೀನಾವನ್ನು ಟೀಕಿಸಿದ್ದರು. ಚೀನಾದ ಗಡಿ ಕ್ಯಾತೆಯನ್ನು ತಮಾಷೆ ಮಾಡಿದ್ದರು.

    ಚೀನಾ ಮೊದಲು ಕೊಬ್ಬಿನ ಅಂಶಗಳುಳ್ಳ ಆಹಾರವನ್ನು ಭಾರತಕ್ಕೆ ಕಳಿಸಿ ಇಲ್ಲಿನವರ ಕರುಳು, ಹೊಟ್ಟೆ ಹಾಳು ಮಾಡಿತು. ಬಳಿಕ ಅಗ್ಗದ ಫೋನ್​, ಟಿಕ್​ಟಾಕ್​ನಂತಹ ಆ್ಯಪ್​ಗಳನ್ನು ಕಳಿಸಿ ಯುವಜನರನ್ನು ಹಾಳು ಮಾಡಿತು. ಅದಾದ ಮೇಲೆ ಕರೊನಾವನ್ನು ಕಳಿಸಿ ಇಡೀ ದೇಶ ಬಂದ್ ಆಗುವಂತೆ ಮಾಡಿತು. ಈಗ ಎಲ್ಲವೂ ಮುಗಿದ ಮೇಲೆ, ನಿಧಾನವಾಗಿ ನಮ್ಮ ಭೂಮಿ ಮೇಲೆ ಕಣ್ಣು ಹಾಕಿ, ಜಗಳ ತೆಗೆದಿದೆ ಎಂದು ಜೋಕ್​ ಮಾಡುತ್ತಲೇ ಚೀನಾಕ್ಕೆ ಚಾಟಿ ಬೀಸಿದ್ದರು. ಹಾಗೇ, ಚೀನಾದ ಗಡಿ ಕ್ಯಾತೆಯ ಬಗ್ಗೆ ಕೂಡ ನಮ್ಮ ಬಾಲಿವುಡ್​ನಲ್ಲಿ ಸಿನಿಮಾ ನಿರ್ಮಾಣವಾಗುತ್ತದೆ ನೋಡಿ ಎಂದು ಹೇಳಿದ್ದರು. ವಿಡಿಯೋವನ್ನು ಟಿಕ್​ಟಾಕ್​, ಯೂಟ್ಯೂಬ್​ಗಳಲ್ಲಿ ಅಪ್ಲೋಡ್ ಮಾಡಿದ್ದರು.

    ಆದರೆ ಟಿಕ್​​ಟಾಕ್​ ಈ ವಿಡಿಯೋವನ್ನು ಸಹಿಸಿಕೊಳ್ಳಲಿಲ್ಲ. ಚೀನಾ ವಿರುದ್ಧದ ಮಾತುಗಳು ಇದ್ದ ವಿಡಿಯೋವನ್ನು ಅದು ಡಿಲೀಟ್ ಮಾಡಿದೆ. ಸಲೋನಿ ಗೌರ್​ ಅವರು ಟ್ವೀಟ್​ ಮೂಲಕ ಇದನ್ನು ತಿಳಿಸಿದ್ದಾರೆ.
    ಚೀನಾದ ಬಗ್ಗೆ ಜೋಕ್​ ಮಾಡಿ, ಅಪ್ಲೋಡ್ ಮಾಡಿದ್ದ ವಿಡಿಯೋವನ್ನು ಟಿಕ್​ಟಾಕ್​ ಡಿಲೀಟ್ ಮಾಡಿದೆ. ‘ಯಥಾ ದೇಶ, ತಥಾ ಆ್ಯಪ್​’ ಎಂದು ಮತ್ತೆ ಕಾಮಿಡಿ ಜೋಕ್​ ಮಾಡಿದ್ದಾರೆ. ಟಿಕ್​ಟಾಕ್​ನಲ್ಲಿ ನಮಗೆ ಮಾತನಾಡುವ ಸ್ವಾತಂತ್ರ್ಯವೇ ಇಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts