More

    ಗಡಿ ರಸ್ತೆಗಳಲ್ಲಿ ನಿರ್ಬಂಧ ಕಠಿಣ: ಕೋವಿಡ್ ನೆಗೆಟಿವ್ ವರದಿ ಇದ್ದವರಿಗಷ್ಟೇ ಪ್ರವೇಶ

    ಮಂಗಳೂರು/ಉಳ್ಳಾಲ: ಕೇರಳದಲ್ಲಿ ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೋಮವಾರದಿಂದ ಗಡಿ ರಸ್ತೆಗಳಲ್ಲಿ ನಿರ್ಬಂಧವನ್ನು ಮತ್ತಷ್ಟು ಕಠಿಣಗೊಳಿಸಿದೆ.
    ಕಾಸರಗೋಡು ಜಿಲ್ಲೆಯಿಂದ ದ.ಕ. ಸಂಪರ್ಕಕ್ಕೆ ಸುಮಾರು 16 ರಸ್ತೆಗಳಿದ್ದು, ಎಲ್ಲ ಸಣ್ಣ ಮಾರ್ಗಗಳನ್ನೂ ಬಂದ್ ಮಾಡಲಾಗಿದೆ. ಆರ್‌ಟಿ-ಪಿಸಿಆರ್ ಪರೀಕ್ಷೆ ನೆಗೆಟಿವ್ ವರದಿ ಇರುವವರು, ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಆ್ಯಂಬುಲೆನ್ಸ್, ಸರಕು ಸಾಗಾಟದ ವಾಹನಗಳು ಹೊರತುಪಡಿಸಿ ಇತರ ಎಲ್ಲ ವಾಹನಗಳಿಗೆ ಕರ್ನಾಟಕ ಪ್ರವೇಶ ನಿರಾಕರಿಸಲಾಗಿದೆ.

    ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಲ್ಲಿ ಉಚಿತ ಆರ್‌ಟಿ ಪಿಸಿಆರ್ ಪರೀಕ್ಷೆ ವ್ಯವಸ್ಥೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ಬೆಳಗ್ಗೆ 9 ಗಂಟೆಗೆ ಕೈಬಿಟ್ಟ ಕಾರಣ ದೈನಂದಿನ ಅಗತ್ಯಗಳಿಗೆ ದಕ್ಷಿಣ ಕನ್ನಡಕ್ಕೆ ಆಗಮಿಸುವವರಿಗೆ ಸಮಸ್ಯೆಯಾಯಿತು. ಈ ಹಿಂದೆ ಕೋವಿಡ್ ಟೆಸ್ಟ್ ವರದಿ ಇಲ್ಲದವರಿಗೆ ಗಡಿ ಭಾಗದಲ್ಲೇ ಪರೀಕ್ಷೆ ಮಾಡಿಸಿ ಕರ್ನಾಟಕ ಪ್ರವೇಶಿಸಲು ಅವಕಾಶವಿತ್ತು. ಸೋಮವಾರ ವರದಿ ಇಲ್ಲದವರನ್ನು ವಾಪಸ್ ಕಳುಹಿಸಲಾಯಿತು. ಪ್ರತಿಯೊಬ್ಬರ ಮೇಲೂ ಹದ್ದಿನ ಕಣ್ಣಿಟ್ಟು ತಪಾಸಣೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತು.

    ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಭಂಡಾರು, ಡಿಸಿಪಿ ಹರಿರಾಂ ಶಂಕರ್ ಸಹಿತ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ಮಾರ್ಗದರ್ಶನ ನೀಡಿದರು.
    ಕರ್ನಾಟಕದಲ್ಲಿ ಪರೀಕ್ಷೆ ಬರೆಯಲಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಹಾಲ್ ಟಿಕೆಟ್ ಅಥವಾ ಕಾಲೇಜಿನ ಗುರುತು ಕಾರ್ಡ್ ನೋಡಿ ರಾಜ್ಯ ಪ್ರವೇಶಿಸಲು ಅವಕಾಶ ನೀಡಲಾಯಿತು.

    ಪ್ರತಿಭಟನೆ, ಓರ್ವ ವಶಕ್ಕೆ: ತಲಪಾಡಿಯಲ್ಲಿ ಕೇರಳದ ಪ್ರಯಾಣಿಕರನ್ನು ಹಿಂದಕ್ಕೆ ಕಳುಹಿಸುತ್ತಿರುವ ಕರ್ನಾಟಕ ಸರ್ಕಾರದ ಕ್ರಮ ಖಂಡಿಸಿ ಕಾಸರಗೋಡಿನ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. 15ರಷ್ಟಿದ್ದ ಜನರು ಹತ್ತು ನಿಮಿಷ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ದ.ಕ. ಜಿಲ್ಲಾಡಳಿತದ ವಿರುದ್ಧ ತೀವ್ರ ರೂಪದಲ್ಲಿ ಆಕ್ರೋಶ ಹೊರಹಾಕಿದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದರು.

    ಪ್ರತಿದಿನ ಬರುವವರಿಗೆ 7 ದಿನಕ್ಕೊಮ್ಮೆ ಪರೀಕ್ಷೆ: ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕು ಪತ್ತೆಯಾಗಿದೆ. ಕೇರಳಕ್ಕೆ ಗಡಿಯನ್ನು ಹೊಂದಿಕೊಂಡಿರುವುದು ಮತ್ತು ಆ ಭಾಗದ ಜನರು ವಿವಿಧ ಕೆಲಸ, ಕಾರ್ಯಗಳಿಗೆ ಮಂಗಳೂರಿಗೆ ಬರುತ್ತಿರುವುದು ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು. ಅಲ್ಲಿಯೇ ಪರೀಕ್ಷೆ ನಡೆಸಿ 72 ಗಂಟೆಗಳ ಒಳಗಿನ ವರದಿ ತರಬೇಕು. ದೈನಂದಿನ ಪ್ರಯಾಣಿಕರು 7 ದಿನಕ್ಕೊಮ್ಮೆ ಪರೀಕ್ಷೆ ಮಾಡಿಸಿದರೆ ಸಾಕು. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿಕೊಂಡು ಮಂಗಳೂರಿಗೆ ಬರಬಹುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts