More

    ಆಲಂಕಾರಲ್ಲಿ ಎಂಡೋ ಪುನರ್ವಸತಿ ಕೇಂದ್ರ ಮರೀಚಿಕೆ

    – ಪ್ರವೀಣ್‌ರಾಜ್ ಕೊಲ ಕಡಬ
    ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಂಡೋ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ತೆರೆಯಲು ಜಾಗ ಕಾದಿರಿಸಿ ಏಳು ವರ್ಷ ಕಳೆದರೂ ನಿರ್ಮಾಣ ಮಾತ್ರ ಶೂನ್ಯ…

    ಕೇಂದ್ರ ಸ್ಥಾಪಿಸಲು ಏಳು ವರ್ಷದ ಹಿಂದೆ ಸರ್ಕಾರ ಮುಂದಾಗಿತ್ತು. ಅಂದಿನ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಆರೋಗ್ಯ ಇಲಾಖೆ ಆಯುಕ್ತ ಎ.ಇ.ಪಾಟೀಲ್ ಸ್ಥಳ ಪರಿಶೀಲನೆ ನಡೆಸಿದ್ದರು. ಇದಕ್ಕಾಗಿ ಪಂಚಾಯಿತಿ ಐದು ಎಕರೆ ಜಾಗ ಮೀಸಲಿಟ್ಟಿತ್ತು. ಪಹಣಿಯೂ ಆಗಿದೆ. ಆದರೆ ಪುನರ್ವಸತಿ ಕೇಂದ್ರ ಸ್ಥಾಪನೆ ಕನಸಾಗಿ ಉಳಿದಿದೆ.

    ಎಂಡೋಸಲ್ಫಾನ್ ವಿಷದಿಂದ ಆಗಿರುವ ಅವಾಂತರಕ್ಕೆ ಸರ್ಕಾರದ ಮಟ್ಟದಲ್ಲಿಯೇ ಪರಿಹಾರ ಸಿಗಬೇಕೆಂಬ ಉದ್ದೇಶವನ್ನಿಟ್ಟುಕೊಂಡು 2008ರಲ್ಲಿ ಆಲಂಕಾರಿನಲ್ಲಿ ಎಂಡೋ ವಿರೋಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂತು. ಹೋರಾಟದ ಫಲವಾಗಿ 2012ರಲ್ಲಿ ಕೊಲದ ರೇಷ್ಮೆ ಇಲಾಖೆ ಕಟ್ಟಡದಲ್ಲಿ ಆಲಂಕಾರು ವಿಕಲಚೇತನರ ಪಾಲನಾ ಕೇಂದ್ರ ಹೆಸರಿನಲ್ಲಿ ಯಾತನಾಮಯ ಸ್ಥಿತಿಯಲ್ಲಿದ್ದ ಮಕ್ಕಳ ಪಾಲನಾ ಕೇಂದ್ರ ಆರಂಭಗೊಂಡಿತು. ಇದನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಉದ್ಘಾಟಿಸಿದ್ದರು. ಬಳಿಕ ಎಂಡೋ ಪುನರ್ವವಸತಿ ಕೇಂದ್ರದ ಕೂಗು ಕೇಳಿಬಂತು.

    ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಉಜಿರೆ, ಪುತ್ತೂರು ತಾಲೂಕಿನ ಪಾಣಾಜೆ, ಸುಳ್ಯ ತಾಲೂಕಿನ ಬೆಳ್ಳಾರೆ, ಕಡಬ ತಾಲೂಕಿನ ಆಲಂಕಾರು ಪ್ರದೇಶದಲ್ಲಿ ಎಂಡೋ ಪುನರ್ವಸತಿ ಕೇಂದ್ರ ಸ್ಥಾಪಿಸುವಂತೆ ಸಂತ್ರಸ್ತರಿಂದ ಒತ್ತಾಯವಿತ್ತು. ಈ ಪೈಕಿ ಆಲಂಕಾರಿನಲ್ಲಿ ಮಾತ್ರ ಜಾಗ ನಿಗದಿಪಡಿಸಲು ಸಾಧ್ಯವಾಗಿದೆ. ಕೊಕ್ಕಡ, ಪಾಣಾಜೆ, ಬೆಳ್ಳಾರೆಯಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ಹಳೆಯ ಸರ್ಕಾರಿ ಕಟ್ಟಡವನ್ನು ಬಳಕೆ ಮಾಡಿಕೊಂಡು ಪುನರ್ವಸತಿ ತೆರೆಯಲು ಅನುವು ಮಾಡಿಕೊಡುವಂತೆ ಆರೋಗ್ಯ ಇಲಾಖೆ ಸರ್ಕಾರಕ್ಕೆ ಬರೆದುಕೊಂಡರೂ ಪ್ರಯೋಜನವಾಗಿಲ್ಲ. ಈ ಪೈಕಿ ಬೆಳ್ತಂಗಡಿಯ ಉಜಿರೆಯಲ್ಲಿ ಎನ್‌ಜಿಒ ಮತ್ತು ಸರ್ಕಾರ ವತಿಯಿಂದ ಪಾಲನಾ ಕೇಂದ್ರ ತೆರೆಯಲಾಗಿದೆ.

    ಸೌಲಭ್ಯ ವಂಚಿತ ಸಂತ್ರಸ್ತರು: ಹೋರಾಟ ಸಮಿತಿಯ ಒತ್ತಡಕ್ಕೆ ಮಣಿದು ಕಡಬ ತಾಲೂಕಿನ ಕೊಲದಲ್ಲಿ ಪಾಲನಾ ಕೇಂದ್ರ ಆರಂಭಿಸಲಾಯಿತು. ಆದರೆ ಈ ಕೇಂದ್ರದಲ್ಲಿ ಬೆರಳೆಣಿಕೆಯಷ್ಟು ಸಂತ್ರಸ್ತರಿಗೆ ಮಾತ್ರ ಸೌಲಭ್ಯ ಸಿಗುತ್ತಿದೆ. ಶೇ.80ಷ್ಟು ಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹಾಸಿಗೆ ಹಿಡಿದ ಸಂತ್ರಸ್ತರನ್ನು ಇಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಚಟುವಟಿಕೆಯಿಂದಿರುವ ಸಂತ್ರಸ್ತರನ್ನು ಮಾತ್ರ ಆರೈಕೆ ಮಾಡಲಾಗುತ್ತಿದೆ.

    ಕೊಕ್ಕಡದಲ್ಲಿ ಹೋರಾಟ: 2000ರಲ್ಲಿ ಕೊಕ್ಕಡದಲ್ಲಿ ಎಂಡೋ ಸಂತ್ರಸ್ತರ ಹೋರಾಟ ಸಮಿತಿ ಅಸ್ತತ್ವಕ್ಕೆ ಬಂದು ಅಂದಿನ ಮುಖ್ಯಮಂತ್ರಿ ಧರಂಸಿಂಗ್ ಅವರಿಗೆ ಒತ್ತಡ ಹಾಕಲಾಯಿತು. ಈ ವಿಚಾರ ವಿಧಾನ ಸಭೆಯಲ್ಲಿಯೂ ಪ್ರತಿಧ್ವನಿಸಿತ್ತು. ಆಗ ವಿಧಾನಪರಿಷತ್ ಸದಸ್ಯೆಯಾಗಿದ್ದ ಶೋಭಾ ಕರಂದ್ಲಾಜೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೊಕ್ಕಡಕ್ಕೆ ಭೇಟಿ ನೀಡಿ ವರದಿ ನೀಡಿದರು. ಬಳಿಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದಕ್ಕೆ ಸ್ಪಂದಿಸಿದರು. ಕೊಕ್ಕಡದಲ್ಲಿ ಪಾಲನ ಕೇಂದ್ರವೂ ಆರಂಭವಾಯಿತು.

    ಆಲಂಕಾರಿನಲ್ಲಿ ಎಂಡೋ ಸಂತ್ರಸ್ತರಿಗೆ ಪುನರ್ವಸತಿ ತೆರೆಯಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ಎಕರೆ ಮೀಸಲಿಡಲಾಗಿದೆ. ಪಹಣಿಯು ಆಗಿದೆ. ಕೇಂದ್ರ ತೆರೆಯಲು ಎಸ್ಟಿಮೇಟ್ ಮಾಡಿ ಈಗಾಗಲೇ ಸರ್ಕಾರಕ್ಕೆ ವರದಿ ಕಳುಹಿಸಿಕೊಡಲಾಗಿದೆ. ಮತ್ತೊಮ್ಮೆ ಸರ್ಕಾರಕ್ಕೆ ವರದಿ ಕೊಡಲು ಕ್ರಮಕೈಗೊಳ್ಳಲಾಗುವುದು.
    -ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ ದ.ಕ ಜಿಲ್ಲೆ

    ಈಗೀರುವ ಪಾಲನಾ ಕೇಂದ್ರದಲ್ಲಿ ಮಲಗಿದಲ್ಲೇ ಇದ್ದ ಎಲ್ಲ ಎಂಡೋ ಸಂತ್ರಸ್ತರನ್ನು ಪಾಲನೆ ಮಾಡಲು ಸಾಧ್ಯವಿಲ್ಲ. ಅಲ್ಲದೆ ಸಾಕಷ್ಟು ಹಣ ಸಿಬ್ಬಂದಿ ವೇತನ ಮತ್ತು ವಾಹನ ಬಾಡಿಗೆಗಾಗಿ ವ್ಯಯವಾಗುತ್ತಿದೆ. ಆಲಂಕಾರಿನಲ್ಲಿ ಈಗಾಗಲೇ ಶಾಶ್ವತ ಪುನರ್ವಸತಿ ಕೇಂದ್ರಕ್ಕಾಗಿ 5 ಎಕರೆ ಮೀಸಲಿರಿಸಿದ್ದ ಜಾಗದಲ್ಲಿ ಸರ್ಕಾರ ಆದಷ್ಟು ಬೇಗ ಎಚ್ಚೆತ್ತು ಕಟ್ಟಡವನ್ನು ನಿರ್ಮಿಸಿ ಶಾಶ್ವತ ಪುನರ್ವಸತಿ ಕೇಂದ್ರ ಆರಂಭಿಸಬೇಕು.
    -ಸಂಜೀವ ಕಬಕ, ಸಾಮಾಜಿಕ ಹೋರಾಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts