More

    ಜಿಪಂ ಅಧ್ಯಕ್ಷೆ ವಿರುದ್ಧ ಮತ್ತೊಮ್ಮೆ ಅವಿಶ್ವಾಸ ; ಸೂಪರ್ ಸೀಡ್ ಗುಮ್ಮಕ್ಕೆ ಹೆದರಿದ ಸದಸ್ಯರು

    | ಜಗನ್ನಾಥ್ ಕಾಳೇನಹಳ್ಳಿ ತುಮಕೂರು

    ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಲತಾ ವಿರುದ್ಧ ಮತ್ತೊಮ್ಮೆಅವಿಶ್ವಾಸ ಗೊತ್ತುವಳಿ ಮಂಡಿಸಲು ತೆರೆಮರೆಯಲ್ಲಿ ಮತ್ತೆ ರಾಜಕೀಯ ಕಸರತ್ತು ಆರಂಭವಾಗಿದೆ. ಸೂಪರ್‌ಸೀಡ್ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ನ.20ರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿರುವ ಬಿಜೆಪಿ, ಜೆಡಿಎಸ್ ಸದಸ್ಯರು ಶತಾಯಗತಾಯ ಲತಾ ಅವರನ್ನು ಅಧ್ಯಕ್ಷ ಗಾದಿಯಿಂದ ಕೆಳಗಿಳಿಸಲು ಪಣತೊಟ್ಟಿದ್ದಾರೆ.

    2 ತಿಂಗಳ ಹಿಂದಷ್ಟೇ ಅಧ್ಯಕ್ಷೆ ಲತಾ ವಿರುದ್ಧ ಆಡಳಿತರೂಢ ಜೆಡಿಎಸ್, ಬಿಜೆಪಿ ಜತೆಗೆ ಕಾಂಗ್ರೆಸ್ ಸದಸ್ಯರೂ ಅವಿಶ್ವಾಸ ನಿರ್ಣಯ ಮಂಡಿಸಿದ್ದರಾದರೂ ಅ.15ರ ಅವಿಶ್ವಾಸ ಗೊತ್ತುವಳಿ ಸಭೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ‘ಪದಚ್ಯುತಿ’ ಪ್ರಹಸನದಿಂದ ಅಧ್ಯಕ್ಷೆ ತಪ್ಪಿಸಿಕೊಂಡಿದ್ದರು. ಅಲ್ಲದೆ, ಶಿರಾ ಉಪಸಮರ ಸಂದರ್ಭದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷೆ ಪತಿ ರವಿಕುಮಾರ್ ಕಾಂಗ್ರೆಸ್‌ಗೆ ಪಕ್ಷಾಂತರವಾಗಿ ಆ ಪಕ್ಷದ ಬೆಂಬಲ ಕೂಡ ಗಿಟ್ಟಿಸಿಕೊಂಡಿದ್ದರು.

    ಸೂಪರ್ ಸೀಡ್ ಗುಮ್ಮ: ತಲೆದಂಡ ತಪ್ಪಿಸಿಕೊಂಡಿದ್ದ ಲತಾಗೆ ಈಗ ಸೂಪರ್ ಸೀಡ್ ಗುಮ್ಮ ಎದುರಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ತುರ್ತಾಗಿ ಆಗಬೇಕಿರುವ ಲಿಂಕ್ ಡಾಕ್ಯೂಮೆಂಟ್, ಕ್ರಿಯಾಯೋಜನೆಗಳಿಗೆ ನ.20ರ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯರು ಒಪ್ಪಿಗೆ ನೀಡದಿದ್ದರೆ ಸೂಪರ್‌ಸೀಡ್‌ಗೆ ಶಿಫಾರಸು ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿರುವುದು ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.

    ಜಿಲ್ಲೆಯ ಹಿತದೃಷ್ಟಿ ಹಿನ್ನೆಲೆಯಲ್ಲಿ ಶುಕ್ರವಾರದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ನಿರ್ಧರಿಸಿದ್ದಾರೆ. ಆದರೆ, ಈ ಸಭೆ ಅಧ್ಯಕ್ಷತೆಯನ್ನು ಲತಾ ವಹಿಸಿಕೊಳ್ಳುವುದಕ್ಕೆ ಬಹುತೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿರುವರಲ್ಲದೆ, ಜಿಲ್ಲೆಯಲ್ಲಿ ಲಿಂಕ್ ಡಾಂಕ್ಯುಮೆಂಟ್ ಅಡಿ 500 ಕೋಟಿ ರೂ.ಗಳ ವಿವಿಧ ಯೋಜನೆಗಳಿಗೆ ಹಾಗೂ 15ನೇ ಹಣಕಾಸು ಯೋಜನೆಯಡಿ 8.29 ಕೋಟಿ ರೂ.ಗಳ ಅನುದಾನಕ್ಕೆ ಜಿಪಂ ಸಾಮಾನ್ಯ ಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಅನುಮೋದನೆ ನೀಡಿ ಸಭೆಯಿಂದ ಹೊರನಡೆದು ಅಸಹಕಾರ ಮುಂದುವರಿಸಲು ತೀರ್ಮಾನಿಸಿದ್ದಾರೆ.

    ಮತ್ತೆ ಅವಿಶ್ವಾಸ ನಿಲುವಳಿ: ಅಧ್ಯಕ್ಷೆ ಲತಾ ವಿರುದ್ಧ ಪಕ್ಷಾತೀತವಾಗಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಅಸಮಾಧಾನಗೊಂಡಿದ್ದು, ಅವಿಶ್ವಾಸ ಗೊತ್ತುವಳಿ ಸಭೆಗೆ ತಡೆ ನೀಡಿದ್ದ ಹೈಕೋರ್ಟ್ ಮತ್ತೊಮ್ಮೆ ಹೊಸದಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಅವಕಾಶ ಇದೆ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಪ್ರಹಸನಕ್ಕೆ ಚಾಲನೆ ಸಿಗಲಿದೆ.

    ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ನ.20ರ ಸಾಮಾನ್ಯ ಸಭೆಗೆ ಎಲ್ಲರೂ ಹೋಗುತ್ತಿದ್ದೇವೆ. 2 ತಿಂಗಳಿಗಾದರೂ ಸರಿಯೇ ಲತಾ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಪದಚ್ಯುತಿಗೊಳಿಸುತ್ತೇವೆ.
    ಎಸ್.ಟಿ.ಮಹಾಲಿಂಗಯ್ಯ, ಜಿಪಂ ಸದಸ್ಯ

    ಜಿಪಂ ಆಡಳಿತ ನಿಯಂತ್ರಣ ತಪ್ಪಿದ್ದು ಸದಸ್ಯರ ಅರಿವಿಗೆ ಬಾರದಂತಾಗಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ 20ರ ಸಾಮಾನ್ಯಸಭೆಯಲ್ಲಿ ಎಲ್ಲರೂ ಭಾಗವಹಿಸುತ್ತೇವೆ. ಮುಂದೆ ಸದಸ್ಯರು ತೆಗೆದುಕೊಳ್ಳುವ ಒಮ್ಮತದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ.
    ವೈ.ಎಚ್.ಹುಚ್ಚಯ್ಯ, ಜಿಲ್ಲಾಧ್ಯಕ್ಷ, ಬಿಜೆಪಿ ಎಸ್ಸಿ ಮೋರ್ಚಾ

    ಸರ್ಕಾರಕ್ಕೆ ಅನುದಾನ ವಾಪಸಾಗದಂತೆ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲು ಕರೆದಿರುವ 20ರ ಸಾಮಾನ್ಯಸಭೆಗೆ ಎಲ್ಲರೂ ಹಾಜರಾಗುವ ನಿರೀಕ್ಷೆ ಇದೆ. ಎಲ್ಲ ಸದಸ್ಯರು ನನ್ನ ಜತೆ ಚೆನ್ನಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾರಾದರೂ ಅಧ್ಯಕ್ಷರಾಗಲು ಬಯಸಿದರೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವೆ.
    ಎಂ.ಲತಾ, ಜಿಪಂ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts