More

    ಮತ್ತೆ ಕಾಂಗ್ರೆಸ್​ ಜತೆ ಮೈತ್ರಿ? -ಎಚ್​. ಡಿ.ಕುಮಾರಸ್ವಾಮಿ ಏನು ಹೇಳಿದ್ದಾರೆ ನೋಡಿ…!

    ಬೆಂಗಳೂರು: ಶಿರಾ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಚುನಾವಣೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ರಾಜ್ಯದಲ್ಲಿ ಮೂರು ಪಕ್ಷಗಳ ರಾಜಕೀಯ ಚಟುವಟಿಕೆ ಗರಿಗೆದರಿದೆ. ಅಭ್ಯರ್ಥಿ ಆಯ್ಕೆ, ಮತ ಸೆಳೆಯುವ ತಂತ್ರಗಳು ಪ್ರಾರಂಭವಾಗಿವೆ.

    ಈ ಮಧ್ಯೆ ಮತ್ತೆ ಜೆಡಿಎಸ್​ -ಕಾಂಗ್ರೆಸ್​ ಮೈತ್ರಿ ಬಗ್ಗೆ ಅಲ್ಲಲ್ಲಿ ಮಾತುಕತೆ ಕೇಳಿಬರುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವೆರಡೂ ಪಕ್ಷಗಳು ಮೈತ್ರಿ ಸರ್ಕಾರ ರಚಿಸಿದ್ದವು. ನಂತರ ಆ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯಿತು. ಅದೇ ವಿಧಾನಸಭಾ ಚುನಾವಣೆಯ ಉಪಚುನಾವಣೆ ಆಗಿದ್ದರಿಂದ ಸಹಜವಾಗಿಯೇ ಮತ್ತೆ ಮೈತ್ರಿ ಬಗ್ಗೆ ಮಾತು ಶುರುವಾಗಿದೆ.

    ಹೀಗಿರುವಾಗ ಕಾಂಗ್ರೆಸ್​ ತಾವು ಜೆಡಿಎಸ್​ ಜತೆ ಮೈತ್ರಿ ಮಾಡಿಕೊಳ್ಳೋದಿಲ್ಲ ಎಂದು ಈಗಾಗಲೇ ಹೇಳಿಕೆ ನೀಡಿದೆ. ಈ ವರದಿಯನ್ನು ಆಧರಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

    ಜೆಡಿಎಸ್ ಜತೆ ಮೈತ್ರಿ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದು ಪತ್ರಿಕೆ, ವಾಹಿನಿಗಳ ಮೂಲಕ ತಿಳಿಯಿತು. ಅಷ್ಟಕ್ಕೂ ಕಾಂಗ್ರೆಸ್​ ಜತೆ ಮೈತ್ರಿ ಪ್ರಸ್ತಾವವನ್ನು ಜೆಡಿಎಸ್​ನಿಂದ ಯಾರು ಮುಂದಿಟ್ಟಿದ್ದಾರೆ? 2018ರ ಫಲಿತಾಂಶದ ಬಳಿಕ ದೇವೇಗೌಡರ ಮನೆ ಬಾಗಿಲಿಗೆ ಕಾಂಗ್ರೆಸ್ ಬಂದಂತೆ ನಾವ್ಯಾರೂ ಕಾಂಗ್ರೆಸ್ ಬಾಗಿಲಿಗೆ ಹೋಗಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ಕಾಂಗ್ರೆಸ್​ ಮೈತ್ರಿಗೆ ಯೋಗ್ಯವಾದ ಪಕ್ಷ ಅಲ್ಲ. ರಾಜ್ಯದಲ್ಲಿ ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಿದ, ರಾಜಸ್ಥಾನದಲ್ಲಿ ಬೆಂಬಲ ನೀಡಿದ್ದ ಬಿಎಸ್​​ಪಿ ಶಾಸಕರನ್ನೇ ಸೆಳೆದ, ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ದಿನವೂ ಅಲುಗಾಡಿಸುತ್ತಿರುವ ಅದರ ವರ್ತನೆ, ಮೈತ್ರಿಗೆ ತಾನು ಯೋಗ್ಯವಲ್ಲ ಎಂಬುದರ ಸಂದೇಶ. ಅಷ್ಟಕ್ಕೂ ಕಾಂಗ್ರೆಸ್ ಮಿತ್ರ ಪಕ್ಷಗಳು ಬೇರೆಯೇ ಇವೆ ಎಂದು ಕುಟುಕಿದ್ದಾರೆ.

    ಮೈತ್ರಿಧರ್ಮವನ್ನೂ ಧರ್ಮವೆಂದು ಒಪ್ಪದ ಕಾಂಗ್ರೆಸ್ ಜತೆ ಎಂದೆಂದೂ ಮೈತ್ರಿ ಇಲ್ಲ. ಮೈತ್ರಿ ವಿಷಯವಾಗಿ ಕಾಂಗ್ರೆಸ್ ಎದುರು ಜೆಡಿಎಸ್​​ನ ಅವಕಾಶವನ್ನು ಯಾರೂ ಮುಂದಿಡುವುದೂ ಬೇಡ. ರಾಜ್ಯದಲ್ಲಿ ಮೈತ್ರಿ ಎಂದರೆ ಕಾಂಗ್ರೆಸ್-ಜೆಡಿಎಸ್ ಎಂಬ ಭಾವನೆಯೂ ಬೇಡ. ಹಾಗೇ, ಜೆಡಿಎಸ್, ದೇವೇಗೌಡರ ಹೆಸರು ಬಳಸಿ ಆ ಪಕ್ಷದ ‘ನಾಯಕ’ರು ಲಾಭ ಮಾಡಿಕೊಳ್ಳುವುದೂ ಬೇಡ‌ ಎಂದು ಖಡಕ್​ ಆಗಿ ಟ್ವೀಟ್ ಮಾಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯೇ ಸುರಕ್ಷಿತರಲ್ಲ: ಸಿದ್ದರಾಮಯ್ಯ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts