More

    ನಿವಾರ್ ಅಬ್ಬರಕ್ಕೆ ಕೋಲಾರ ಅಸ್ತವ್ಯಸ್ತ, ರೈತರು, ಸಣ್ಣ ವ್ಯಾಪಾರಿಗಳು, ಕೂಲಿ ಕಾರ್ವಿುಕರಿಗೆ ಸಂಕಟ

    ಕೋಲಾರ: ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪ್ರಭಾವ ಕೋಲಾರ ಜಿಲ್ಲೆಗೂ ವ್ಯಾಪಿಸಿದ್ದು, ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಬುಧವಾರ ಮಧ್ಯಾಹ್ನದಿಂದ ಗುರುವಾರ ಬೆಳಗ್ಗೆ 8.30ರವರೆಗೆ ಜಿಲ್ಲೆಯಾದ್ಯಂತ 233 ಮಿಮೀ ಮಳೆಯಾಗಿದ್ದರೆ, ಗುರುವಾರ ಸಂಜೆ 4.30ರ ವೇಳೆಗೆ ಜಿಲ್ಲೆಯ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ 608.05 ಮಿ.ಮೀ. ಮಳೆಯಾಗಿದೆ.

    ನಿವಾರ್ ಚಂಡಮಾರುತದಿಂದ ನಾಗರಿಕರು ಮನೆಯಲ್ಲಿ ಬಂಧಿತರಾಗಿದ್ದರೆ, ಸಣ್ಣ ವ್ಯಾಪಾರಿಗಳು, ಕೂಲಿ ಕಾರ್ವಿುಕರು, ಹೋಟೆಲ್ ಉದ್ಯಮಿಗಳು ಮಳೆಯಿಂದ ತತ್ತರಿಸಿದ್ದಾರೆ. ಮಳೆ ಮತ್ತು ಚಳಿಯಿಂದ ಕರೊನಾ ಉಲ್ಬಣಗೊಳ್ಳುವುದೆಂದು ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ಮನೆಯಿಂದ ಹೊರ ಬರಲು ಧೈರ್ಯ ತೋರಲಿಲ್ಲ. ನಗರದಲ್ಲಿ ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಎಂಜಿ, ದೊಡ್ಡಪೇಟೆ, ಕಾಳಮ್ಮಗುಡಿ ಬೀದಿ ಸೇರಿ ಬಹುತೇಕ ಎಲ್ಲ ರಸ್ತೆಗಳಲ್ಲೂ ಜನ ಹಾಗೂ ವಾಹನ ದಟ್ಟಣೆ ಕಡಿಮೆಯಿತ್ತು. ಸರ್ಕಾರಿ ಕಚೇರಿಗಳಲ್ಲೂ ಸಾರ್ವಜನಿಕರ ಸಂಖ್ಯೆ ವಿರಳವಾಗಿತ್ತು.

    ಬೆಳೆಗಳಿಗೆ ಕಂಟಕ: ರಾಗಿ ಬೆಳೆದ ರೈತನಿಗೆ ನಿವಾರ್ ಸಂಕಟವನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ಅನೇಕ ರೈತರು ರಾಗಿ ತೆನೆ ಕಟಾವು ಮಾಡಿ ಒಣಗಿಸುತ್ತಿದ್ದರು, ಮಳೆಯಿಂದಾಗಿ ನಷ್ಟ ಅನುಭವಿಸುವ ಭೀತಿ ಎದುರಿಸುತ್ತಿದ್ದಾರೆ. ಆಗಸ್ಟ್​ನಲ್ಲಿ ಬಿತ್ತನೆಯಾಗಿರುವ ರಾಗಿ ಕಟಾವಿಗೆ ಸಿದ್ಧವಾಗಿದ್ದು, ಕೂಲಿಯಾಳುಗಳ ಕೊರತೆ, ಕಟಾವು ಯಂತ್ರದ ಅಲಭ್ಯತೆಯಿಂದಾಗಿ ಕಟಾವು ಆಗಿಲ್ಲ. ಕೆಲವಡೆ ಧರಾಶಾಹಿಯಾಗಿದ್ದು, ಜಡಿ ಮಳೆ ಮುಂದುವರಿದರೆ ರಾಗಿ ಗುಣಮಟ್ಟ ಕಳೆದುಕೊಳ್ಳುವ ಜತೆಗೆ ಮೊಳಕೆ ಒಡೆದು ರೈತ ನಷ್ಟ ಅನುಭವಿಸುವ ಆತಂಕ ಎದುರಾಗಿದೆ.

    ಅಲೂಗಡ್ಡೆ, ಟೊಮ್ಯಾಟೊಗೆ ಅಂಗಮಾರಿ ಹರಡುವ ಸಾಧ್ಯತೆಯಿದೆ, ಹೂವು ಬೆಳೆಗಾರರು ಹಾಕಿದ ಬಂಡವಾಳ ಹಿಂದಕ್ಕೆ ಪಡೆಯುವುದು ಅನುಮಾನವಾಗಿದೆ.

    ರಸ್ತೆಗಳ ಬಂಡವಾಳ ಬಯಲು: ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ರಸ್ತೆಗಳ ಬಂಡವಾಳ ಬಯಲಾಗುತ್ತಿದೆ. ಜಿಲ್ಲಾ ಕೇಂದ್ರ ಕೋಲಾರದಲ್ಲಿ ನಡೆದಿರುವ ರಸ್ತೆ ಕಾಮಗಾರಿ ಎಷ್ಟು ಕಳಪೆ ಎಂಬುದನ್ನು ಮಳೆ ಸಾಬೀತು ಮಾಡಿದೆ. ರಸ್ತೆ ವಿಸ್ತರಣೆ ಕೆಲಸ ಮಂದಗತಿಯಲ್ಲಿ ಸಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಕಳಪೆ ರಸ್ತೆಗಳಲ್ಲಿ ಆಟೋ ರಿಕ್ಷಾ ಓಡಿಸುತ್ತಿರುವುದರಿಂದ ವಾಹನ ಚಾಲಕರು ದುರಸ್ತಿಗಾಗಿ ನೂರಾರು ರೂ. ಖರ್ಚು ಮಾಡುವ ಮೂಲಕ ಮನೆಗೆ ಬರಿಗೈಯಲ್ಲಿ ಹೋಗುವ ಪರಿಸ್ಥಿತಿ ನಿರ್ವಣವಾಗಿದೆ.

    ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ: ಮಳೆಯಿಂದಾಗಿ ಕಸ ವಿಲೇವಾರಿ ಆಗಿಲ್ಲ. ರಸ್ತೆ ಬದಿ, ನಿವೇಶನಗಳಲ್ಲಿ ಬಿದ್ದಿರುವುದಿರಿಂದ ಪರಿಸರದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಮಳೆ ಮುಂದುವರಿದಲ್ಲಿ ಕಸ ವಿಲೇವಾರಿ ಇನ್ನಷ್ಟು ಜಟಿಲಗೊಳ್ಳುವ ಸಾಧ್ಯತೆ ಇದ್ದು ನಗರಸಭೆ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಸಾಂಕ್ರಾಮಿಕ ರೋಗ ಹರಡಬಹುದು.

    ಹಳೇ ಕಟ್ಟಡಗಳು ಜಡಿ ಮಳೆಯಿಂದ ಕುಸಿಯುವ ಸಾಧ್ಯತೆ ಇರುವುದರಿಂದ ಕಟ್ಟಡಗಳ ಮಾಲೀಕರು ಎಚ್ಚರವಹಿಸಬೇಕೆಂದು ನಗರಸಭೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ತಗ್ಗು ಪ್ರದೇಶದಲ್ಲಿ ವಾಸವಾಗಿರುವ ಜನರಿಗೂ ಎಚ್ಚರದಿಂದ ಇರುವಂತೆ, ಸಮಸ್ಯೆಯಿದ್ದಲ್ಲಿ ನಗರಸಭೆ, ತಾಲೂಕು ಆಡಳಿತ ಇಲ್ಲವೇ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿ ರಕ್ಷಣೆ ಪಡೆಯುವಂತೆ ಸೂಚಿಸಲಾಗಿದೆ.

    ಮಳೆ ವಿವರ: ಬುಧವಾರದಿಂದ ಗುರುವಾರ ಬೆಳಗ್ಗೆ 8.30ರವರೆಗೆ ಕೋಲಾರ-32 ಮಿಮೀ, ಮುಳಬಾಗಿಲು-60 ಮಿಮೀ, ಮಾಲೂರು-26 ಮಿಮೀ, ಬಂಗಾರಪೇಟೆ-40 ಮಿಮೀ, ಶ್ರೀನಿವಾಸಪುರ-42 ಮಿಮೀ, ಕೆಜಿಎಫ್-33 ಮಿಮೀ ಮಳೆ ದಾಖಲಾಗಿದೆ. ಗುರುವಾರ ಮಧ್ಯಾಹ್ನ 3.30ರಿಂದ ಸಂಜೆ 4.30ರವರೆಗೆ ಶ್ರೀನಿವಾಸಪುರದ ಎರಂವಾರಪಲ್ಲಿ ವ್ಯಾಪ್ತಿಯಲ್ಲಿ 65.05 ಮಿಮೀ, ನೆಲವಂಕಿ-67.05 ಮಿಮೀ, ಅಡ್ಡಗಲ್-64.05 ಮಿಮೀ, ಗುಮ್ಮಕಲ್ಲು-65 ಮಿಮೀ, ಕುರ್ಗೆಪಲ್ಲಿ-65 ಮಿಮೀ ಮಳೆಯಾಗಿದ್ದರೆ, ಮುಳಬಾಗಿಲಿನ ಹೆಬ್ಬಣಿ ಗ್ರಾಮದಲ್ಲಿ 25 ಮಿಮೀ, ತಾಯಲೂರಿನಲ್ಲಿ 60 ಮಿಮೀ, ಮಾಲೂರಿನಲ್ಲಿ 26 ಮಿಮೀ, ಮಳೆ ದಾಖಲಾಗಿದ್ದು ಶುಕ್ರವಾರ ಮಧ್ಯಾಹ್ನದವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.

    ನಿವಾರ್ ಚಂಡಮಾರುತ ಜಿಲ್ಲೆಗೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಜನರ ಪ್ರಾಣ ಮತ್ತು ಆಸ್ತಿ ರಕ್ಷಣೆ ಸಂಬಂಧ ಜಿಲ್ಲಾ ಆಡಳಿತ ಮುಂಜಾಗ್ರತೆ ಕೈಗೊಂಡಿದೆ, ತಹಸೀಲ್ದಾರ್​ಗಳಿಗೆ ಕೇಂದ್ರ ಸ್ಥಾನದಲ್ಲಿ ಉಳಿದು ಪರಿಸ್ಥಿತಿ ಅವಲೋಕಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ ಸಂತ್ರಸ್ತರಿಗೆ ಗಂಜಿ ಕೇಂದ್ರ ಹಾಗೂ ಇನ್ನಿತರ ವ್ಯವಸ್ಥೆ ಕಲ್ಪಿಸಲು ಸಿದ್ದರಿದ್ದೇವೆ.

    | ಸಿ.ಸತ್ಯಭಾಮ, ಜಿಲ್ಲಾಧಿಕಾರಿ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts