More

    ಮಹಿಳಾ ಕ್ರಿಕೆಟ್​ ಅಭಿವೃದ್ಧಿಗೆ ನೀತಾ ಅಂಬಾನಿ ಬೆಂಬಲ; ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸುವ ಭರವಸೆ

    ಭಾರತದಲ್ಲಿ ಮಹಿಳೆಯರ ಕ್ರಿಕೆಟ್​ ಮತ್ತು ಇನ್ನಿತರ ಕ್ರೀಡೆಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ರಿಲಯನ್ಸ್​ ಫೌಂಡೇಶನ್​ ಸಂಸ್ಥಾಪಕಿ, ಅಧ್ಯಕ್ಷೆ ನೀತಾ ಅಂಬಾನಿ ತಿಳಿಸಿದ್ದಾರೆ.
    ನೀತಾ ಅಂಬಾನಿ ವಿಡಿಯೋ ಮೂಲಕ ಈ ಸಂದೇಶ ನೀಡಿದ್ದು, ಐಪಿಎಲ್​​ನ ಮುಂಬೈ ಇಂಡಿಯನ್ಸ್​​ ಟ್ವಿಟರ್​​ನಲ್ಲಿ ವಿಡಿಯೋ ಶೇರ್ ಮಾಡಲಾಗಿದೆ.

    ಪ್ರತಿಯೊಂದು ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ನನ್ನ ಆದ್ಯತೆ ಮತ್ತು ಉತ್ಸಾಹದಿಂದ ಅದನ್ನು ಮಾಡುತ್ತೇನೆ. ಅದರಲ್ಲೂ ಕ್ರೀಡಾಕ್ಷೇತ್ರದ ಮಹಿಳೆಯರಿಗೆ ವಿಶೇಷವಾಗಿ ಬೆಂಬಲ ನೀಡಲು ಬಯಸುತ್ತೇನೆ. ನಾವು ನಮ್ಮ ರಿಲಯನ್ಸ್​ ಫೌಂಡೇಶನ್​ ಎಜುಕೇಶನ್​ ಆ್ಯಂಡ್ ಸ್ಫೋರ್ಟ್ಸ್​ ಫಾರ್ ಆಲ್​ (ಇಎಸ್​ಎ) ಈಗಾಗಲೇ ವಿವಿಧ ಕ್ರೀಡಾ ಕ್ಷೇತ್ರದ ಯುವ ಪ್ರತಿಭೆಗಳಿಗಾಗಿ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ ಸುಮಾರು 21.5 ಮಿಲಿಯನ್​ ಮಕ್ಕಳನ್ನು ತಲುಪಿದ್ದೇವೆ. ಇದೀಗ ಇಎಸ್​ಎ ಭಾರತದಲ್ಲಿ ಮಹಿಳಾ ಕ್ರಿಕೆಟ್​ನ್ನು ವೃತ್ತಿಪರ ಮಟ್ಟದಲ್ಲಿ ಉತ್ತೇಜಿಸಲು ನಿರ್ಧಾರ ಮಾಡಿದೆ ಎಂದು ನೀತಾ ತಿಳಿಸಿದ್ದಾರೆ.

    ನಮ್ಮ ಎಲ್ಲ ಹೆಣ್ಣುಮಕ್ಕಳ ಜೀವನದಲ್ಲೂ ಅದ್ಭುತ ಹಾಗೂ ಅತ್ಯುತ್ತಮ ಅವಕಾಶಗಳು ಒದಗಿಬರಲಿ ಎಂದು ನಾನು ನಿರೀಕ್ಷೆ ಮಾಡುತ್ತೇನೆ. ಅವರು ಜಾಗತಿಕ ವೇದಿಕೆಯ ಮೇಲೆ ಪ್ರಕಾಶಿಸಬೇಕು. ಮಹಿಳಾ ಕ್ರಿಕೆಟ್​​ನಲ್ಲಿ ಏಕದಿನ ಪಂದ್ಯಗಳು ಮತ್ತು ಟಿ-20 ವಿಶ್ವಕಪ್​​ ಸ್ಪರ್ಧೆಗಳಲ್ಲಿ ನಮ್ಮ ದೇಶದ ಹೆಣ್ಣುಮಕ್ಕಳು ಪ್ರಬಲ ಶಕ್ತಿಯಾಗಿದ್ದಾರೆ. ಅಂಜುಮಾ ಛೋಪ್ರಾ, ಜುಲಾನ್ ಗೋಸ್ವಾಮಿ, ಮಿಥಾಲಿ ರಾಜ್​ ಅವರು ಈಗಾಗಲೇ ಕ್ರಿಕೆಟ್​ನಲ್ಲಿ ಲೆಜೆಂಡ್​ಗಳಾಗಿ ಹೊರಹೊಮ್ಮಿದ್ದಾರೆ. ಇದೀಗ ಸ್ಮೃತಿ ಮಂದಣ್ಣ, ಪೂನಂ ಯಾದವ್​, ಹರ್ಮನ್‌ಪ್ರೀತ್ ಕೌರ್ ಅವರೂ ಅಷ್ಟೇ ಅತ್ಯುತ್ತಮವಾಗಿ ಆಡುತ್ತ, ಮಹಿಳಾ ಕ್ರಿಕೆಟ್​​ನ್ನು ಮುನ್ನಡೆಸುತ್ತಿದ್ದಾರೆ. ಮಹಿಳಾ ಕ್ರಿಕೆಟ್​ ಇನ್ನೂ ಹೆಚ್ಚಿನ ರಚನಾತ್ಮಕ, ಸ್ಪರ್ಧಾತ್ಮಕ ಮತ್ತು ಆಕರ್ಷಕವಾಗಿ ಇರುವುದರಿಂದ ಇದು ನಮ್ಮ ಹೆಣ್ಣುಮಕ್ಕಳಿಗೆ ಇನ್ನಷ್ಟು ಅವಕಾಶ ಸೃಷ್ಟಿಸಿಕೊಡುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಹೇಳಿದ್ದಾರೆ.

    ಕ್ರಿಕೆಟ್​ ಸೇರಿ ಇನ್ನಿತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡ ಮಹಿಳೆಯರಿಗೆ ಬೆಂಬಲ, ಸಮಾನತೆ, ಅವರು ಪಾಲ್ಗೊಳ್ಳುವಂತೆ ಉತ್ತೇಜಿಸುವ ಸಲುವಾಗಿ ನಾವು ಈ ಹೆಜ್ಜೆ ಇಡುತ್ತಿದ್ದೇವೆ. ಯಾವುದೇ ಆಟ ಅಭಿವೃದ್ಧಿ ಹೊಂದಬೇಕಾದರೆ ಅದರ ಸುತ್ತ ಸಮಗ್ರ ಪರಿಸರವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಬೇಕು. ಉನ್ನತ ಮಟ್ಟದ ಅವಕಾಶಗಳನ್ನು ಸೃಷ್ಟಿಸಬೇಕು. ನಮ್ಮ ಹೆಣ್ಣುಮಕ್ಕಳಿಗೆ ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸಬೇಕು. ಸೂಕ್ತ ತರಬೇತಿ ನೀಡಬೇಕು ಹಾಗೂ ಅವರಿಗೆ ಎಲ್ಲ ರೀತಿಯ ಬೆಂಬಲ ನೀಡಬೇಕು.

    ನಾವು ನವಿ ಮುಂಬೈನಲ್ಲಿರುವ ಜಿಯೋ ಕ್ರಿಕೆಟ್​ ಕ್ರೀಡಾಂಗಣವನ್ನು ಮಹಿಳಾ ಕ್ರಿಕೆಟ್​ ಆಟಗಾರ್ತಿಯರ ಅಭ್ಯಾಸಕ್ಕೆ ನೀಡುತ್ತಿದ್ದೇವೆ. ಇಲ್ಲಿ ವರ್ಷಪೂರ್ತಿ ಅವರು ಕ್ರಿಕೆಟ್ ಅಭ್ಯಾಸ ಮಾಡಬಹುದು. ಸ್ಪರ್ಧಾತ್ಮಕ ಪಂದ್ಯಾವಳಿಗಳನ್ನೂ ಆಯೋಜಿಸಬಹುದು. ಹಾಗೇ ಆಟಗಾರರ ಜೀವನದಲ್ಲಿ ಪುನರ್ವಸತಿ ವ್ಯವಸ್ಥೆ ಎಷ್ಟು ಮುಖ್ಯ ಎಂಬುದನ್ನೂ ನಾವು ಅರ್ಥ ಮಾಡಿಕೊಂಡಿದ್ದೇವೆ. ಹಾಗಾಗಿ ಕ್ರೀಡಾ ವಿಜ್ಞಾನ ಮತ್ತು ಪುನರ್ವಸತಿ ಕೇಂದ್ರದ ವ್ಯವಸ್ಥೆಯನ್ನು ಸರ್ ಎಚ್‌.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಮಾಡಲಾಗುವುದು ಎಂದು ನೀತಾ ಅಂಬಾನಿ ತಿಳಿಸಿದ್ದಾರೆ. (ಏಜೆನ್ಸೀಸ್​) 

    ವಿಡಿಯೋಕ್ಕಾಗಿ ಇಲ್ಲಿ ಕ್ಲಿಕ್​ ಮಾಡಿ: https://www.instagram.com/p/CHX-zm1oWid/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts