More

    ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿರೋ ಅಪರಾಧಿಗಳ ವಿರುದ್ಧ ಗುಡುಗಿದ ನಿರ್ಭಯಾ ತಾಯಿ

    ನವದೆಹಲಿ: ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾನಾ ಪ್ರಯತ್ನ ಮಾಡುತ್ತಿರುವ ನಿರ್ಭಯಾ ಪ್ರಕರಣದ ಅಪರಾಧಿಗಳ ವಿರುದ್ಧ ನಿರ್ಭಯಾ ತಾಯಿ ಗುಡುಗಿದ್ದಾರೆ. ಅಪರಾಧಿಗಳು ಕಾನೂನನ್ನು ಅಣಕ ಮಾಡುತ್ತಿದ್ದಾರೆ. ಫೆ.1 ರಂದು ಗಲ್ಲುಶಿಕ್ಷೆಗೆ ತಡೆಕೋರಿರುವ ಅವರ ಎಲ್ಲ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಬೇಕೆಂದು ಆಗ್ರಹಿಸಿದರು.

    ಗಲ್ಲುಶಿಕ್ಷೆ ನಿಗದಿಯಾದಂತೆ ಫೆ.1ರಂದೇ ನಡೆಯಲಿದೆ ಎಂದು ನಾನು ನಂಬಿದ್ದೇನೆ. ಅಪರಾಧಿಗಳು ನ್ಯಾಯಾಲಯವನ್ನು ಅಣಕಿಸುತ್ತಿದ್ದಾರೆ. ನ್ಯಾಯಾಲಯ ಅವರ ಅರ್ಜಿಗಳನ್ನು ವಜಾ ಮಾಡಬೇಕು. ನಾನು ಯಾವುದೇ ಪವಾಡದಲ್ಲಿ ನಂಬಿಕೆ ಇಟ್ಟಿಲ್ಲ. ಬದಲಾಗಿ ಕಾನೂನನ್ನು ನಂಬಿದ್ದೇನೆ. ಅವರೆಂದು ದೇಶದ ಕಾನೂನು ಸುವ್ಯವಸ್ಥೆಯನ್ನು ಹಿಂಬಾಲಿಸಿಲ್ಲ ಎಂದು ಅಪರಾಧಿಗಳ ವಿರುದ್ಧ ನಿರ್ಭಯಾ ತಾಯಿ ಕಿಡಿಕಾರಿದರು.

    ನಾಳೆ ನಡೆಯಲಿರುವ ಗಲ್ಲುಶಿಕ್ಷೆಗೆ ತಡೆಕೋರಿ ಇಬ್ಬರು ಅಪರಾಧಿಗಳಾದ ಅಕ್ಷಯ್​ ಠಾಕೂರ್​ ಮತ್ತು ವಿನಯ್ ಶರ್ಮಾ ದೆಹಲಿಯ ಪಟಿಯಾಲ ನ್ಯಾಯಲಯದ ಮೊರೆ ಹೋಗಿದ್ದಾರೆ. ಈ ಸಂಬಂಧ ವಿಚಾರಣೆ ನಡೆಯಬೇಕಿದೆ. ಅಪರಾಧಿಗಳ ಪರ ವಕೀಲರಾದ ಎ.ಪಿ.ಸಿಂಗ್​ ಅರ್ಜಿ ಸಲ್ಲಿಸಿದ್ದಾರೆ.

    ದೆಹಲಿ ಕಾರಾಗೃಹ ನಿಯಮಗಳ ಪ್ರಕಾರ ಕ್ಷಮಾಧಾನ ಅರ್ಜಿ ಸೇರಿದಂತೆ ಕಾನೂನಿನಲ್ಲಿ ಅಪರಾಧಿಗಳಿಗೆ ಇರುವ ಎಲ್ಲ ಅವಕಾಶಗಳು ಇತ್ಯರ್ಥಗೊಂಡ ಬಳಿಕವೇ ಗಲ್ಲಿಗೇರಿಸಲಾಗುವುದು. ಅಲ್ಲಿಯವರೆಗೂ ಯಾರನ್ನು ಮರಣದಂಡಣೆಗೆ ಗುರಿ ಮಾಡುವಂತಿಲ್ಲ ಎಂದು ಅಪರಾಧಿ ಪರ ವಕೀಲ ಎ.ಪಿ. ಸಿಂಗ್​ ಅರ್ಜಿಯಲ್ಲಿ ತಿಳಿಸಿದ್ದಾರೆ.

    ಇನ್ನು ಅಪರಾಧಿಗಳು ಸಲ್ಲಿರುವ ಅರ್ಜಿ ವಿಚಾರಣೆಯನ್ನು ಇಂದು ಮಧ್ಯಾಹ್ನ 2 ಗಂಟೆಗೆ ಅಡಿಷನಲ್​ ಸೆಸನ್ಸ್​ ಜಡ್ಜ್​ ಕೈಗೆತ್ತಿಕೊಳ್ಳಲಿದ್ದಾರೆ. ಅರ್ಜಿ ಸಂಬಂಧ ಪ್ರತಿಕ್ರಿಯಿಸುವಂತೆ ನ್ಯಾಯಾಲಯ ನಿನ್ನೆ ತಿಹಾರ್​ ಜೈಲು ಅಧಿಕಾರಿಗಳಿಗೆ ನೋಟಿಸ್​ ನೀಡಿ ಇಂದು ಬೆಳಗ್ಗೆ 10 ಗಂಟೆ ಒಳಗೆ ವರದಿ ಸಲ್ಲಿಸುವಂತೆ ಕೇಳಿತ್ತು.

    ಅಪರಾಧಿಗಳಾದ ಮುಕೇಶ್​ ಕುಮಾರ್​ ಸಿಂಗ್​, ಪವನ್​ ಕುಮಾರ್​ ಗುಪ್ತ, ವಿನಯ್​ ಕುಮಾರ್​ ಶರ್ಮ ಮತ್ತು ಅಕ್ಷಯ್​ ಕುಮಾರ್​ ಸಿಂಗ್​ಗೆ ಫೆ. 1ಕ್ಕೆ ಗಲ್ಲು ಶಿಕ್ಷೆ ನಿಗದಿಯಾಗಿದೆ.

    23 ವರ್ಷದ ಪ್ಯಾರಾಮೆಡಿಕಲ್​ ವಿದ್ಯಾರ್ಥಿನಿಯನ್ನು ಡಿಸೆಂಬರ್​ 16, 2012ರಂದು ಬಾಲಾಪಾರಾಧಿ ಸೇರಿದಂತೆ ಒಟ್ಟು ಆರು ಮಂದಿ ಮೃಗೀಯವಾಗಿ ಅತ್ಯಾಚಾರವೆಸಗಿ, ಕೊಲೆಗೈದು ವಿಕೃತಿ ಮೆರೆದಿದ್ದರು.

    ಒಟ್ಟು ಆರು ಅಪರಾಧಿಗಳಲ್ಲಿ ರಾಮ ಸಿಂಗ್​ ತಿಹಾರ್​ ಜೈಲಿನಲ್ಲೇ 2013 ಮಾರ್ಚ್​ನಲ್ಲಿ ಪಾಪಾಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪಾರಾಧಿಯನ್ನು ಅಪರಾಧ ನಡೆದ ಮೂರು ವರ್ಷಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts