More

    ‘ರಾತ್ರಿ ಹೊತ್ತು’ ಅಡಕೆ ಕಳ್ಳರ ಕರಾಮತ್ತು

    ರಮೇಶ ಹಾರ್ಸಿಮನೆ ಸಿದ್ದಾಪುರ
    ರೈತರ ಆರ್ಥಿಕ ಬೆಳೆ ಅಡಕೆ ಕೊನೆ ಕೊಯ್ಲು ಭರದಿಂದ ಸಾಗುತ್ತಿದೆ. ಸಣ್ಣಪುಟ್ಟ ಕಳ್ಳತನ ಮಾಡುವವರಿಗೂ ಈಗ ಸುಗ್ಗಿಯ ಕಾಲ. ಕೆಲವು ದಿನಗಳಿಂದ ತಾಲೂಕಿನ ಹಲವೆಡೆ ಅಡಕೆ ಕಳ್ಳತನ ಪ್ರಕರಣ ಕಂಡುಬರುತ್ತಿರುವುದರಿಂದ ಬೆಳೆಗಾರರು ಎಚ್ಚರವಹಿಸಬೇಕಾಗಿದೆ.


    ಬೆಳೆಗಾರರು ಅಡಕೆ ಕೊಯ್ಲು ಮಾಡಿ ಅದನ್ನು ಒಣಗಿಸಲು ಮನೆ ಅಂಗಳ, ಬೆಟ್ಟ, ಬೇಣ, ಗದ್ದೆಗಳಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಒಬ್ಬಂಟಿಗರು ಇರುವಲ್ಲಿ ಕಳ್ಳರು ತಮ್ಮ ಕರಾಮತ್ತಿನ ಮೂಲಕ ಕಳ್ಳತನ ನಡೆಸಿ ಪರಾರಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ.


    ಹಗಲಿನಲ್ಲಿ ಮನೆಯವರು, ಕೂಲಿಯವರು ಅಡಕೆ ಒಣಗಿಸಿರುವ ಜಾಗದಲ್ಲಿ ಸಣ್ಣಪುಟ್ಟ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಆದರೆ , ರಾತ್ರಿ ವಿದ್ಯುತ್ ದೀಪ ಅಳವಡಿಸಿ ಕಾವಲು ಕಾಯುತ್ತಾರೆ. ಕೆಲವು ರೈತರು ಅಡಕೆ ಒಣ ಹಾಕಿದ ಸುತ್ತಲೂ ತಂತಿ ಹಾಗೂ ಐಬಿಕ್ಸ್ ಬೇಲಿ ಮಾಡಿಕೊಂಡು ಯಾರು ಬರದಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇನ್ನುಳಿದವರು ಹಾಗೆಯೇ ಬಿಟ್ಟು ರಾತ್ರಿ ಕಾವಲು ಮಾಡಿಕೊಳ್ಳುತ್ತಾರೆ. ಆದರೂ ಕಳ್ಳರು ಕಾವಲು ಮಾಡುವವರಿಗೆ ಟೋಪಿ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.


    ಎಚ್ಚೆತ್ತ ಪೊಲೀಸ್ ಇಲಾಖೆ:
    ಈ ವರ್ಷ ಯಾವುದೇ ದೊಡ್ಡ ಪ್ರಮಾಣದ ಅಡಕೆ ಕಳ್ಳತನವಾಗದಿದ್ದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಅಡಕೆ ಬೆಳೆಗಾರರು ಸುರಕ್ಷತಾ ಕ್ರಮ ಅನುಸರಿಸುವಂತೆ ಮನೆ ಮನೆಗೆ ಭೇಟಿ ನೀಡಿ ಸೂಚನೆ ನೀಡುತ್ತಿದ್ದಾರೆ.
    ಏನು ಸೂಚನೆ:
    ಅಡಕೆಯನ್ನು ಮನೆ ಹೊರಗಡೆ ಒಣಗಿಸಿದ್ದಲ್ಲಿ ರಾತ್ರಿ ಮತ್ತು ಹಗಲು ನಂಬಿಕಸ್ತ ಕಾವಲುಗಾರರನ್ನು ನೇಮಿಸಿಕೊಳ್ಳಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಸಿ.ಸಿ. ಟಿವಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಅಡಕೆ ಕಾವಲಿಗೆ ಸಾಕು ನಾಯಿಗಳನ್ನು ಬಳಸಿಕೊಳ್ಳಬೇಕು. ಚಿಲ್ಲರೆ ಅಡಕೆ ವ್ಯಾಪಾರಿಗಳ ಬಗ್ಗೆ ಗಮನ ಹರಿಸಬೇಕು. ಈ ಹಿಂದೆ ಸಣ್ಣ, ಪುಟ್ಟ ಕಳ್ಳತನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕಳ್ಳತನ ಪ್ರವೃತ್ತಿ ಹೊಂದಿರುವವರ ಚಲನ- ವಲನಗಳ ಮೇಲೆ ಗಮನವಹಿಸಿ ಠಾಣೆಗೆ ಮಾಹಿತಿ ನೀಡಬೇಕು. ಕುಟುಂಬದಲ್ಲಿ ಈ ಹಿಂದಿನಿಂದಲೂ ಆಸ್ತಿಯ ವಿವಾದಗಳಿದ್ದಲ್ಲಿ ಅಂಥವುಗಳ ಕುರಿತು ಜಾಗೃತರಾಗಿರಬೇಕು ಎಂದು ಕರಪತ್ರ ನೀಡಿ ಮಾಹಿತಿ ನೀಡುತ್ತಿದ್ದಾರೆ.
    ಗಸ್ತು ಆರಂಭಿಸಿ:
    ತಾಲೂಕಿನ ಎಲ್ಲ ಗ್ರಾಮೀಣ ಭಾಗದಲ್ಲಿ ಅಡಕೆ, ಭತ್ತ ಕೊಯ್ಲು ಹಾಗೂ ಅವುಗಳನ್ನು ಒಣಗಿಸುವ ಕಾರ್ಯ ನಡೆಯುತ್ತಿರುವುದರಿಂದ ಪೊಲೀಸ್ ಇಲಾಖೆ ವಾರದ ಒಂದೆರಡು ದಿನ ಗಸ್ತು ತಿರುಗಿದರೆ ಸಣ್ಣ, ಪುಟ್ಟ ಕಳ್ಳತನಕ್ಕೆ ಬ್ರೇಕ್ ಹಾಕಬಹುದು. ಪೊಲೀಸ್ ಇಲಾಖೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಜಾಗೃತ ಸಭೆ ನಡೆಸಬೇಕು. ಬೆಳೆಗಾರರಿಗೆ ಸೂಕ್ತ ರಕ್ಷಣೆ ಕುರಿತು ಕ್ರಮ ಕೈಗೊಳ್ಳಬೇಕು ಎನ್ನುವುದು ಅಡಕೆ ಬೆಳೆಗಾರರ ಆಗ್ರಹವಾಗಿದೆ.

    ಕೈಕೊಡುವ ವಿದ್ಯುತ್:
    ಅಡಕೆ ಒಣಗಿಸಿದ ಜಾಗದಲ್ಲಿ ವಿದ್ಯುತ್ ಅಳವಡಿಸಿ ಬೆಳೆಗಾರರು ಕಾವಲು ಕಾಯುತ್ತಿದ್ದಾರೆ. ಆದರೆ, ರಾತ್ರಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿರುವರಿಂದ ಕಳ್ಳರಿಗೆ ಹೆಚ್ಚು ಅನುಕೂಲ ಆಗುತ್ತಿದೆ ಎಂಬುದು ಬೆಳೆಗಾರರ ದೂರು.



    ತಾಲೂಕಿನಲ್ಲಿ ಈಗಾಗಲೇ ಒಂದೆರಡು ಅಡಕೆ ಕಳ್ಳತನ ಪ್ರಕರಣ ನಡೆದಿರುವುದರಿಂದ ಎಲ್ಲ ಬೆಳೆಗಾರರು ಜಾಗೃತರಾಗಿರಬೇಕಾಗಿದೆ. ಎಲ್ಲರ ಮನೆಗೆ ಪೊಲೀಸ್ ರಕ್ಷಣೆ ಕಷ್ಟ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ಬೆಳೆಗಾರರು ಸುರಕ್ಷತಾ ಕ್ರಮ ವಹಿಸಬೇಕು. ಈಗಾಗಲೇ ಇಲಾಖೆಯಿಂದ ಕೆಲವು ಮನೆಗಳಿಗೆ ಭೇಟಿ ನೀಡಿ ಕರಪತ್ರ ನೀಡಿ ಜಾಗೃತರಾಗಿರುವಂತೆ ಮಾಹಿತಿ ನೀಡುತ್ತಿದ್ದೇವೆ. | ಕುಮಾರ ಕೆ. ಸಿಪಿಐ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts