More

    ಪುಲ್ವಾಮಾ ಉಗ್ರ ದಾಳಿ: ನಾಲ್ಕು ಜೆಇಎಂ ಉಗ್ರರ ವಿರುದ್ಧ ಪೂರಕ ಚಾರ್ಜ್​ಶೀಟ್ ಸಲ್ಲಿಸಿದ ಎನ್​ಐಎ

    ನವದೆಹಲಿ: ದೆಹಲಿ-ಎನ್​ಸಿಆರ್ ಪ್ರದೇಶದಲ್ಲಿ ಉಗ್ರ ದಾಳಿ ಸಂಘಟಿಸಲು ಸಂಚು ರೂಪಿಸಿದ್ದ ಜೈಷ್ ಏ ಮೊಹಮ್ಮದ್​(JeM) ಉಗ್ರ ಸಂಘಟನೆಯ ನಾಲ್ಕು ಉಗ್ರರ ವಿರುದ್ಧ ನ್ಯಾಷನಲ್ ಇನ್​ವೆಸ್ಟಿಗೇಷನ್ ಏಜೆನ್ಸಿ(NIA) ಪೂರಕ ಚಾರ್ಜ್​ಶೀಟ್​ ಅನ್ನು ಸಲ್ಲಿಸಿದೆ. ಇದರಂತೆ, ಪುಲ್ವಾಮಾ ಉಗ್ರ ದಾಳಿಯ ಪ್ರಮುಖ ಸಂಚುಕೋರ ಮಾಸ್ಟರ್ ಮೈಂಡ್​ ಮುದಾಸ್ಸಿರ್ ಅಹ್ಮದ್ ಖಾನ್ ಎಂದು ಆರೋಪಿಸಲಾಗಿದೆ.

    ಎನ್​ಐಎ ಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಪುಲ್ವಾಮಾದ ನಿವಾಸಿಗಳಾದ ಸಾಜ್ಜದ್ ಅಹ್ಮದ್ ಖಾನ್​ ಅಲಿಯಾಸ್ ಸಾಜ್ಜದ್​ (27), ಬಿಲಾಸ್ ಅಹ್ಮದ್ ಮಿರ್​ ಬಿಲ್ಲಾ (23), ಇಶ್ಫಾಕ್​ ಅಹ್ಮದ್ ಭಟ್​(24), ಮೆಹ್ರಾಜ್​ ಉದ್​ ದಿನ್ ಛೋಪಾನ್​(22) ಎಂಬ ನಾಲ್ವರ ವಿರುದ್ಧ ಪೂರಕ ಚಾರ್ಜ್​ಶೀಟ್ ಅನ್ನು ದೆಹಲಿಯಲ್ಲಿರುವ ಎನ್​ಐಎ ಸ್ಪೆಷಲ್ ಕೋರ್ಟ್​ಗೆ ಮಂಗಳವಾರ ಸಲ್ಲಿಸಲಾಗಿದೆ. ಐಪಿಸಿಯ ವಿವಿಧ ಸೆಕ್ಷನ್​ಗಳು, ಎಕ್ಸ್​ಪ್ಲೋಸಿವ್​ ಸಬ್​ಸ್ಟಾನ್ಸ್​ ಆ್ಯಕ್ಟ್​, ಅನ್​ಲಾಫುಲ್​ ಆ್ಯಕ್ಟಿವಿಟೀಸ್​ ಪ್ರಿವೆನ್ಶನ್​ ಆ್ಯಕ್ಟ್​(ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ.

    ಜೆಇಎಂನ ಹಿರಿಯ ಕಮಾಂಡರ್​ಗಳು ದೆಹಲಿ-ಎನ್​ಸಿಆರ್ ಪ್ರದೇಶ ಸೇರಿ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಂಚನ್ನು ರೂಪಿಸಿದ್ದರು ಎಂಬ ಮಾಹಿತಿ ಇವರಿಂದ ಬಹಿರಂಗವಾಗಿದೆ. ತನಿಖೆ ವೇಳೆ ಈ ನಾಲ್ವರು ಆರೋಪಿಗಳು ಜೆಇಎಂ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ.

    ಮಿಲಿಟರಿ ಕಾರ್ಯಾಚರಣೆಯ ವೇಳೆ ಕಳೆದ ವರ್ಷದ ಮಾರ್ಚ್ 10ರಂದು ತ್ರಾಲ್​ನಲ್ಲಿ ಹತನಾದ ಉಗ್ರ ಮುದಾಸ್ಸಿರ್ ಅಹ್ಮದ್ ಖಾನ್​ ಪುಲ್ವಾಮಾ ಉಗ್ರ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬ. ಬಂಧಿತ ಆರೋಪಿಗಳ ಪೈಕಿ ಸಾಜ್ಜದ್​ ನೇರವಾಗಿ ಮುದಾಸ್ಸಿರ್ ಜತೆಗೆ ಸಂಪರ್ಕದಲ್ಲಿದ್ದ. ಇಶ್ಫಾಕ್ ಅಹ್ಮದ್ ಭಟ್​ ಜೆಇಎಂ ಬಲ ಪಡಿಸುವುದಕ್ಕಾಗಿ ಶಸ್ತ್ರಾಸ್ತ್ರಗಳ ಸಾಗಣೆ ಮಾಡುವುದರಲ್ಲಿ, ಉಗ್ರರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುವುದರಲ್ಲಿ ಭಾಗಿಯಾಗಿದ್ದ. ಮೆಹ್ರಾಜ್​ ಉದ್ ದಿನ್ ಛೋಪಾನ್​ ಬಳಿ ಒಂದು ಹ್ಯಾಂಡ್ ಗ್ರೆನೇಡ್ ಸಿಕ್ಕಿದ್ದು, ಸೇನಾ ನೆಲೆಗಳ ಮೇಲೆ ದಾಳಿ ಎಸಗಿ ಅಲ್ಲಿಂದ ಶಸ್ತ್ರಾಸ್ತ್ರ ದೋಚುವುದಕ್ಕೆ ಬಳಸುತ್ತಿದ್ದ ಎಂದು ಎನ್​ಐಎ ಹೇಳಿದೆ.

    ಇದಕ್ಕೂ ಮೊದಲು ಎನ್​ಐಎ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಸಾಜ್ಜದ್​ ಅಹ್ಮದ್ ಖಾನ್​, ತನ್ವೀರ್ ಅಹ್ಮದ್​ ಗಣಿ, ಬಿಲಾಲ್ ಅಹ್ಮದ್​ ಮಿರ್ ಅಲಿಯಾಸ್ ಬಿಲ್ಲಾ, ಮುಜಾಫರ್​ ಅಹ್ಮದ್ ಭಟ್ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts