More

    ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಸಿಕ್ಕಿಬಿದ್ದ ಪ್ರಮುಖ ಆರೋಪಿಯ ಸ್ನೇಹಿತ

    ಬೆಂಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯ ಸ್ನೇಹಿತನನ್ನು ಬಂಧಿಸಲಾಗಿದೆ. ಐಇಡಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯ ಸ್ನೇಹಿತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳ ವರದಿಯಲ್ಲಿ ತಿಳಿಸಲಾಗಿದೆ. ಶಬ್ಬೀರ್ ಎಂಬಾತನನ್ನು ಕರ್ನಾಟಕದ ಬಳ್ಳಾರಿ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಬಂಧಿತ ವ್ಯಕ್ತಿ ಪ್ರಮುಖ ಶಂಕಿತನ ಸಹಚರ ಎಂದು ನಂಬಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.  

    ಸ್ಫೋಟದ ಬಗ್ಗೆ ಶಬ್ಬೀರ್‌ಗೆ ಮಾಹಿತಿ ಇದ್ದು, ಆತನ ಇತ್ತೀಚಿನ ಪ್ರಯಾಣ ಇತಿಹಾಸದ ಆಧಾರದಲ್ಲಿ ಬಂಧಿಸಲಾಗಿದೆ.

    ಪ್ರಕರಣದ ಜಂಟಿ ತನಿಖೆ ನಡೆಸುತ್ತಿರುವ ಎನ್‌ಐಎ ಮತ್ತು ಕೇಂದ್ರ ಅಪರಾಧ ದಳವು ಕಳೆದ ವಾರ ಬಳ್ಳಾರಿಯ ಕೌಲ್ ಬಜಾರ್‌ನಲ್ಲಿ ಒರ್ವ ಬಟ್ಟೆ ವ್ಯಾಪಾರಿ ಹಾಗೂ ನಿಷೇಧಿತ ಪಿಎಫ್‌ಐ ಸದಸ್ಯನನ್ನು ಬಂಧಿಸಿದ್ದವು. ಬಂಧಿತ ಇಬ್ಬರಲ್ಲಿ, ನಿಷೇಧಿತ ಪಿಎಫ್‌ಐ ಸದಸ್ಯ ಈ ಅಪರಾಧ ಸಂಚಿನಲ್ಲಿ ಭಾಗಿಯಾಗಿದ್ದಾನೆ. ಆತ ಕೆಲವು ಭಯೋತ್ಪಾದನಾ ಸಂಘಟನೆಗಳ ಜತೆ ಸಮೀಪದ ನಂಟು ಹೊಂದಿದ್ದಾನೆ. ಕೆಫೆಯಲ್ಲಿ ಬಾಂಬ್ ಇರಿಸಿದಾತ ಸೇರಿದಂತೆ ಅನೇಕ ವ್ಯಕ್ತಿಗಳನ್ನು ಪಿಎಫ್‌ಐ ಸದಸ್ಯ ಬ್ರೇನ್‌ವಾಶ್ ಮಾಡಿದ್ದಾನೆ ಎಂದು ತನಿಖಾ ತಂಡಗಳು ಶಂಕಿಸಿವೆ.  

    ಸ್ಫೋಟದ ದಿನದಂದು ಭದ್ರತಾ ಕ್ಯಾಮೆರಾದ ದೃಶ್ಯಗಳಲ್ಲಿ ಪ್ರಕರಣದ ಪ್ರಮುಖ ಆರೋಪಿ ಕೆಫೆಯಲ್ಲಿ ಚೀಲವನ್ನು ಬಿಟ್ಟು ಹೋಗುತ್ತಿರುವುದು ಕಂಡುಬಂದಿದೆ. ಮಾರ್ಚ್ 3 ರಂದು ಪ್ರಕರಣವನ್ನು ಕೈಗೆತ್ತಿಕೊಂಡ ಭಯೋತ್ಪಾದನಾ ನಿಗ್ರಹ ಸಂಸ್ಥೆ, ಪ್ರಮುಖ ಶಂಕಿತನನ್ನು ಗುರುತಿಸಲು ಸಾರ್ವಜನಿಕರ ಸಹಾಯವನ್ನು ಕೋರಿತ್ತು. ಅವನು ಮಾರ್ಚ್ 1 ರಂದು ಬೆಂಗಳೂರಿನ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಇಟ್ಟಿದ್ದನು.

    ಸ್ಫೋಟದ ಬಳಿಕ ಆತ ಕ್ಯಾಪ್ ಹಾಕಿಕೊಂಡು ತಿರುಗಾಡುತ್ತಿದ್ದ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿದ್ದವು. ಬಸ್ ನಿಲ್ದಾಣದ ಒಳಗೆ ತಿರುಗಾಡುತ್ತಿರುವುದು ಕಂಡುಬಂದಿದೆ. ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ತೆಗೆದ ಮತ್ತೊಂದು ದೃಶ್ಯಾವಳಿಯಲ್ಲಿ ಶಂಕಿತ ವ್ಯಕ್ತಿ ಬಸ್ ನಿಲ್ದಾಣದೊಳಗೆ ತಿರುಗಾಡುತ್ತಿರುವುದು ಕಂಡು ಬಂದಿದೆ. ಇದಕ್ಕೂ ಮೊದಲು ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಸುಮಾರು ಒಂದು ಗಂಟೆಯ ನಂತರ ಬಸ್‌ ಏರುತ್ತಿರುವುದು ಕಂಡುಬಂದಿದೆ. ತನಿಖಾ ತಂಡದ ಪ್ರಕಾರ, ಘಟನೆಯ ನಂತರ ಶಂಕಿತನು ತನ್ನ ಬಟ್ಟೆಗಳನ್ನು ಬದಲಾಯಿಸಿಕೊಂಡು ಬಸ್‌ನಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣಿಸಿದ್ದಾನೆ.

    ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ. ಮಾಹಿತಿ ನೀಡುವವರ ಗುರುತಿನ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಆರೋಪಿಯ ಛಾಯಾಚಿತ್ರವನ್ನೂ ಸಂಸ್ಥೆ ಬಿಡುಗಡೆ ಮಾಡಿದೆ. 

    ಎಕ್ಸ್‌ನಲ್ಲಿ ಟ್ರೆಂಡ್ ಆದ ‘What’s wrong with India’; ಖಡಕ್ ಠಕ್ಕರ್ ಕೊಟ್ಟ ಭಾರತೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts