More

  ಅಯೋಧ್ಯೆಯಲ್ಲಿ ಮುಂದಿನ ನಾಥಷಷ್ಟಿ ಉತ್ಸವ

  ಬಸವಕಲ್ಯಾಣ: ಮನುಕುಲದ ಸುಧಾರಣೆಯಲ್ಲಿ ವಿಶ್ವದ ಪ್ರಗತಿ ಅಡಗಿದೆ. ಮಾನವ ಜಾತಿ ಕಲ್ಯಾಣಕ್ಕಾಗಿ ಸರ್ವ ಸಂಪ್ರದಾಯದ ಸಂತ-ಮಹಾತ್ಮರು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಕಾಶಿ ಜಗದ್ಗುರು ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.

  ಆಲಗೂಡ ಗ್ರಾಮದಲ್ಲಿ ಔಸಾ ಸಂಸ್ಥಾನದಿಂದ ನಡೆದಿರುವ ೨೨೭ನೇ ಶ್ರೀ ನಾಥಷಷ್ಟಿ ಮಹೋತ್ಸವ ಹಾಗೂ ಗ್ರಾಮದ ಐತಿಹಾಸಿಕ ಶ್ರೀ ಏಕನಾಥ ಮಂದಿರದಲ್ಲಿ ಅಖಂಡ ವೀಣಾವಾದನ ನಾಮಸ್ಮರಣೆಯ ಶತಮಾನೋತ್ಸವ ನಿಮಿತ್ತ ಸೋಮವಾರ ಸಂಜೆ ಏರ್ಪಡಿಸಿದ್ದ ಧರ್ಮ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ಔಸಾ ಸಂಸ್ಥಾನದಿಂದ ಮುಂದಿನ ನಾಥಷಷ್ಟಿ ಉತ್ಸವ ಅಯೋಧ್ಯೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

  ದೇಶದ ಸರ್ವ ಸಂಪ್ರದಾಯದವರನ್ನು ಯಾವುದೇ ಒಂದು ನೆಪದಿಂದ ಒಂದೇ ವೇದಿಕೆಯಲ್ಲಿ ಸೇರಿಸಿ ಸರ್ವಶ್ರೇಷ್ಠ ಜ್ಞಾನ ನೀಡುವ ಕಾರ್ಯ ಮಾಡಲಾಗುತ್ತಿದೆ. ಇಂಥ ಮಹೋನ್ನತ ಕಾರ್ಯವನ್ನು ಔಸಾ ಸಂಸ್ಥಾನ ೨೨೭ ವರ್ಷ ನಿರಂತರ ನಡೆಸಿಕೊಂಡು ಬರುವ ಮೂಲಕ ಜನರಿಗೆ ಜ್ಞಾನ ಮತ್ತು ಪುಣ್ಯಫಲ ನೀಡುತ್ತಿರುವುದು ಹೆಮ್ಮೆ ವಿಷಯ ಎಂದರು.

  ಜೀವನಪೂರ್ತಿ ಮಾಡುವ ತಪಕ್ಕಿಂತಲೂ ಒಂದು ತಾಸು ಮಾಡಿದ ಸತ್ಸಂಗದ ಫಲ ಶ್ರೇಷ್ಠ. ರಾಗ-ಧ್ವೇಷ ಅಳಿಸಿ ಹೋಗದ ಹೊರತು ಜೀವನದಲ್ಲಿ ಶಾಂತಿ, ನೆಮ್ಮದಿ ಸಾಧ್ಯವಿಲ್ಲ. ಜ್ಞಾನ ಶ್ರವಣದಿಂದ ಶಾಂತಿ, ನೆಮ್ಮದಿ, ಭವ ಬಂಧನದಿಂದ ಮುಕ್ತಿ ಸಾಧ್ಯ. ಪುಣ್ಯ ಕ್ಷೇತ್ರಗಳಲ್ಲಿ ನಾಥಷಷ್ಟಿ ಆಯೋಜಿಸುವ ಮೂಲಕ ಜ್ಞಾನಧಾರೆ ಎರೆಯುವ ಮಹತ್ತರ ಕಾರ್ಯ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  ಕಾರ್ಯಕ್ರಮ ಉದ್ಘಾಟಿಸಿದ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿ, ಭಕ್ತರಿಗೆ ಜ್ಞಾನದ ಬೆಳಕು ತೋರುತ್ತ ಹೃದಯದಲ್ಲಿ ಚಿರಸ್ಥಾಯಿಯಾಗಿ ಇರುವವರೇ ನಿಜವಾದ ಸಂತರು. ಅಂಥವರ ಸಾಲಿನಲ್ಲಿ ಶ್ರೀ ಗುರುಬಾಬಾ ಮಹಾರಾಜ ಔಸೇಕರ್ ನಿಲ್ಲುತ್ತಾರೆ ಎಂದು ಕೊಂಡಾಡಿದರು.

  ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ಶರಣು ಸಲಗರ, ಮಾಜಿ ಎಂಎಲ್ಸಿ ವಿಜಯಸಿಂಗ್, ಉಸ್ಮಾನಾಬಾದ್ ಜನತಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಸಂತರಾವ ನಾಗದೆ ಮಾತನಾಡಿದರು.

  ಔಸಾ ಸಂಸ್ಥಾನದ ಶ್ರೀ ಗುರುಬಾಬಾ ಮಹಾರಾಜ ಔಸೇಕರ್ ನೇತೃತ್ವ ವಹಿಸಿದ್ದರು. ಪಂಢರಾಪುರ ವಿಠ್ಠಲ್-ರುಕ್ಮಿಣಿ ದೇವಸ್ಥಾನ ಕಮಿಟಿ ಸಹ ಅಧ್ಯಕ್ಷ ಶ್ರೀ ಗಹನಿನಾಥ ಮಹಾರಾಜ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ ನಿರೂಪಣೆ ಮಾಡಿದರು.

  ಶ್ರೀ ಗೋರಖನಾಥ ಮಹಾರಾಜ, ಶ್ರೀ ಜ್ಞಾನರಾಜ ಮಹಾರಾಜ, ಶ್ರೀ ಶ್ರೀರಂಗ ಮಹಾರಾಜ, ಶ್ರೀ ಜೀತೇಶ್ವರ ಮಹಾರಾಜ, ಗ್ರಾಪಂ ಅಧ್ಯಕ್ಷೆ ಮೇಘಾ ಸಗರ, ಉಪಾಧ್ಯಕ್ಷ ದಿನೇಶ ರಾಠೋಡ್, ಮಹಾರಾಷ್ಟ್ರ ಸರ್ಕಾರದ ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿ ವೆಂಕಟರಾವ ಗಾಯಕವಾಡ, ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ, ಏಕನಾಥ ದೇವಸ್ಥಾನ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಾಟೀಲ್, ಪ್ರಮುಖರಾದ ನೀಲಕಂಠ ರಾಠೋಡ್, ಶಿವರಾಜ ನರಶೆಟ್ಟಿ, ರಾಜು ಪಾಟೀಲ್, ಮಲ್ಲಿನಾಥ ಹಿರೇಮಠ, ದಾದಾ ಪಾಟೀಲ್, ವಿಜಯಕುಮಾರ ಉಕ್ಕಾವಾಲೆ, ಅನೀಲ ಸೋಮವಂಶಿ, ಶರಣು ಪೆದ್ದೆ, ರವಿ ಠಮಕೆ, ಓಂಪ್ರಕಾಶ ಬಿರಾದಾರ, ರಾಜಕುಮಾರ ವಾಡಿಕರ, ಅರವಿಂದ ವಾಡಿಕರ, ಗುಲಾಬ್ ಪಾಟೀಲ್, ಜೈಹಿಂದರಾವ ಹಂತಾಳೆ, ವಿಲಾಸ ವಾಡಿಕರ ಇತರರಿದ್ದರು.

  ಹಾರಕೂಡ ಸಂಸ್ಥಾನ ವೀರಶೈವ ಮಠ ಪರಂಪರೆಯಲ್ಲಿ ಉತ್ಕೃಷ್ಟ ಸೇವಾ ಪರಂಪರೆಯ ಮಠ. ಸಾಹಿತ್ಯ ಮತ್ತು ವಚನ ಸಾಹಿತ್ಯ ಪ್ರಕಾಶನದ ಮೂಲಕ ವಿಶ್ವವಿದ್ಯಾಲಯ ಮಾಡಲು ಆಗದಂಥ ಕೆಲಸ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಮಾಡಿದ್ದಾರೆ. ಸರ್ವ ಸಂಪ್ರದಾಯದ ಸೌಹಾರ್ದ ಸಪನ್ನರಾಗಿ ಎಲ್ಲರನ್ನು ಸಮನ್ವಯದಿಂದ ಕಾಣುವ ಅವರ ಸಾಮಾಜಿಕ, ಸಾಹಿತ್ಯಿಕ ಸೇವೆ ಅನನ್ಯ.
  | ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾಶಿ ಜಗದ್ಗುರುಗಳು

  ಬಡವನ ಗುಡಿಸಲಿನಲ್ಲಿನ ಮಣ್ಣಿನ ಹಣತೆಯಲ್ಲಿ ದೀಪ ಹಾಗೂ ಶ್ರೀಮಂತನ ಮನೆಯಲ್ಲಿ ಚಿನ್ನದ ಹಣತೆಯಲ್ಲಿ ಹಚ್ಚಿದ ದೀಪ ಬೇರೆ ಬೇರೆ ಆದರೂ ಬೆಳಗುವ ಬೆಳಕು ಒಂದೇ ಇರುವಂತೆ ಬಡವನಾಗಿರಲಿ, ಶ್ರೀಮಂತನಾಗಿರಲಿ ಎಲ್ಲರನ್ನು ಒಂದೇ ಭಾವದಿಂದ ಸಮಾನವಾಗಿ ಆಶೀರ್ವದಿಸಿ ದಿವ್ಯ ಆಧ್ಯಾತ್ಮಿಕ ಬೆಳಕು ಕೊಡುತ್ತಿರುವ ಶ್ರೀ ಗುರುಬಾಬಾ ಮಹಾರಾಜ ಔಸೇಕರ್ ಮಹಾ ಸಂತರು.
  | ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹಾರಕೂಡ ಸಂಸ್ಥಾನ ಹಿರೇಮಠ

  ಜ್ಞಾನದ ಬೆಳಕು ನೀಡುವ ಮೂಲಕ ಜನರ ಬದುಕು ಬೆಳಗಿಸುವುದೇ ನಾಥಷಷ್ಟಿ ಉತ್ಸವದ ಮುಖ್ಯ ಆಶಯ. ಇಂಥ ಉತ್ಸವ, ಸತ್ಸಂಗಗಳಲ್ಲಿ ಪೂಜ್ಯರ ಮಾತುಗಳನ್ನು ಕೇಳುವುದರಿಂದ ಮನಸ್ಸು ಪರಿವರ್ತನೆಯಾಗಿ ಶಾಂತಿ, ನೆಮ್ಮದಿ ಸಿಗುತ್ತದೆ. ಪರೋಪಕಾರ ಗುಣಗಳನ್ನು ಬೆಳೆಸಿಕೊಂಡು ಬೇರೆಯವರ ಕಷ್ಟದಲ್ಲಿ ನೆರವಾಗುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ.
  | ಶರಣು ಸಲಗರ ಶಾಸಕ ಬಸವಕಲ್ಯಾಣ

  ಸತ್ಸಂಗಕ್ಕಿದೆ ಮನಸ್ಸು ಪರಿರ್ತಿಸುವ ಶಕ್ತಿ: ಆಧುನಿಕತೆ ಮನುಷ್ಯನ ನಿದ್ದೆ, ನೆಮ್ಮದಿ ಕಸಿಯುತ್ತಿದೆ. ಒತ್ತಡದಲ್ಲಿ ಕಾರ್ಯನಿರ್ವಹಣೆ, ಹೆಚ್ಚುತ್ತಿರುವ ಸ್ವಾರ್ಥ, ಹಣ, ಕೀರ್ತಿಗಾಗಿ ಯಂತ್ರದಂತೆ ಕೆಲಸ ಮಾಡುತ್ತಿರುವುದರಿಂದ ಆಸೆ ಹೆಚ್ಚಾಗಿ ತೃಪ್ತಿ ಇಲ್ಲವಾಗಿದೆ. ಮಾನವೀಯತೆ ಮರೆಯಾಗುತ್ತಿದೆ. ಪರಸ್ಪರ ಪ್ರೀತಿ-ವಿಶ್ವಾಸ ಕಡಿಮೆಯಾಗುತ್ತಿದೆ. ಮನುಷ್ಯನಿಗೆ ಶಾಂತಿ ಸಮಾಧಾನ ಪ್ರವಚನ, ಕೀರ್ತನೆ, ಭಜನೆ, ಸತ್ಸಂಗದಿಂದ ಸಿಗುತ್ತದೆ. ಮನಸ್ಸು ಪರಿವರ್ತಿಸುವ ಶಕ್ತಿ ಸತ್ಸಂಗಕ್ಕಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ಔಸಾ ಸಂಸ್ಥಾನದಿಂದ ೨೨೭ ವರ್ಷಗಳಿಂದ ನಿರಂತರ ನಾಥಷಷ್ಟಿ ಉತ್ಸವ ನಡೆಸಿಕೊಂಡು ಬರುತ್ತಿರುವುದು ಪ್ರಶಂಸನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಾರಕ್ಕೆ ಬಂದ ೧೦ ತಿಂಗಳಲ್ಲಿ ಸರ್ಕಾರ ನೀಡಿದ ಭರವಸೆಯಂತೆ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ಬಸವಕಲ್ಯಾಣದಲ್ಲಿ ೬೫೦ ಕೋಟಿ ವೆಚ್ಚದ ಅನುಭವ ಮಂಟಪ ಕಾಮಗಾರಿ ೨೦೨೫ರಲ್ಲಿ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು. ಕಲ್ಯಾಣವನ್ನು ಆಧ್ಯಾತ್ಮಿಕ, ಸಾಂಸ್ಕೃತಿಕ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.

  ಉತ್ಕೃಷ್ಟ ಉತ್ಸವಕ್ಕೆ ಕೈಜೋಡಿಸಿ: ಔಸಾ ಸಂಸ್ಥಾನದಿಂದ ೨೨೭ನೇ ನಾಥಷಷ್ಟಿ ಮಹೋತ್ಸವ ಆಲಗೂಡದಲ್ಲಿ ನಡೆಯುತ್ತಿದೆ. ಸಮಾಜಕ್ಕೆ ಜ್ಞಾನದ ಬೆಳಕು ತೋರುವ ಮಹತ್ತರ ಕಾರ್ಯ ಔಸಾದಿಂದ ನಡೆಸಿಕೊಂಡು ಬರಲಾಗುತ್ತಿದೆ. ಸತ್ಸಂಗದಲ್ಲಿ ಭಕ್ತಿ-ಶ್ರದ್ಧೆಯಿಂದ ಭಾಗವಹಿಸಿದ ಭಕ್ತರು ಧನ್ಯರು. ೨೨೮ನೇ ನಾಥಷಷ್ಠಿ ಉತ್ಸವ ಮುಂದಿನ ವರ್ಷ ಅಯೋಧ್ಯೆಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಅಯೋಧ್ಯೆಯಲ್ಲಿ ನಡೆಯುವ ವಿಶ್ವಪ್ರಸಿದ್ಧ ನಾಥಷಷ್ಟಿ ಉತ್ಸವ ಉತ್ಕೃಷ್ಟವಾಗಿ ನಡೆಯಲು ಭಕ್ತರು ಕೈಜೋಡಿಸಬೇಕು ಕಾಶಿ ಜಗದ್ಗುರುಗಳು ಕರೆ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts