ಸರ್ಕಾರದ ಸವಲತ್ತು ರೈತರಿಗೆ ತಲುಪಿಸಿ

3MDG1 krishi
ಮೂಡಿಗೆರೆ ಕೆವಿಕೆಯಲ್ಲಿ ಸಹಕಾರ ಸಂಘ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಪ್ರಾದೇಶಿಕ ಸಮ್ಮೇಳನವನ್ನು ಸಹಕಾರ ಸಂಘಗಳ ಉಪನಿಬಂಧಕಿ ಡಿ.ತೇಜಸ್ವಿನಿ ಉದ್ಘಾಟಿಸಿದರು. ಡಿ.ಆರ್.ಬಾಲಕೃಷ್ಣ, ತನಿಶಾಲಾಲ್, ಡಾ. ಎ.ಟಿ.ಕೃಷ್ಣಮೂರ್ತಿ, ಡಾ. ಶಿವಪ್ರಸಾದ್, ಹರಿಪ್ರಸಾದ್, ದಯಾನಂದ, ಪೂರ್ಣೇಶ್ ಇತರರಿದ್ದರು.
Published on

ಮೂಡಿಗೆರೆ: ಸರ್ಕಾರದ ಸವಲತ್ತುಗಳನ್ನು ರೈತರಿಗೆ ತಲುಪಿಸಲು ಸಹಕಾರ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಹೆಚ್ಚಿನ ಶ್ರಮವಹಿಸಿ ರೈತರಿಗೆ ವರದಾನವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಂಸ್ಥೆಯಿಂದ ಮಂಗಳವಾರ ಏರ್ಪಡಿಸಿದ್ದ ಸಹಕಾರ ಸಂಘ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಕಾರ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ರೈತರಿಗೆ ಪ್ರೋತ್ಸಾಹವಾಗುವ ರೀತಿಯಲ್ಲಿ ಹೆಚ್ಚಿನ ಅನುದಾನ ನೀಡುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ಕೂಡ ರೈತರಿಗೆ ಪೂರಕವಾದ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದರು.

ಸರ್ಕಾರದ ಅನುದಾನವನ್ನು ಗ್ರಾಮೀಣ ಪ್ರದೇಶದ ರೈತರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ. ರೈತರಿಗೆ ವಿವಿಧ ಬೆಳೆಗಳ ಬಗ್ಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಸಹಕಾರ ಸಂಘಗಳ ಉಪನಿಬಂಧಕಿ ಡಿ.ತೇಜಸ್ವಿನಿ ಮಾತನಾಡಿ, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಂಸ್ಥೆಗಳು ಅನೇಕ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿದೆ. ಸರ್ಕಾರ ವಿವಿಧ ರೀತಿಯಲ್ಲಿ ರೈತರಿಗಾಗಿ ಯೋಜನೆಗಳನ್ನು ರೂಪಿಸಿದರೆ ಅವುಗಳು ಆಯಾ ಪ್ರಾದೇಶಿಕ ಅವಶ್ಯಕತೆಗೆ ಅನುಗುಣವಾಗಿರಬೇಕು. ರೈತರಿಗೆ ಸಂಬಂಧಿಸಿದ ಕೃಷಿ ಚಟುವಟಿಕೆಯ ವಿಚಾರದ ಬಗ್ಗೆ ನೀಡುವ ತರಬೇತಿಗಳು ಸರಳವಾಗಿರಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ, ತೋಟಗಾರಿಕಾ ಮಹಾವಿದ್ಯಾಲಯದ ಡಾ. ಶಿವಪ್ರಸಾದ್, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಂಸ್ಥೆ ಸಹಾಯಕ ನಿರ್ದೇಶಕ ಹರಿಪ್ರಸಾದ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ದಯಾನಂದ, ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಎಚ್.ಕೆ.ಪೂರ್ಣೇಶ್, ಕೆವಿಕೆ ವಿಜ್ಞಾನಿ ಡಾ. ಸುರೇಶ್, ಮಹೇಶ್‌ಚಂದ್ರ, ಗುರು, ಅಮರ್, ಡಾ. ಸುಚಿತ್ರಾ ಕುಮಾರ್, ಡಿ.ಹರಿಪ್ರಸಾದ್, ಸ್ನೇಹಾ ಸೀಗೆಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net