

ಮೂಡಿಗೆರೆ: ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ನೀಡುವ ತಾಂತ್ರಿಕ ತರಬೇತಿ ಹಾಗೂ ಕಾರ್ಯಾಗಾರಗಳಲ್ಲಿ ರೈತರು ಮಾಹಿತಿ ಪಡೆದು ಕೃಷಿ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕಾ ಇಲಾಖೆಯಿಂದ ಅಡಕೆಗೆ ಎಲೆಚುಕ್ಕೆ ರೋಗ, ಕಾಳುಮೆಣಸು ಬೆಳೆಗೆ ತಗಲುವ ರೋಗ ಹಾಗೂ ಕೀಟ ನಿಯಂತ್ರಣದ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಜನರಿಗೆ ವಿವಿಧ ಯೋಜನೆಗಳ ಮಾಹಿತಿಗಳನ್ನು ಸಕಾಲದಲ್ಲಿ ನೀಡಲಾಗುತ್ತಿದೆ. ಸರ್ಕಾರದ ಸವಲತ್ತುಗಳನ್ನು ರೈತರಿಗೆ ತಲುಪಿಸಲಾಗುತ್ತಿದೆ. ಎಲ್ಲ ಪ್ರಯೋಜನಗಳನ್ನು ಪಡೆದುಕೊಂದಾಗ ಮಾತ್ರ ರೈತರು ಹೆಚ್ಚಿನ ಬೆಳೆ ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್ ಮಾತನಾಡಿ, ಅಡಕೆ, ಕಾಫಿ, ಕಾಳುಮೆಣಸು, ಬಾಳೆ, ಭತ್ತ ಮತ್ತು ಶುಂಠಿ ಕೃಷಿಯಲ್ಲಿ ಹವಾಮಾನಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಿರುತ್ತವೆ. ಅಂತಹ ಸಮಯದಲ್ಲಿ ರೈತರಿಗೆ ಮಾಹಿತಿ ಕಾರ್ಯಾಗಾರ ಅವಶ್ಯವಿರುತ್ತದೆ. ಕೆವಿಕೆ ವಿಜ್ಞಾನಿಗಳು ಆಗಾಗ ರೈತರಿಗೆ ಮಾಹಿತಿ ನೀಡುವುದರಿಂದ ಕೃಷಿ ಚಟುವಟಿಕೆಗೆ ವರದಾನವಾಗಿದೆ. ಕೃಷಿ ಸಂಬಂಧಿತ ಮಾಹಿತಿಯನ್ನು ರೈತರು ಆಗಾಗ ಪಡೆದುಕೊಂಡು ಕೃಷಿಯಲ್ಲಿ ಅಳವಡಿಸಿಕೊಂಡರೆ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಡಾ. ಸುಚಿತ್ರಾಕುಮಾರಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎ.ಬಿ.ಶ್ವೇತಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ, ಕೃಷಿಕ ಸಮಾಜದ ಪೂರ್ಣೇಶ್, ಜಗನ್ನಾಥ ಗೌಡ, ಯು.ಹೊಸಳ್ಳಿ, ಎಂ.ಎಂ.ಮಂಜುನಾಥ ಗೌಡ ಇತರರಿದ್ದರು.