Year Ender 2026: ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ 6 ಸಿನಿಮಾಗಳು; ಸ್ಟಾರ್ ನಟರ ಚಿತ್ರಗಳಿಗೂ ಸಿಗಲಿಲ್ಲ ಗೆಲುವು!

Year Ender 2026
2026ರ ಬಿಗ್ ಫ್ಲಾಪ್ ಸಿನಿಮಾಗಳು
Published on: 

Year Ender 2026: 2026ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದರೆ, ಇನ್ನೂ ಕೆಲವು ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲೇ ಎಡವಿವೆ. ಸ್ಟಾರ್ ನಟರಿದ್ದರೂ, ವಿಭಿನ್ನ ಕಥೆಗಳಿದ್ದರೂ ಅದೃಷ್ಟ ಕೈಹಿಡಿಯಲಿಲ್ಲ.

ಇನ್ನು, ದೊಡ್ಡ ನಿರೀಕ್ಷೆಗಳೊಂದಿಗೆ ತೆರೆಕಂಡು ಕೊನೆಗೆ ಬಾಕ್ಸ್ ಆಫೀಸ್‌ನಲ್ಲಿ ನಿರಾಸೆ ಮೂಡಿಸಿದ ಚಿತ್ರಗಳ ಪಟ್ಟಿಯೂ ದೊಡ್ಡದಿದೆ. ಹಾಗಾದರೆ, ಈ ವರ್ಷ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾದ ಆ 6 ಸಿನಿಮಾಗಳು ಯಾವುವು? ಇಲ್ಲಿದೆ ವಿವರ.

1. ಗಿನ್ನಿ ವೆಡ್ಸ್ ಸನ್ನಿ 2

ಅವಿನಾಶ್ ತಿವಾರಿ ಮತ್ತು ಮೇಧಾ ಶಂಕರ್ ನಟನೆಯ 'ಗಿನ್ನಿ ವೆಡ್ಸ್ ಸನ್ನಿ 2' ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಸದ್ದು ಮಾಡಲಿಲ್ಲ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಕೋಯ್‌ಮೊಯ್ (Koimoi) ವರದಿ ಪ್ರಕಾರ, ಚಿತ್ರ ವಿಶ್ವಾದ್ಯಂತ ಸುಮಾರು 1.81 ಕೋಟಿ ರೂ. ಗಳಿಸಿ ಫ್ಲಾಪ್ ಎನಿಸಿಕೊಂಡಿದೆ.

2. ಆಖ್ರಿ ಸವಾಲ್

ಸಂಜಯ್ ದತ್ ನಟನೆಯ 'ಆಖ್ರಿ ಸವಾಲ್' ಕೂಡ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಖ್ಯಾತ ನಟನಿದ್ದರೂ ಸಿನಿಮಾ ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಬರಲಿಲ್ಲ. ಚಿತ್ರದ ವಿಶ್ವಾದ್ಯಂತ ಗಳಿಕೆ ಸುಮಾರು 3.96 ಕೋಟಿ ರೂ. ಎಂದು ಕೋಯ್‌ಮೊಯ್ ಬಾಕ್ಸ್ ಆಫೀಸ್ ಟ್ರ್ಯಾಕರ್ ತಿಳಿಸಿದೆ.

3. ಏಕ್ ದಿನ

ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ನಟನೆಯ 'ಏಕ್ ದಿನ' ರೊಮ್ಯಾಂಟಿಕ್ ಡ್ರಾಮಾ ಕೂಡ ನಿರೀಕ್ಷೆಯಂತೆ ಯಶಸ್ಸು ಕಾಣಲಿಲ್ಲ. ಇಬ್ಬರ ಜೋಡಿ ಬಗ್ಗೆ ಕುತೂಹಲವಿದ್ದರೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಚಿತ್ರ ವಿಶ್ವಾದ್ಯಂತ ಸುಮಾರು 5.52 ಕೋಟಿ ರೂ. ಗಳಿಸಿದೆ.

4. ಬಂದರ್

ಬಾಬಿ ಡಿಯೋಲ್ ನಟನೆಯ, ಅನುರಾಗ್ ಕಶ್ಯಪ್ ನಿರ್ದೇಶನದ 'ಬಂದರ್' ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಲು ಸಾಧ್ಯವಾಗಲಿಲ್ಲ. ಚಿತ್ರ ವಿಶ್ವಾದ್ಯಂತ ಸುಮಾರು 4.93 ಕೋಟಿ ರೂ. ಗಳಿಸಿದ್ದು, ಫ್ಲಾಪ್ ಪಟ್ಟಿಗೆ ಸೇರಿದೆ.

5. ಅಸ್ಸಿ

ಅನುಭವ್ ಸಿನ್ಹಾ ನಿರ್ದೇಶನದಲ್ಲಿ ತಾಪ್ಸಿ ಪನ್ನು ನಟಿಸಿದ್ದ ಕೋರ್ಟ್‌ರೂಂ ಡ್ರಾಮಾ 'ಅಸ್ಸಿ' ಕೂಡ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿದೆ. ಪ್ರಮುಖ ಸಾಮಾಜಿಕ ವಿಚಾರವನ್ನು ಆಧರಿಸಿದ್ದರೂ ಹೆಚ್ಚಿನ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಸಾಧ್ಯವಾಗಲಿಲ್ಲ. ಸಿನಿಮಾ ವಿಶ್ವಾದ್ಯಂತ ಸುಮಾರು 14.97 ಕೋಟಿ ರೂ. ಗಳಿಸಿದೆ.

6. ದೋ ದಿವಾನೆ ಶಹರ್ ಮೇ

ಸಿದ್ಧಾಂತ್ ಚತುರ್ವೇದಿ ಮತ್ತು ಮೃಣಾಲ್ ಠಾಕೂರ್ ನಟನೆಯ 'ದೋ ದಿವಾನೆ ಶಹರ್ ಮೇ' ಸಿನಿಮಾ ಕೂಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿದೆ. ರೊಮ್ಯಾಂಟಿಕ್ ಡ್ರಾಮಾ ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಗಲಿಲ್ಲ. ವಿಶ್ವಾದ್ಯಂತ ಸುಮಾರು 9.41 ಕೋಟಿ ರೂ. ಗಳಿಸಿದ ಈ ಸಿನಿಮಾ ಫ್ಲಾಪ್ ಎನಿಸಿಕೊಂಡಿದೆ.

ನಿರೀಕ್ಷೆ ಹುಸಿಗೊಳಿಸಿದ ಇತರ ಸಿನಿಮಾಗಳು

ಈ ಆರು ಸಿನಿಮಾಗಳಲ್ಲದೆ 'ತು ಯಾ ಮೈನ್', 'ಹ್ಯಾಪಿ ಪಟೇಲ್', 'ರಾಹು ಕೇತು', 'ದಾದಿ ಕಿ ಶಾದಿ' ಮತ್ತು 'ವಧ್ 2' ಚಿತ್ರಗಳೂ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಗಿವೆ.

ಇದನ್ನೂ ಓದಿ: ಚಳಿಗಾಲದಲ್ಲಿ ಹೊದಿಕೆಯೊಳಗೆ ನಾಗರಹಾವು ಮಲಗಿಸಿಕೊಳ್ಳುತ್ತಿದ್ದ ಕೈಲಾಶ್ ಖೇರ್: ರೋಚಕ ಸಂಗತಿ ಬಿಚ್ಚಿಟ್ಟ ಖ್ಯಾತ ಗಾಯಕ! Kailash Kher

ಒಟ್ಟಿನಲ್ಲಿ, 2026ರಲ್ಲಿ ಹಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ಪರದಾಡಿವೆ. ಆದರೆ ಚಿತ್ರವೊಂದರ ಒಟ್ಟು ಲಾಭ-ನಷ್ಟವನ್ನು ನಿರ್ಧರಿಸುವಾಗ ಥಿಯೇಟರ್ ಕಲೆಕ್ಷನ್ ಜೊತೆಗೆ ಒಟಿಟಿ, ಸ್ಯಾಟಲೈಟ್ ಮತ್ತು ಮ್ಯೂಸಿಕ್ ಹಕ್ಕುಗಳಿಂದ ಬರುವ ಆದಾಯವನ್ನೂ ಪರಿಗಣಿಸಬೇಕಾಗುತ್ತದೆ.