ಇರುವೆಗಳೇ ಇಲ್ಲದಿದ್ರೆ ಭೂಮಿ ಏನಾಗುತ್ತೆ? ಈ ಪುಟ್ಟ ಜೀವಿಗಳ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ! | Ants Importance

ಗಾತ್ರದಲ್ಲಿ ಪುಟ್ಟದಾಗಿದ್ರೂ ಇರುವೆಗಳು ಪರಿಸರ ಸಮತೋಲನ ಕಾಪಾಡೋಲ್ಲಿ ದೊಡ್ಡ ಪಾತ್ರ ವಹಿಸುತ್ತವೆ. ಒಂದು ವೇಳೆ ಇರುವೆಗಳೇ ಇಲ್ಲದಿದ್ರೆ ಪರಿಸರ ಹೇಗಿರುತ್ತಿತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ.
Ants Importance,
ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಇರುವೆಗಳು
Published on: 

Ants Ecosystem: ಪುಟ್ಟ ಇರುವೆಗಳು ಮಾಡೋ ಕೆಲಸ ಇಷ್ಟೊಂದಾ? ಹೌದು.. ಮನೆ, ತೋಟ, ಕಾಡು ಹೀಗೆ ಎಲ್ಲ ಕಡೆ ಕಾಣಿಸೋ ಪುಟ್ಟ ಇರುವೆಗಳನ್ನು ನಾವು ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಆದರೆ ಪರಿಸರಕ್ಕೆ ಇವು ಮಾಡೋ ಕೆಲಸ ಮಾತ್ರ ಸಣ್ಣದಲ್ಲ. ಇರುವೆಗಳೇ ಭೂಮಿಯಿಂದ ಸಂಪೂರ್ಣವಾಗಿ ಮಾಯವಾದ್ರೆ, ಮಣ್ಣು, ಸಸ್ಯಗಳು, ಆಹಾರ ಸರಪಳಿ ಸೇರಿದಂತೆ ಇಡೀ ಪರಿಸರ ವ್ಯವಸ್ಥೆ ಮೇಲೆ ದೊಡ್ಡ ಪರಿಣಾಮ ಬೀರುತ್ತಿತ್ತು.

ಇರುವೆಗಳು ಮಣ್ಣಿನಲ್ಲಿ ಗೂಡು ಮಾಡಿಕೊಂಡು, ಅಲ್ಲಲ್ಲಿ ದಾರಿ ಮಾಡುತ್ತಾ ಮಣ್ಣು ಅಗೆಯುತ್ತಲೇ ಇರುತ್ತವೆ. ಇದರಿಂದ ಮಣ್ಣಿನೊಳಗೆ ಗಾಳಿ ಹೋಗಲು ಸಹಾಯವಾಗುತ್ತೆ. ಮಳೆನೀರು ಕೂಡ ಸುಲಭವಾಗಿ ಮಣ್ಣಿನೊಳಗೆ ಇಂಗುತ್ತೆ. ಇರುವೆಗಳೇ ಇಲ್ಲದಿದ್ರೆ ಮಣ್ಣು ಗಟ್ಟಿಯಾಗುತ್ತಾ ಹೋಗಿ, ಸಸ್ಯಗಳು ಬೆಳೆಯೋಕೆ ಬೇಕಾದ ನೈಸರ್ಗಿಕ ವಾತಾವರಣಕ್ಕೂ ತೊಂದರೆಯಾಗುತ್ತಿತ್ತು.

ಪ್ರಕೃತಿಯ ಸ್ವಚ್ಛತಾ ಕಾರ್ಮಿಕರು

ಇರುವೆಗಳನ್ನು ಪ್ರಕೃತಿಯ ‘ಸ್ವಚ್ಛತಾ ಕಾರ್ಮಿಕರು’ ಅಂತ ಕರೆಯಬಹುದು. ಸತ್ತ ಕೀಟಗಳು, ಪ್ರಾಣಿಗಳ ಅವಶೇಷಗಳು, ಕೊಳೆಯೋ ಎಲೆಗಳನ್ನು ತಿನ್ನುವ ಮೂಲಕ ಪರಿಸರವನ್ನು ಸ್ವಚ್ಛವಾಗಿಡೋಕೆ ಇವು ಸಹಾಯ ಮಾಡುತ್ತವೆ. ಇರುವೆಗಳೇ ಇಲ್ಲದಿದ್ರೆ ಇಂಥ ಸಾವಯವ ತ್ಯಾಜ್ಯಗಳು ಹಾಗೇ ಉಳಿದು, ಕೊಳೆ ಹಾಗೂ ರೋಗರುಜಿನಗಳ ಸಮಸ್ಯೆ ಹೆಚ್ಚಾಗೋ ಸಾಧ್ಯತೆ ಇತ್ತು.

ಸಸ್ಯಗಳ ಬೀಜ ಬಿತ್ತುವ ಇರುವೆಯಣ್ಣ

ಕೆಲವು ಸಸ್ಯಗಳ ಬೀಜಗಳನ್ನು ಇರುವೆಗಳು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೊತ್ತೊಯ್ಯುತ್ತವೆ. ಈ ಪ್ರಕ್ರಿಯೆಯನ್ನು ‘ಮೈರ್ಮೆಕೋಕೋರಿ’ ಅಂತ ಕರೆಯಲಾಗುತ್ತೆ. ಇದರಿಂದ ಸಸ್ಯಗಳ ಬೀಜಗಳು ಹೊಸ ಜಾಗಗಳಿಗೆ ಹರಡುತ್ತವೆ. ಇರುವೆಗಳೇ ಇಲ್ಲದಿದ್ರೆ ಈ ರೀತಿ ಬೀಜ ಹರಡುವುದನ್ನೇ ಅವಲಂಬಿಸಿರುವ ಹಲವು ಸಸ್ಯ ಪ್ರಭೇದಗಳಿಗೆ ತೊಂದರೆಯಾಗುತ್ತಿತ್ತು.

Myrmecocory
ಇರುವೆಗಳಿಂದ ಸಸ್ಯಗಳ ಬೀಜ ಪ್ರಸರಣ

ಆಹಾರ ಸರಪಳಿಯಲ್ಲೂ ಪುಣಾಣಿಗಳ ಪಾತ್ರ

ಇರುವೆಗಳು ಹಲವು ಜೀವಿಗಳಿಗೆ ಆಹಾರವೂ ಹೌದು. ಪಕ್ಷಿಗಳು, ಹಲ್ಲಿಗಳು, ಕಪ್ಪೆಗಳು, ಕರಡಿಗಳು ಸೇರಿದಂತೆ ಹಲವು ಪ್ರಾಣಿಗಳು ಇರುವೆಗಳನ್ನು ತಿನ್ನುತ್ತವೆ. ಹೀಗಾಗಿ ಇರುವೆಗಳು ಸಂಪೂರ್ಣವಾಗಿ ನಾಶವಾದ್ರೆ, ಅವುಗಳನ್ನು ಆಹಾರವಾಗಿ ಅವಲಂಬಿಸಿರುವ ಜೀವಿಗಳ ಮೇಲೂ ಪರಿಣಾಮ ಬೀರುತ್ತಿತ್ತು. ಇದರಿಂದ ಆಹಾರ ಸರಪಳಿಯಲ್ಲೂ ಏರುಪೇರು ಉಂಟಾಗುತ್ತಿತ್ತು.

ಹಾನಿಕಾರಕ ಕೀಟಗಳ ನಿಯಂತ್ರಣ

ಇರುವೆಗಳು ಹಲವು ಸಣ್ಣ ಕೀಟಗಳು ಹಾಗೂ ಅವುಗಳ ಲಾರ್ವಾಗಳನ್ನು ಬೇಟೆಯಾಡಿ ತಿನ್ನುತ್ತವೆ. ಹೀಗಾಗಿ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸೋ ಕೆಲಸವನ್ನೂ ಮಾಡುತ್ತವೆ. ಇರುವೆಗಳೇ ಇಲ್ಲದಿದ್ರೆ ಕೆಲವು ಹಾನಿಕಾರಕ ಕೀಟಗಳ ಸಂಖ್ಯೆ ಹೆಚ್ಚಾಗಬಹುದು. ಇದರಿಂದ ಬೆಳೆಗಳು ಮತ್ತು ಸಸ್ಯಗಳಿಗೆ ಹೆಚ್ಚು ಹಾನಿಯಾಗೋ ಸಾಧ್ಯತೆ ಇದ್ದು, ಕೃಷಿಯ ಮೇಲೂ ಪರಿಣಾಮ ಬೀರುತ್ತಿತ್ತು.

Nature's cleaning work
ಪ್ರಕೃತಿಯ ಸ್ವಚ್ಛತಾ ಕೆಲಸಕ್ಕೂ ಇರುವೆಗಳ ಕೊಡುಗೆ

ಪುಟ್ಟ ಜೀವಿ, ದೊಡ್ಡ ಕೆಲಸ

ಗಾತ್ರದಲ್ಲಿ ಪುಟ್ಟದಾಗಿದ್ರೂ ಇರುವೆಗಳು ಪರಿಸರದಲ್ಲಿ ಹಲವು ಮುಖ್ಯ ಕೆಲಸ ಮಾಡುತ್ತವೆ. ಮಣ್ಣಿನ ಆರೋಗ್ಯ ಕಾಪಾಡೋದು, ತ್ಯಾಜ್ಯ ಕಡಿಮೆ ಮಾಡೋದು, ಸಸ್ಯಗಳ ಬೀಜ ಹರಡೋದು, ಆಹಾರ ಸರಪಳಿಗೆ ಕೊಡುಗೆ ನೀಡೋದು ಹಾಗೂ ಹಾನಿಕಾರಕ ಕೀಟಗಳ ನಿಯಂತ್ರಣ ಹೀಗೆ ಹಲವು ರೀತಿಯಲ್ಲಿ ಇವು ಪರಿಸರಕ್ಕೆ ಸಹಾಯ ಮಾಡುತ್ತವೆ.

ಇದನ್ನೂ ಓದಿ: ರೆಪೋ ದರ ಸದ್ಯಕ್ಕೆ ಯಥಾಸ್ಥಿತಿ; ಡಿಸೆಂಬರ್‌ನಿಂದ ಬಡ್ಡಿ ಏರಿಕೆ? | RBI Repo Rate

ಹೀಗಾಗಿ ಇರುವೆಗಳೇ ಸಂಪೂರ್ಣವಾಗಿ ಮಾಯವಾದ್ರೆ ಪರಿಸರದ ಸಮತೋಲನಕ್ಕೆ ದೊಡ್ಡ ಹೊಡೆತ ಬೀಳುತ್ತೆ. ಇದರ ಪರಿಣಾಮ ಮನುಷ್ಯ ಸೇರಿದಂತೆ ಹಲವು ಜೀವಿಗಳ ಬದುಕಿನ ಮೇಲೂ ಆಗೋ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net