RBI MPC Meeting: ಅಕ್ಟೋಬರ್‌ನ ಹಣಕಾಸು ನೀತಿ ಸಭೆಯಲ್ಲಿ (MPC) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಉಳಿಸುವ ಸಾಧ್ಯತೆ ಇದೆ. ಆದರೆ ಹಣದುಬ್ಬರದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್‌ನಿಂದ ಬಡ್ಡಿದರ ಏರಿಕೆ ಆರಂಭವಾಗಬಹುದು ಎಂದು ಬ್ಯಾಂಕ್ ಆಫ್ ಬರೋಡಾ (BoB) ವರದಿ ಅಂದಾಜಿಸಿದೆ.
ಅಕ್ಟೋಬರ್‌ನಲ್ಲಿ ರೆಪೋ ದರ ಏರಿಕೆ ಮಾಡದೇ, ಡಿಸೆಂಬರ್ 2026ರಿಂದ ಆರ್‌ಬಿಐ ಬಡ್ಡಿದರ ಹೆಚ್ಚಿಸಬಹುದು ಎಂದು ಬ್ಯಾಂಕ್ ಆಫ್ ಬರೋಡಾ ಅಂದಾಜಿಸಿದೆ. ಈ ದರ ಏರಿಕೆ ಚಕ್ರದಲ್ಲಿ ಒಟ್ಟಾರೆ 50ರಿಂದ 75 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಆಗಸ್ಟ್‌ನ ಆರ್‌ಬಿಐ ನೀತಿ ಸಭೆಯ ಬಳಿಕ ಕಚ್ಚಾ ತೈಲ ಬೆಲೆ ಶೇ.28ರಷ್ಟು ಏರಿಕೆಯಾಗಿದೆ. ಅಮೆರಿಕ-ಇರಾನ್ ಉದ್ವಿಗ್ನತೆ, ಅಮೆರಿಕದ ಫೆಡ್ ಬಡ್ಡಿದರ ಏರಿಕೆ, ಬಾಂಡ್ ಯೀಲ್ಡ್ ಹೆಚ್ಚಳ ಮತ್ತು ಹಣದುಬ್ಬರದ ಒತ್ತಡ ಆರ್‌ಬಿಐ ಮುಂದಿರುವ ಪ್ರಮುಖ ಸವಾಲುಗಳಾಗಿವೆ.
2026-27ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.7.8ರಷ್ಟು ಬೆಳವಣಿಗೆ ಕಂಡಿದ್ದು, ಆರ್‌ಬಿಐ ಅಂದಾಜಿಗಿಂತ ಹೆಚ್ಚಾಗಿದೆ. ಹೂಡಿಕೆ ಮತ್ತು ಗ್ರಾಹಕರ ಖರ್ಚು ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣ. ಸೆಪ್ಟೆಂಬರ್‌ನಲ್ಲಿ ಉತ್ಪಾದನಾ ಪಿಎಂಐ 52.8ರಿಂದ 55.1ಕ್ಕೆ, ಸೇವಾ ಪಿಎಂಐ 54.1ರಿಂದ 55.8ಕ್ಕೆ ಏರಿಕೆಯಾಗಿದೆ. ಹೀಗಾಗಿ 2026-27ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.7ರಿಂದ 7.2ರಷ್ಟಿರಬಹುದು ಎಂದು ಬ್ಯಾಂಕ್ ಆಫ್ ಬರೋಡಾ ಅಂದಾಜಿಸಿದೆ.
ಸಿಪಿಐ ಹಣದುಬ್ಬರ ಶೇ.4.8ಕ್ಕೆ ಏರಿಕೆಯಾಗಿದ್ದರೂ, ಇದು ಆರ್‌ಬಿಐನ ಶೇ.2ರಿಂದ 6ರ ಗುರಿ ಮಿತಿಯಲ್ಲೇ ಇದೆ. ಆಹಾರ ಬೆಲೆ ಏರಿಕೆ ಹಣದುಬ್ಬರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಕೋರ್ ಹಣದುಬ್ಬರ ನಿಯಂತ್ರಣದಲ್ಲಿದೆ. ಹೀಗಾಗಿ ಸದ್ಯಕ್ಕೆ ರೆಪೋ ದರ ಹೆಚ್ಚಿಸುವ ಅಗತ್ಯವಿಲ್ಲ. ಹಬ್ಬದ ಸೀಸನ್‌ಗೂ ಮುನ್ನ ದರ ಹೆಚ್ಚಿಸಿದರೆ ಜನರ ಖರ್ಚು ಮತ್ತು ಮಾರುಕಟ್ಟೆಯ ಬೇಡಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ.
ಕಳೆದ ಆರ್‌ಬಿಐ ನೀತಿ ಸಭೆಯ ಬಳಿಕ ಭಾರತದ 10 ವರ್ಷದ ಬಾಂಡ್ ಯೀಲ್ಡ್ 44 ಬೇಸಿಸ್ ಪಾಯಿಂಟ್ ಏರಿಕೆಯಾಗಿ ಶೇ.7.12ಕ್ಕೆ ತಲುಪಿದೆ. ಇದು 29 ತಿಂಗಳ ಗರಿಷ್ಠ ಮಟ್ಟವಾಗಿದೆ. ಕಚ್ಚಾ ತೈಲ ಬೆಲೆ ಏರಿಕೆ, ವಿದೇಶಿ ಹೂಡಿಕೆದಾರರ ಹಣ ಹಿಂತೆಗೆತ ಹಾಗೂ ಬಡ್ಡಿದರ ಏರಿಕೆಯ ನಿರೀಕ್ಷೆ ಯೀಲ್ಡ್ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ಅಕ್ಟೋಬರ್‌ನಲ್ಲಿ ರೆಪೋ ದರ ಯಥಾಸ್ಥಿತಿಯಲ್ಲಿ ಇಟ್ಟರೆ ಬಾಂಡ್ ಯೀಲ್ಡ್ ಮೇಲಿನ ಒತ್ತಡ ಕಡಿಮೆಯಾಗಬಹುದು ಎಂದು ಬ್ಯಾಂಕ್ ಆಫ್ ಬರೋಡಾ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ; ಮದ್ಯದ ಅಮಲಿನಲ್ಲಿ ಕಿರಾತಕರ ಹೈಡ್ರಾಮಾ | Police Attack
ಒಟ್ಟಿನಲ್ಲಿ, ಅಕ್ಟೋಬರ್‌ನಲ್ಲಿ ಆರ್‌ಬಿಐ ಬಡ್ಡಿದರ ಬದಲಿಸದೇ ಇರಬಹುದು. ಆದರೆ ಹಣದುಬ್ಬರ ಮತ್ತು ಮಾರುಕಟ್ಟೆ ಪರಿಸ್ಥಿತಿ ಗಮನಿಸಿ ಡಿಸೆಂಬರ್‌ನಿಂದ ದರ ಏರಿಕೆ ಆರಂಭಿಸುವ ಸಾಧ್ಯತೆ ಇದೆ.(ಏಜೆನ್ಸೀಸ್)