

ಡೆಹ್ರಾಡೂನ್ : ಉತ್ತರಾಖಂಡದ ಹೊಸ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಐಸೋಲೇಷನ್ನಲ್ಲಿರಿಸಿ ವೈದ್ಯಕೀಯ ಶುಶ್ರೂಷೆ ನೀಡಲಾಗುತ್ತಿದೆ. ಕಳೆದೆರಡು ದಿನಗಳಲ್ಲಿ ರಾವತ್ ರಾಜ್ಯದ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಅವರ ನಿಕಟ ಸಂಪರ್ಕಕ್ಕೆ ಬಂದ ಸಚಿವರು, ಅಧಿಕಾರಿಗಳು ಮತ್ತು ಇತರ ಜನರ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ.
“ನನ್ನ ಕರೊನಾ ಟೆಸ್ಟ್ ಪಾಸಿಟೀವ್ ಬಂದಿದೆ. ನಾನು ಆರಾಮವಾಗಿದ್ದೇನೆ, ಯಾವುದೇ ತೊಂದರೆ ಇಲ್ಲ. ವೈದ್ಯರ ಮಾರ್ಗದರ್ಶನದಲ್ಲಿ ನಾನು ಐಸೋಲೇಟ್ ಮಾಡಿಕೊಂಡಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಹತ್ತಿರದ ಸಂಪರ್ಕಕ್ಕೆ ಬಂದಂತಹವರು ಎಚ್ಚರವಾಗಿರಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ" ಎಂದು ರಾವತ್ ಟ್ವೀಟ್ ಮಾಡಿದ್ದಾರೆ. ಹಾಗೇ "ನಾನು ಎಲ್ಲರ ಉತ್ತಮ ಆರೋಗ್ಯವನ್ನು ಬಯಸುತ್ತೇನೆ" ಎಂದೂ ಹೇಳಿದ್ದಾರೆ.
ಭಾನುವಾರದಂದು ಸಿಎಂ ರಾವತ್, ರಾಮನಗರ ಮತ್ತು ಡೆಹರಾಡೂನ್ ಜಿಲ್ಲೆಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಲ್ಲದೆ ಗರ್ಜಿಯಾ ಮಂದಿರಕ್ಕೆ ಕೂಡ ಭೇಟಿ ನೀಡಿದ್ದರು. ಶನಿವಾರ ಹರಿದ್ವಾರದಲ್ಲಿ ಗಂಗಾಪೂಜೆ ಮಾಡಿದ ರಾವತ್ ಹಲವು ಸಂತರನ್ನು ಭೇಟಿ ಮಾಡಿದ್ದರು.
ರಾವತ್ ಅವರು ಇಂದು ನವದೆಹಲಿಗೆ ನಾಲ್ಕು ದಿನಗಳ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮವಿತ್ತು. ದೆಹಲಿಯಲ್ಲಿ, ಪ್ರಧಾನಿ ಮೋದಿ, ಅಮಿತ್ ಷಾ ಮತ್ತು ಇತರ ಸಂಪುಟ ಸಚಿವರನ್ನು ಭೇಟಿಯಾಗಬೇಕಿತ್ತು. ಅದಕ್ಕೂ ಮುಂಚೆ ಕರೊನಾ ಪರೀಕ್ಷೆಯ ಫಲಿತಾಂಶ ಪಾಸಿಟೀವ್ ಬಂದಿದ್ದು, ಇದೀಗ ತಮ್ಮ ನಿವಾಸದಲ್ಲೇ ಐಸೋಲೇಷನ್ನಲ್ಲಿರಲು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)