ಬೆಂಗ್ಳೂರಲ್ಲಿ ಗುಡುಗುಸಹಿತ ವರುಣಾರ್ಭಟ: ಪೀಣ್ಯದಲ್ಲಿ 15 ತಾಸು ಕರೆಂಟ್ ಕಟ್- Thunderstorms with heavy rain lash Bangaluru

ಸೋಮವಾರ ರಾತ್ರಿಯಿಡೀ ಹಾಗೂ ಮಂಗಳವಾರ ಮುಂಜಾನೆ ಸುರಿದ ಗುಡುಗುಸಹಿತ ವರುಣಾರ್ಭಟದಿಂದ ರಾಜಧಾನಿಯ ಹಲವೆಡೆ ಅವಾಂತರ ಸೃಷ್ಟಿಯಾಗಿತ್ತು. ಪರಿಣಾಮ ಸಂಚಾರ ಸಿಕ್ಕು, ವಿದ್ಯುತ್ ಸಂಪರ್ಕ ಕಡಿತ, ಮರಗಳ ಧರಾಶಾಯಿಗಳಾದವು.
Bengaluru Heavy Rain
ಗುಡುಗು ಸಹಿತ ಮಳೆಗೆ ಬೆಚ್ಚಿಬಿದ್ದ ಬೆಂಗಳೂರು
Published on: 

ಬೆಂಗಳೂರು: (15-hour power outage in Peenya) ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ತೇವಾಂಶಭರಿತ ಮೋಡ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಡೀ ಹಾಗೂ ಮಂಗಳವಾರ ಮುಂಜಾನೆ ಸುರಿದ ಗುಡುಗುಸಹಿತ ವರುಣಾರ್ಭಟದಿಂದ ರಾಜಧಾನಿಯ ಹಲವೆಡೆ ಅವಾಂತರ ಸೃಷ್ಟಿಯಾಗಿತ್ತು. ಪರಿಣಾಮ ಸಂಚಾರ ಸಿಕ್ಕು, ವಿದ್ಯುತ್ ಸಂಪರ್ಕ ಕಡಿತ, ಮರಗಳ ಧರಾಶಾಯಿಗಳಾದವು.

ಗೊರಗುಂಟೆಪಾಳ್ಯ ಮುಖ್ಯರಸ್ತೆಯ ಸಿಗ್ನಲ್ ಬಳಿ ಬೃಹತ್ ಮರವೊಂದು ಲಾರಿ ಮೇಲೆ ಉರುಳಿ ಬಿತ್ತು. ಈ ವೇಳೆ ಲಾರಿ ಪಕ್ಕದಲ್ಲೇ ಎರಡು ಕಾರುಗಳು ನಿಂತಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ. ಮರ ಬಿದ್ದ ಪರಿಣಾಮ ಹೊರವರ್ತಲ ರಸ್ತೆ ಸುಮ್ಮನಹಳ್ಳಿ ಹಾಗೂ ತುಮಕೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಜಿಬಿಎ ಸಿಬ್ಬಂದಿ ವೃಕ್ಷ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇಂದಿರಾನಗರ ಮತ್ತು ಎಚ್‌ಎಎಲ್ 2ನೇ ಹಂತ ಸೇರಿ ಕೆಲವು ಪ್ರದೇಶಗಳಲ್ಲಿ ಮರ, ರಂಬೆ-ಕೊಂಬೆಗಳು ಮುರಿದು ಬಿದ್ದಿದ್ದವು. ಇವುಗಳು ಅರಣ್ಯ ಸಿಬ್ಬಂದಿ ತೆರವುಗೊಳಿಸಿದರು.

ರಾಜಗೋಪಾಲನಗರದಲ್ಲಿ ವಿದ್ಯುತ್ ವ್ಯತ್ಯಯ:

ಪೀಣ್ಯದ ರಾಜಗೋಪಾಲನಗರದಲ್ಲಿ ಸತತ 15 ತಾಸು ವಿದ್ಯುತ್ ಸಂಪರ್ಕ ಕಡಿತಗೊಂಡು ನಿವಾಸಿಗಳು ಪರದಾಡಿದರು. ಸೋಮವಾರ ರಾತ್ರಿ 10 ಗಂಟೆಯಿಂದ ಮಂಗಳವಾರ ಮಧ್ಯಾಹ್ನ 1 ಗಂಟೆವರೆಗೆ ವಿದ್ಯುತ್ ಸಂಪರ್ಕ ಸ್ಥಗಿತವಾಗಿತ್ತು. ಇದರಿಂದಾಗಿ ಬೆಳಗ್ಗೆ ಕಚೇರಿಗೆ ತೆರಳುವವರಿಗೆ, ಗಿಗ್ ಕಾರ್ಮಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಉಂಟಾಯಿತು. ಬೆಸ್ಕಾಂ ಸಹಾಯವಾಣಿಗೆ ನಿರಂತರವಾಗಿ ಕರೆಗಳು ಬಂದರೂ, ವಿದ್ಯುತ್ ಕಡಿತದ ಬಗ್ಗೆ ಸಮರ್ಪಕ ಉತ್ತರ ನೀಡದೇ ಸತಾಯಿಸಿದ್ದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಯಿತು.

Also Read
ಸ್ಮಿತ್​ ಮಚ್ಚರ್ ತಲೆಬುರುಡೆಗೂ ಗಂಭೀರ ಗಾಯ: ಮಿದುಳಿಗೆ ಹಾನಿಯಾಗುವ ಮುನ್ನ ಎಮರ್ಜೆನ್ಸಿ ಆಪರೇಷನ್​ ನಡೆಸಿದ ವೈದ್ಯರು! Captain Smit Machchhar
Bengaluru Heavy Rain

ಬೆಳ್ಳಂಬೆಳಗ್ಗೆ ಸಂಚಾರ ಸಿಕ್ಕು:

ಚಂದಾಪುರದಲ್ಲಿ ರಸ್ತೆ ಕಾಮಗಾರಿಗಾಗಿ ತೆಗೆದಿದ್ದ ಗುಂಡಿಗೆ ಕಾರೊಂದು ವಾಲಿಕೊಂಡಿತ್ತು. ಹೆಣ್ಣೂರು, ದೊಡ್ಡನೆಕ್ಕುಂದಿ, ಓಕಳಿಪುರ, ಐಟಿಪಿಎಲ್, ಕಸ್ತೂರಿ ನಗರ, ಹೊಸೂರು ಮುಖ್ಯರಸ್ತೆ, ಇಂದಿರಾನಗರ ಸೇರಿ ಶಿವರಾಮ ಕಾರಂತ ಭವನ ಹಾಗೂ ಹೂಡಿ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ತುಂಬಿ ವಾಹನಗಳ ಸಂಚಾರ ಸಿಕ್ಕು ಉಂಟಾಗಿತ್ತು. ಹೆಬ್ಬಾಳ ಫ್ಲೈಓವರ್ ಇಳಿಜಾರು, ಬೀಳಕಹಳ್ಳಿ ಸೇವಾ ರಸ್ತೆ, ಕಸ್ತೂರಿನಗರ ರಸ್ತೆ, ವಿಂಡ್ಸರ್ ಮ್ಯಾನರ್ ಸೇತುವೆ ಮತ್ತು ಕೊಡಿಗೇಹಳ್ಳಿ ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿತ್ತು. ಮಳೆ ನಿಂತ ನಂತರ ನೀರು ತಗ್ಗಿದ್ದರೂ ಸಂಚಾರದಟ್ಟಣೆ ಹಲವು ಗಂಟೆಗಳ ಮುಂದುವರಿದಿತ್ತು. ರಸ್ತೆ ಕಾಮಗಾರಿಯಿಂದ ಈಗಾಗಲೇ ಕಿರಿದಾಗಿರುವ ಮಾರ್ಗಗಳಲ್ಲಿ ಮಳೆಯಿಂದ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಿತ್ತು. ಕೆ.ಆರ್.ಪುರ ಅಂಡರ್‌ಪಾಸ್, ಹೆಣ್ಣೂರು ಮುಖ್ಯ ರಸ್ತೆಯ ಜಲಾವೃತವಾಗಿತ್ತು.

ಇನ್ನು 2 ದಿನ ಸಾಧಾರಣ ಮಳೆ

ಸಿಲಿಕಾನ್ ಸಿಟಿಯಲ್ಲಿ ಮುಂದಿನ ಎರಡು ದಿನ ಗುಡುಗುಸಹಿತ ಸಾಧಾರಣ ಮಳೆಯಾಗಲಿದೆ. ಕೆಲ ಪ್ರದೇಶಗಳಲ್ಲಿ ಗಂಟೆಗೆ 40 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ಗರಿಷ್ಠ, ಕನಿಷ್ಠ ತಾಪಮಾನ ಕ್ರಮವಾಗಿ 31 ಮತ್ತು 21 ಡಿ.ಸೆ. ಅಸುಪಾಸಿನಲ್ಲಿ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net