ಸ್ಮಿತ್​ ಮಚ್ಚರ್ ತಲೆಬುರುಡೆಗೂ ಗಂಭೀರ ಗಾಯ: ಮಿದುಳಿಗೆ ಹಾನಿಯಾಗುವ ಮುನ್ನ ಎಮರ್ಜೆನ್ಸಿ ಆಪರೇಷನ್​ ನಡೆಸಿದ ವೈದ್ಯರು! Captain Smit Machchhar

ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್ ಕಡೆಗೆ ತೆರಳುತ್ತಿದ್ದ ಫ್ಲೈದುಬೈ (flydubai) ವಿಮಾನದಲ್ಲಿದ್ದ ಒಮಾನ್ ಮೂಲದ ಕೋ-ಪೈಲಟ್, ವಿಮಾನವನ್ನು ಪತನಗೊಳಿಸುವ ಉದ್ದೇಶದಿಂದ ಕ್ಯಾಪ್ಟನ್ ಮಚ್ಚರ್​ ಮೇಲೆ ಕಾಕ್​ಪಿಟ್​ನಲ್ಲಿದ್ದ ಕ್ರ್ಯಾಶ್ ಆಕ್ಸ್ (Crash axe) ಬಳಸಿ ಭೀಕರ ಹಲ್ಲೆ ನಡೆಸಿದನು.
Captain Smit Machchhar
ಕ್ಯಾಪ್ಟನ್​ ಸ್ಮಿತ್​ ಮಚ್ಚರ್
Published on: 

ದುಬೈ: ನೀಲಿ ಆಗಸದ ನಡುವೆ ಫ್ಲೈದುಬೈ ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಕಾಕ್​ಪಿಟ್​ ಒಳಗೆ ಸಹ-ಪೈಲಟ್​ನಿಂದ ನಡೆದ ಭೀಕರ ದಾಳಿಯ ಮಧ್ಯೆಯೂ ವಿಮಾನ ಪತನವಾಗಲೂ ಬಿಡದೇ ಪ್ರಯಾಣಿಕರನ್ನು ರಕ್ಷಣೆ ಮಾಡಿದ ಭಾರತೀಯ ಸ್ಮಿತ್​ ಮಚ್ಚರ್ ( Captain Smit Machchhar )​ ಇದೀಗ ಜಗತ್ತಿನ ಹೀರೋ ಆಗಿದ್ದಾರೆ. ಇಡೀ ವಿಶ್ವವೇ ಅವರನ್ನು ಕೊಂಡಾಡುತ್ತಿದೆ. ಸದ್ಯ ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಚ್ಚರ್​ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ.

ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್ ಕಡೆಗೆ ತೆರಳುತ್ತಿದ್ದ ಫ್ಲೈದುಬೈ (flydubai) ವಿಮಾನದಲ್ಲಿದ್ದ ಒಮಾನ್ ಮೂಲದ ಕೋ-ಪೈಲಟ್, ವಿಮಾನವನ್ನು ಪತನಗೊಳಿಸುವ ಉದ್ದೇಶದಿಂದ ಕ್ಯಾಪ್ಟನ್ ಮಚ್ಚರ್​ ಮೇಲೆ ಕಾಕ್​ಪಿಟ್​ನಲ್ಲಿದ್ದ ಕ್ರ್ಯಾಶ್ ಆಕ್ಸ್ (Crash axe) ಬಳಸಿ ಭೀಕರ ಹಲ್ಲೆ ನಡೆಸಿದನು. ಈ ದುಸ್ಸಾಹಸವನ್ನು ಅತ್ಯಂತ ಧೈರ್ಯದಿಂದ ಎದುರಿಸಿ, 170ಕ್ಕೂ ಹೆಚ್ಚು ಪ್ರಯಾಣಿಕರ ಹಾಗೂ ಸಿಬ್ಬಂದಿಯ ಜೀವ ಉಳಿಸಿದ ಮಚ್ಚರ್, ಗಂಭೀರವಾಗಿ ಗಾಯಗೊಂಡಿದ್ದು, ಸೌದಿ ಅರೇಬಿಯಾದಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

Also Read
ಇದೊಂದೆ ಕಾರಣಕ್ಕೆ ಅವನನ್ನು ವಾಯುಯಾನದಿಂದ ದೂರವಿಡಲಾಗಿತ್ತು.... ಕೋ-ಪೈಲಟ್ ಬಗ್ಗೆ ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಒಮಾನ್ ಮೂಲಗಳು! | Hamam Al Hammami
Captain Smit Machchhar

ವಿಮಾನಯಾನದ ಸಮಯದಲ್ಲಿ ಕಾಕ್‌ಪಿಟ್ ಒಳಗಡೆ ನಡೆದ ಈ ಅನಿರೀಕ್ಷಿತ ಹಲ್ಲೆಯ ಪರಿಣಾಮವಾಗಿ ಮಚ್ಚರ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, 'ಡಿಪ್ರೆಸ್ಡ್ ಸ್ಕಲ್ ಫ್ರಾಕ್ಚರ್' (ತಲೆಯ ಮೂಳೆ ಮುರಿತ ಹಾಗೂ ಒಳಗೆ ಚಾಚಿಕೊಳ್ಳುವುದು) ಸಂಭವಿಸಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ.

ತೀವ್ರ ರಕ್ತಸ್ರಾವ ಹಾಗೂ ವಿಪರೀತ ನೋವನ್ನು ಲೆಕ್ಕಿಸದೆ, ಧೈರ್ಯಗುಂದದೆ ಹೋರಾಡಿದ ಮಚ್ಚರ್​, ಕೊನೆಯ ಕ್ಷಣದಲ್ಲಿ ಕಾಕ್‌ಪಿಟ್ ಬಾಗಿಲನ್ನು ಒಳಗಿನಿಂದ ಅನ್‌ಲಾಕ್ ಮಾಡುವಲ್ಲಿ ಯಶಸ್ವಿಯಾದರು. ಇದರಿಂದಾಗಿ ತಕ್ಷಣವೇ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಗೆ ನುಗ್ಗಿ ದುಷ್ಕರ್ಮಿ ಕೋ-ಪೈಲಟ್‌ ಅನ್ನು ಹತ್ತಿಕ್ಕಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.

ಈ ಘಟನೆಯ ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ತಲೆಯ ಭಾಗದಲ್ಲಿ ಮೂಳೆ ಮುರಿತ ಉಂಟಾಗಿ ಮೆದುಳಿನ ಮೇಲೆ ಒತ್ತಡ ಬೀಳುವ ಗಂಭೀರ ಸ್ವರೂಪದ ಗಾಯವಾಗಿದ್ದರಿಂದ, ಸೌದಿ ಅರೇಬಿಯಾದಲ್ಲಿ ವೈದ್ಯರು ಅತ್ಯಂತ ಜಟಿಲವಾದ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ತಲೆ ಮೂಳೆಯನ್ನು ಸರಿಪಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಶೇಷ ವಿಮಾನದ ಮೂಲಕ ಯುಎಇಗೆ ಕರೆತರಲಾಗಿದ್ದು, ಪ್ರಸ್ತುತ ಅಬುಧಾಬಿಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ತಲೆ ಮಾತ್ರವಲ್ಲದೆ ಕ್ಯಾಪ್ಟನ್ ಮಚ್ಚರ್ ಅವರ ಕೈಕಾಲುಗಳು, ಎದೆ ಹಾಗೂ ಮೇಲ್ಹೊಟ್ಟೆಯ ಭಾಗದಲ್ಲೂ ಹಲವು ಗಂಭೀರ ಸ್ವರೂಪದ ಗಾಯಗಳಾಗಿದ್ದು, ಪ್ರಸ್ತುತ ಅವರು ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ವಿಶೇಷ ವೈದ್ಯರ ತಂಡವು ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದೆ ಹಾಗೂ ಅವರ ಕುಟುಂಬ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಮಚ್ಚರ್​ ಅವರನ್ನು ಭೇಟಿಯಾಗಲು ಸಹ ಅವಕಾಶ ಕಲ್ಪಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಇತ್ತೀಚೆಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದ ಕ್ಯಾಪ್ಟನ್ ಮಚ್ಚರ್, ತಾನು ನೆಲದ ಮೇಲೆ ಬಿದ್ದು ರಕ್ತಸಿಕ್ತನಾಗಿದ್ದರೂ ಸಹ 170ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಬೇಕೆಂಬ ಸಂಕಲ್ಪದಿಂದಲೇ ನನ್ನ ಅಂತಿಮ ಬಲವನ್ನು ಪ್ರಯೋಗಿಸಿ ಬಾಗಿಲು ತೆರೆದೆ ಎಂದು ಸ್ಮರಿಸಿಕೊಂಡರು.

Also Read
ಕೊಡಲಿಯಿಂದ ದಾಳಿಗೊಳಗಾದಾಗಲೂ ಹನುಮಾನ್ ಚಾಲೀಸಾ ಪಠಿಸಿದ್ದ ಸ್ಮಿತ್ ಮಚ್ಚಾರ್​: ಕಷ್ಟಕಾಲದಲ್ಲಿ ನಮಗೆ ಬಜರಂಗಬಲಿಯೇ ನೆನಪಾಗೋದೇಕೆ..? | Machchhar Recited Hanuman Chalisa
Captain Smit Machchhar

ದುಬೈನಿಂದ ಮುಂಜಾನೆ ಹೊರಟಿದ್ದ ಫ್ಲೈದುಬೈನ FZ1073 ವಿಮಾನವು ಸುಮಾರು ಎರಡೂವರೆ ಗಂಟೆಗಳ ಪ್ರಯಾಣದ ಬಳಿಕ ಹಠಾತ್ತನೆ 18,000 ಅಡಿಗಳಷ್ಟು ಆಳಕ್ಕೆ ಕುಸಿದಿತ್ತು. ವಿಮಾನ ಅಪಹರಣದ ಸೂಚನೆ ನೀಡುವ 'ಸ್ವಾಕ್ 7500' ಕೋಡ್ ಕಳುಹಿಸುವ ಮೊದಲು ಪೈಲಟ್ ಎಮರ್ಜೆನ್ಸಿ ಸಿಗ್ನಲ್ ಕೂಡ ನೀಡಿದ್ದರು. ಒಮಾನ್ ಮೂಲದ ಕೋ-ಪೈಲಟ್ ಹಮದ್ ಅಲ್-ಹಮ್ಮಮಿ ಎಂಬಾತನೇ ಕ್ಯಾಪ್ಟನ್ ಮಚ್ಚರ್ ಮೇಲೆ ಹಲ್ಲೆ ನಡೆಸಿ, ಉದ್ದೇಶಪೂರ್ವಕವಾಗಿ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಂತರ ಅಧಿಕೃತವಾಗಿ ಖಚಿತಪಡಿಸಿದ್ದರು.

ತಮ್ಮ ಜೀವದ ಹಂಗನ್ನು ತೊರೆದು, ಅಸಾಧಾರಣ ಎದೆಗಾರಿಕೆ ಹಾಗೂ ವೃತ್ತಿಪರತೆಯನ್ನು ಮೆರೆದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಈ ಸಾಹಸಗಾಥೆಯು ಇಡೀ ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ವಿಮಾನದ ಒಳಗೆ ದೊಡ್ಡ ದುರಂತವೊಂದು ಸಂಭವಿಸುವುದನ್ನು ತಪ್ಪಿಸಿದ ಇವರ ನಿಸ್ವಾರ್ಥ ಸೇವೆ ಹಾಗೂ ಧೈರ್ಯವು ಭಾರತೀಯರ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಎತ್ತರಕ್ಕೆ ಹಾರಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net