

Mary Kom: ಹರಿಯಾಣದ ಫರಿದಾಬಾದ್ನಲ್ಲಿ ಖ್ಯಾತ ಭಾರತೀಯ ಬಾಕ್ಸರ್ ಮೇರಿ ಕೋಮ್ ಅವರ ಮನೆಯಲ್ಲಿ ಸೆ. 24ರಂದು ಕಳ್ಳತನ ನಡೆದಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಭಾನುವಾರ(ಸೆ. 28) ವರದಿಯಾಗಿದೆ.
ಫರಿದಾಬಾದ್ನ ಮೇರಿ ಕೋಮ್ ನಿವಾಸದಲ್ಲಿ ಅಪರಾಧ ವಿಭಾಗ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ. ಕಳ್ಳತನ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಸೂರಜ್‌ಕುಂಡ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಪ್ರಹ್ಲಾದ್ ಸಿಂಗ್, ಮೇರಿ ಕೋಮ್ ಅವರು ಕುಟುಂಬಸ್ಥರು ಹೊರಗೆ ಹೋಗಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು. ನಿನ್ನೆ ಕಳ್ಳತನ ವರದಿಯಾಗಿತ್ತು. ನಾವು ಪುರಾವೆಗಳನ್ನು ಸಂಗ್ರಹಿಸುತ್ತಿದ್ದು, ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದೇವೆ. ಅಪರಾಧ ವಿಭಾಗದ 5-7 ತಂಡಗಳಿಂದ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಹಂಚಿಕೊಳ್ತೇವೆ ಎಂದು ಹೇಳಿದ್ದಾರೆ.
ಘಟನೆ ಕುರಿತು ಎಎನ್ಐ ಜೊತೆ ಮಾತನಾಡಿರುವ ಮೇರಿ ಕೋಮ್,ನಾನು ಮನೆಯಲ್ಲಿಲ್ಲ. ಮನೆಗೆ ತಲುಪಿದಾಗ ನನಗೆ ನಿಖರವಾಗಿ ತಿಳಿಯುತ್ತದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳರು ಟಿವಿ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ತೋರಿಸಲಾಗಿದೆ. ಸೆಪ್ಟೆಂಬರ್ 24 ರಂದು ಘಟನೆ ನಡೆದಿದೆ ಎಂದು ನನ್ನ ನೆರೆಹೊರೆಯವರು ತಿಳಿಸಿದ್ದಾರೆ. ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳಾ ಬಾಕ್ಸರ್ ಮೇರಿ ಕೋಮ್. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು, 2014 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಬಾಕ್ಸರ್ ಆಗಿದ್ದಾರೆ. 2012ರ ಒಲಿಂಪಿಕ್ ಪದಕ ಗೆದ್ದ ನಂತರ, ಮೇರಿ ತನ್ನ ಮೂರನೇ ಮಗುವನ್ನು ನೋಡಿಕೊಳ್ಳಲು ವಿರಾಮ ತೆಗೆದುಕೊಂಡಿದ್ದರು. ಬಳಿಕ 2018ರ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿದ್ದರು. (ಏಜೆನ್ಸೀಸ್)