ಕನ್ನಡ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ: ನಟ ಶ್ರೀನಿವಾಸ ವಸಿಷ್ಟ | Srinivasa Vasishta

Srinivasa Vasishta
ಬೆಂಗಳೂರು ಕನ್ನಡ ರಾಜ್ಯೋತ್ಸವ
Published on: 

ಬೆಂಗಳೂರು: ಕನ್ನಡ ಭಾಷೆಯ ಉಳಿವಿಗಾಗಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಬೇರೆ ರಾಜ್ಯಗಳಿಂದ ವಲಸೆ ಬರುವವರಿಗೆ ಕನ್ನಡ ಕಲಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಆದರೆ ಈ ನಿಟ್ಟಿನಲ್ಲಿ ನಿರೀಕ್ಷಿತ ಮಟ್ಟದ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಚಿತ್ರನಟ ಶ್ರೀನಿವಾಸ ವಸಿಷ್ಟ ಕಳವಳ ವ್ಯಕ್ತಪಡಿಸಿದರು.

ತ್ಯಾಗರಾಜ ನಗರ ನಿವಾಸಿಗಳ ಸಂಘ ಹಾಗೂ ನಡಿಗೆದಾರರ ಸಂಘದ ವತಿಯಿಂದ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲರೂ ಕನ್ನಡ ಮಾತಾಡಿ

ಕನ್ನಡ ಭಾಷೆ ಸಮೃದ್ಧವಾಗಿ ಬೆಳೆಯಬೇಕಾದರೆ ಎಲ್ಲರೂ ಕನ್ನಡ ಮಾತನಾಡಬೇಕು. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಭಾಷೆಯ ಉಳಿವಿಗಾಗಿ ಮಾಡುತ್ತಿರುವ ಪ್ರಯತ್ನಗಳನ್ನು ನಾವು ಮಾದರಿಯಾಗಿ ತೆಗೆದುಕೊಳ್ಳಬೇಕು. ಕನ್ನಡದ ಕೆಲಸ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷವಿಡೀ ನಿರಂತರವಾಗಿ ನಡೆಯಬೇಕು. ನಾಗರಿಕರ ಹಕ್ಕುಗಳ ರಕ್ಷಣೆಗೂ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ದೊರೆಯಲಿ

ಕನ್ನಡ ಹೋರಾಟಗಾರ ಹಾಗೂ ಚಿಂತಕ ನಾಗರಾಜ ಕೆ.ಎಸ್. ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ದೊರೆಯಬೇಕು. ಇದಕ್ಕಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ನಾಗರಿಕ ಹಾಗೂ ಕನ್ನಡ ಸಂಘಟನೆಗಳು ಮಾತೃಭಾಷಾ ಶಿಕ್ಷಣದ ಹಕ್ಕಿಗಾಗಿ ಹೋರಾಟ ರೂಪಿಸಬೇಕು ಎಂದರು.

ಸರ್ಕಾರಿ ಶಾಲೆಗಳ ಉಳಿವಿಗೆ ಸಹಿ ಸಂಗ್ರಹ ಅಭಿಯಾನ

ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಹಮ್ಮಿಕೊಂಡಿರುವ ಸಹಿ ಸಂಗ್ರಹ ಅಭಿಯಾನಕ್ಕೆ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ನೂರಾರು ಜನರು ಅಭಿಯಾನಕ್ಕೆ ಬೆಂಬಲ ಸೂಚಿಸಿ ಸಹಿ ಹಾಕಿದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇದನ್ನೂ ಓದಿ: ಟರ್ಕಿಯಲ್ಲಿ ರಕ್ತದಂತೆ ಕೆಂಪಾದ ನದಿ! ಡ್ರೋನ್ ಕಾರ್ಯಾಚರಣೆಯಲ್ಲಿ ಬಯಲಾಯ್ತು ಶಾಕಿಂಗ್ ಸತ್ಯ | Turkey Red River

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ್, ಬಸವನಗುಡಿ ಗ್ಯಾರಂಟಿ ಸಮಿತಿ ಅಧ್ಯಕ್ಷ ತೇಜಸ್ ಕುಮಾರ್, ಮುಖಂಡರಾದ ಗಿರಿವಾಸಲು, ಪತ್ರಕರ್ತ ಗುರುರಾಜ ದೇಸಾಯಿ ಕಾಳೇಗೌಡ, ಕುಮಾರ ಟೂಲ್ಸ್, ಸಂಘದ ಸ್ಥಾಪಕ ಅಧ್ಯಕ್ಷ ಪ್ರಭಾಕರ, ಚಲುವಮ್ಮ, ಯೋಗ ಶಿಕ್ಷಕಿ ರುಕ್ಮಿಣಿ, ಕಳಕಪ್ಪ, ಮುಕುಂದ್, ಭಾಸ್ಕರ್, ರಾಜು, ಸಂಪತ್, ಪ್ರಕಾಶ್, ಶಿವಕುಮಾರ್, ಶ್ರೀಕಾಂತ್, ಶ್ರೀನಿವಾಸ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಗಣೇಶ್ ಹಾಗೂ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.