River Turns Red: ನದಿಯ ನೀರು ದಿಢೀರ್ ರಕ್ತದಂತೆ ಕೆಂಪು ಬಣ್ಣಕ್ಕೆ ತಿರುಗಿದರೆ ಹೇಗಿರುತ್ತೆ? ಇಂತಹದ್ದೇ ಅಚ್ಚರಿಯ ಘಟನೆ ಟರ್ಕಿಯಲ್ಲಿ ನಡೆದಿದೆ. ಇಲ್ಲಿನ ತೊರೆಯೊಂದರ ನೀರು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಇದು ನೈಜ ಘಟನೆಯೇ ಎಂಬ ಚರ್ಚೆಯೂ ನಡೆದಿತ್ತು. ಆದರೆ, ಸ್ಥಳೀಯ ಮಾಧ್ಯಮಗಳು ಮತ್ತು ಸರ್ಕಾರಿ ಅಧಿಕಾರಿಗಳು ಈ ಘಟನೆ ನಿಜವೆಂದು ದೃಢಪಡಿಸಿದ್ದಾರೆ.
ಟರ್ಕಿಯ ಈಶಾನ್ಯ ಭಾಗದಲ್ಲಿರುವ ರೈಜ್ (Rize) ಪ್ರಾಂತ್ಯದ ನಗರ ಕೇಂದ್ರದ ಮೂಲಕ ಹರಿದು ಕಪ್ಪು ಸಮುದ್ರ ಸೇರುವ ಡೆಗಿರ್ಮೆಂಡೆರೆ (Değirmendere) ತೊರೆಯಲ್ಲಿ ಈ ಘಟನೆ ನಡೆದಿದೆ.
ತೊರೆಯ ನೀರು ಏಕಾಏಕಿ ರಕ್ತದಂತೆ ಕೆಂಪು ಬಣ್ಣಕ್ಕೆ ತಿರುಗಿದ್ದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ರೈಜ್ ಪುರಸಭೆ ಹಾಗೂ ಪರಿಸರ, ನಗರೀಕರಣ ಮತ್ತು ಹವಾಮಾನ ಬದಲಾವಣೆ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ.
ಈ ವೇಳೆ ಡ್ರೋನ್ ಮೂಲಕ ತೊರೆಯ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಲಾಗಿದೆ. ತೊರೆಗೆ ಅನಧಿಕೃತವಾಗಿ ತ್ಯಾಜ್ಯ ಬಿಡುತ್ತಿದ್ದ ಖಾಸಗಿ ಕಾರ್ಖಾನೆಯೊಂದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಇದು ಖಾಸಗಿ ಚಹಾ ಕಾರ್ಖಾನೆಯಾಗಿದೆ.
ತೊರೆಯ ನೀರು ಕಲುಷಿತಗೊಳ್ಳಲು ಕಾರಣವಾದ ಕಾರ್ಖಾನೆಯ ವಿರುದ್ಧ ಟರ್ಕಿಯ ಪರಿಸರ ಕಾನೂನು ಸಂಖ್ಯೆ 2872ರ ಅಡಿಯಲ್ಲಿ ಆಡಳಿತಾತ್ಮಕ ದಂಡ ವಿಧಿಸಲಾಗಿದೆ. ಅಲ್ಲದೆ, ಕಾರ್ಖಾನೆಯ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಲಾಗಿದೆ.
ಇದರ ಜತೆಗೆ ತೊರೆಯ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನೀರಿನಲ್ಲಿ ಯಾವ ರೀತಿಯ ರಾಸಾಯನಿಕ ಅಥವಾ ತ್ಯಾಜ್ಯ ಬೆರೆತಿದೆ ಹಾಗೂ ಅದರಿಂದ ಪರಿಸರದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ಪರೀಕ್ಷಿಸಲಾಗುತ್ತಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಕಾರ್ಖಾನೆಯ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ, ತೊರೆಯ ನೀರು ಕೆಂಪಾಗಲು ನೈಸರ್ಗಿಕ ಕಾರಣವಲ್ಲ, ಅನಧಿಕೃತ ತ್ಯಾಜ್ಯ ವಿಲೇವಾರಿಯೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಯೋಗಾಲಯದ ವರದಿಯಿಂದ ಮಾಲಿನ್ಯದ ನಿಖರ ಸ್ವರೂಪ ತಿಳಿಯಬೇಕಿದೆ.