

ನವದೆಹಲಿ: ಏಕಬಳಕೆಯ ಪ್ಲಾಸ್ಟಿಕ್ ತ್ಯಾಜ ಜೀವ ಸಂಕುಲಕ್ಕೆ ಹೇಗೆ ಮಾರಕವಾಗಿದೆ ಎಂಬುದಕ್ಕೆ ಇದಕ್ಕಿಂತಲೂ ಒಳ್ಳೆಯ ಉದಾಹರಣೆ ಮತ್ತೊಂದಿಲ್ಲ ಎಂದೆನಿಸುತ್ತದೆ. ಹಸಿದ ಹಾವೊಂದು ತನ್ನ ಬೇಟೆ ಸಿಕ್ಕಿತೆಂದು ಅರಿಯದೇ ನೀರಿನ ಬಾಟಲ್ ಅನ್ನು ನುಂಗಿ ಬಳಿಕ ಜೀವ ಉಳಿಸಿಕೊಳ್ಳಲು ಪರದಾಡಿದ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋ ನೋಡಿದರೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತಿದೆ.
ಗ್ರಾಮವೊಂದರ ಬೀದಿಯಲ್ಲಿ ನೀರಿನ ಬಾಟಲ್ ನುಂಗಿ ಒದ್ದಾಡುತ್ತಿರುವ ನಾಗರಹಾವಿನ ದೃಶ್ಯವನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. ನಡು ಹೊಟ್ಟೆಯ ಭಾಗದಲ್ಲಿ ಸಿಕ್ಕಿಕೊಂಡಿರುವ ಬಾಟಲ್ ಅನ್ನು ಹೊರಗೆತರಲು ಪರದಾಟ ನಡೆಸಿದ ನಾಗರಹಾವು ಕೊನೆಗೂ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗುತ್ತದೆ. ಆದರೆ ಅದು ಅನುಭವಿಸಿದ ಯಾತನೆಯನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಲೇ ಬೇಕಿದೆ.
ಈ ವಿಡಿಯೋವನ್ನು ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್ ಎಂಬುವರು ಶುಕ್ರವಾರ ತಮ್ಮ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಏಕಬಳಕೆಯ ಪ್ಲಾಸ್ಟಿಕ್ ವನ್ಯಜೀವಿ ಮತ್ತು ಇತರೆ ಪ್ರಭೇದಗಳಿಗೆ ಯಾವ ರೀತಿ ತೊಂದರೆ ಉಂಟುಮಾಡುತ್ತಿದೆ ಎಂಬುದನ್ನು ನೋಡಿ. ಬಹುಶಃ ಈ ವಿಡಿಯೋ ನಿಮ್ಮ ಮನಸ್ಸನ್ನು ಕದಡಬಹುದು ಎಂದು ಕಾಸ್ವಾನ್ ಬರೆದುಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು ಈವರೆಗೂ ವಿಡಿಯೋವನ್ನು 40 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದು, ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ. ವಿಡಿಯೋ ನೋಡಿದ ಸಾಕಷ್ಟು ಮಂದಿ ಕಳವಳ ವ್ಯಕ್ತಪಡಿಸಿದ್ದು, ಮಾನವನ ಕೃತ್ಯವನ್ನು ಖಂಡಿಸುತ್ತಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಭಾರತದಲ್ಲಿ ದಿನವೊಂದಕ್ಕೆ 25 ಸಾವಿರ ಟನ್ಗಿಂತ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪತಿಯಾಗುತ್ತಿದೆ. ಅದರಲ್ಲಿ ಶೇ 40 ಸಂಗ್ರಹವಾಗದೇ ಪರಿಸರದಲ್ಲಿ ಸೇರಿಕೊಳ್ಳುತ್ತಿದೆ. (ಏಜೆನ್ಸೀಸ್)