ಕುತ್ತಿಗೆಗೆ ಹಗ್ಗ ಕಟ್ಟಿ ಆರು ಬೈಕ್‌ಗಳಿಂದ ಸ್ಟಂಟ್‌! ಉಸಿರಾಡಲು ಪರದಾಡಿದ ವ್ಯಕ್ತಿ; ವಿಡಿಯೋ ವೈರಲ್ | Dangerous Bike Stunt

ಆರು ಬೈಕ್‌ಗಳಿಗೆ ಕುತ್ತಿಗೆ ಮತ್ತು ದೇಹಕ್ಕೆ ಹಗ್ಗಗಳನ್ನು ಕಟ್ಟಿ ಅಪಾಯಕಾರಿ ಸ್ಟಂಟ್‌ ಮಾಡಿದ ವ್ಯಕ್ತಿಯೊಬ್ಬ ಉಸಿರಾಡಲು ಪರದಾಡಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗಿದೆ.
Dangerous Bike Stunt
ಆರು ಬೈಕ್‌ ಮತ್ತು ಕುತ್ತಿಗೆಗೆ ಹಗ್ಗ ಕಟ್ಟಿ ಸ್ಟಂಟ್‌
Published on: 

Stunt with six bikes: ಆರು ಬೈಕ್‌ಗಳಿಗೆ ಹಗ್ಗ ಕಟ್ಟಿ ವ್ಯಕ್ತಿಯ ಮೇಲೆ ನಡೆಸಿದ ಅಪಾಯಕಾರಿ ಸ್ಟಂಟ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೈಕ್‌ಗಳು ವೇಗವಾಗಿ ಚಲಿಸುತ್ತಿದ್ದಂತೆ ಹಗ್ಗ ಬಿಗಿದುಕೊಂಡು ವ್ಯಕ್ತಿ ಉಸಿರಾಡಲು ಪರದಾಡಿದ್ದಾನೆ. ಬಳಿಕ ಸಮತೋಲನ ತಪ್ಪಿ ನೆಲಕ್ಕೆ ಬಿದ್ದಿದ್ದು, ಆತನನ್ನು ರಕ್ಷಿಸಲು ಸುತ್ತಮುತ್ತಲಿದ್ದವರು ಧಾವಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ವ್ಯಕ್ತಿಯ ಕುತ್ತಿಗೆ ಮತ್ತು ದೇಹದ ಮೇಲ್ಭಾಗಕ್ಕೆ ಹಗ್ಗ ಕಟ್ಟಿ, ಅದನ್ನು ಸುಮಾರು ಆರು ಬೈಕ್‌ಗಳಿಗೆ ಜೋಡಿಸಿರುವುದು ಕಾಣಿಸುತ್ತದೆ. ಸುತ್ತಲೂ ಜನರು ಸೇರಿರುವಾಗಲೇ, ಬೈಕ್ ಸವಾರರು ಬೇರೆ ಬೇರೆ ದಿಕ್ಕುಗಳಲ್ಲಿ ಹಗ್ಗ ಎಳೆಯಲು ಸಿದ್ಧರಾಗುತ್ತಾರೆ

ಉಸಿರಾಡಲಾಗದೆ ನೆಲಕ್ಕೆ ಬಿದ್ದ ವ್ಯಕ್ತಿ

ಬೈಕ್‌ಗಳು ವೇಗವಾಗಿ ಚಲಿಸುತ್ತಿದ್ದಂತೆ ವ್ಯಕ್ತಿ ಮುಂದಕ್ಕೆ ಎಳೆಯಲ್ಪಡುತ್ತಾನೆ. ನಿಂತುಕೊಳ್ಳಲು ಸಾಧ್ಯವಾಗದೆ ಆತ ಪರದಾಡುತ್ತಾನೆ. ಹಗ್ಗ ಬಿಗಿಯಾಗುತ್ತಿದ್ದಂತೆ ಆತನಿಗೆ ಉಸಿರಾಡಲು ಕಷ್ಟವಾಗುತ್ತಿರುವಂತೆ ಕಾಣಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಆತ ನೆಲಕ್ಕೆ ಬೀಳುತ್ತಾನೆ. ಈ ವೇಳೆ ಧೂಳು ಏಳುತ್ತಿದ್ದು, ವ್ಯಕ್ತಿಯನ್ನು ಸ್ವಲ್ಪ ದೂರ ಎಳೆದೊಯ್ಯುವುದೂ ವಿಡಿಯೋದಲ್ಲಿ ಕಾಣಿಸುತ್ತದೆ.

ವ್ಯಕ್ತಿಯ ರಕ್ಷಣೆಗೆ ಬಂದ ಜನ

ವ್ಯಕ್ತಿ ನೆಲಕ್ಕೆ ಬೀಳುತ್ತಿದ್ದಂತೆ ಸುತ್ತಮುತ್ತಲಿದ್ದವರು ಆತನ ಸಹಾಯಕ್ಕೆ ಧಾವಿಸುತ್ತಾರೆ. ಕೆಲವರು ಹಗ್ಗ ಬಿಡಿಸಲು, ಇನ್ನು ಕೆಲವರು ಬೈಕ್ ನಿಲ್ಲಿಸಲು ಪ್ರಯತ್ನಿಸುತ್ತಾರೆ. ಆದರೂ ಕೆಲವು ಸವಾರರು ಬೈಕ್‌ಗೆ ವೇಗ ನೀಡುತ್ತಿರುವುದು ವಿಡಿಯೋದಲ್ಲಿ ಕಾಣಿಸಿದ್ದು, ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಾಯಕಾರಿ ಸ್ಟಂಟ್‌ಗೆ ನೆಟ್ಟಿಗರಿಂದ ಆಕ್ರೋಶ

ವಿಡಿಯೋ ವೈರಲ್ ಆಗುತ್ತಿದ್ದಂತೆ, ಇಂಥ ಅಪಾಯಕಾರಿ ಸಾಹಸ ಮಾಡಲು ಹೇಗೆ ಮನಸ್ಸು ಬರುತ್ತೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಇಂತಹ ಸ್ಟಂಟ್ ಮಾಡುವುದು ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂದು ಹಲವರು ಟೀಕಿಸಿದ್ದಾರೆ. ‘ಇಂಥ ಐಡಿಯಾ ಹೇಗೆ ಬರುತ್ತೆ? ಬಂದರೂ ಇದು ಒಳ್ಳೆಯದು ಅಂತ ಹೇಗೆ ಅನಿಸುತ್ತೆ?’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಅಪಾಯದ ಆಟ ಆಡಿದರೆ, ಅದರ ಪರಿಣಾಮವನ್ನೂ ಎದುರಿಸಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಈ ಬಾರಿ ರಾವಣನ ಜತೆ ಜಿರಳೆ ದಹನ; ದಸರಾಗೆ 30 ಅಡಿ ಎತ್ತರದ ಕಾಕ್ರೋಚ್ ಗೊಂಬೆ ಸಿದ್ಧ! | 30-foot cockroach effigy

ವ್ಯಕ್ತಿ ಅಪಾಯದಲ್ಲಿದ್ದರೂ ಕೆಲವು ಬೈಕ್ ಸವಾರರು ತಕ್ಷಣ ವಾಹನ ನಿಲ್ಲಿಸದಿರುವುದು ನೆಟ್ಟಿಗರ ಗಮನ ಸೆಳೆದಿದೆ. ಜನರು ಆತನ ನೆರವಿಗೆ ಧಾವಿಸುತ್ತಿದ್ದರೂ ಬೈಕ್‌ಗಳಿಗೆ ವೇಗ ನೀಡುತ್ತಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net