ಮಗುವಿನ ಕಲಿಕೆಗೆ ಪಾಲಕರ ನಂಬಿಕೆಯೊಂದೇ ಆಧಾರವಾಗಲ್ಲ: ಹೈಕೋರ್ಟ್ ಹೀಗೆ ಹೇಳಿದ್ದೇಕೆ?

ಮಗುವಿನ ಶೈಕ್ಷಣಿಕ ಪ್ರಗತಿಯು ಅದು ಕಲಿಯುವ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆಯೇ ಹೊರತು ಮತ್ತೊಂದು ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯಲಿದೆ ಎಂಬ ಪಾಲಕರ ನಂಬಿಕೆಯೊಂದೇ ಆಧಾರವಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
Karnataka high court
ಹೈಕೋರ್ಟ್Google
Published on: 

ಬೆಂಗಳೂರು: ಮಗುವಿನ ಶೈಕ್ಷಣಿಕ ಪ್ರಗತಿಯು ಅದು ಕಲಿಯುವ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆಯೇ ಹೊರತು ಮತ್ತೊಂದು ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯಲಿದೆ ಎಂಬ ಪಾಲಕರ ನಂಬಿಕೆಯೊಂದೇ ಆಧಾರವಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಶಿಕ್ಷಣದ ಗುಣಮಟ್ಟ ಕೇವಲ ಸಂಸ್ಥೆಯ ಖ್ಯಾತಿ, ಮೂಲಸೌಕರ್ಯ ಅಥವಾ ಶುಲ್ಕ ರಚನೆಯ ಆಧಾರದ ಮೇಲೆ ನಿರ್ಣಯಿಸಲು ಸಾಧ್ಯವಿಲ್ಲ. ಅಲ್ಲದೆ, ಹಾಲಿ ಶಾಲೆಯ ಶಿಕ್ಷಣ ಗುಣಮಟ್ಟ, ಬೋಧನಾ ಸೌಲಭ್ಯ ಅಥವಾ ಒಟ್ಟಾರೆ ವಾತಾವರಣದಲಿ ್ಲಕೊರತೆಯಿದೆ ಎಂಬುದನ್ನು ತೋರಿಸದೆ, ಶಾಲೆ ಬದಲಾವಣೆಗೆ ನ್ಯಾಯಾಲಯದ ಹಸ್ತಕ್ಷೆಪ ಕೋರಲಾಗದು ಎಂದು ಹೇಳಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಅಕಾಡೆಮಿಯಲ್ಲಿ ಓದುತ್ತಿರುವ 9 ವರ್ಷದ ಮಗನನ್ನು ಸರ್ಜಾಪುರ ಇಂಟರ್‌ನ್ಯಾಷನಲ್ ಶಾಲೆಗೆ ವರ್ಗಾಯಿಸಲು ಅನುಮತಿ ಕೋರಿ ನೂರ್ ಅಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ.

ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಶಾಲೆ ಬದಲಾವಣೆಗೆ ಅನುಮತಿ ನಿರಾಕರಿಸಿ 2026ರ ಸೆ.15ರಂದು ನೀಡಿದ್ದ ಆದೇಶವನ್ನು ನ್ಯಾಯಪೀಠ ಎತ್ತಿಹಿಡಿದಿದೆ.

ತಂದೆಗೆ ಮತ್ತೊಂದು ಶಾಲೆ ಉತ್ತಮ ಅವಕಾಶ ನೀಡಲಿದೆ ಎಂಬ ಪ್ರಾಮಾಣಿಕ ನಂಬಿಕೆ ಇರಬಹುದು. ಆದರೆ, ಆ ನಂಬಿಕೆಯೊಂದೇ ಶಾಲೆ ಬದಲಾವಣೆಗೆ ಅಥವಾ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಆಧಾರವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಜತೆಗೆ ಮಗುವಿನ ಶಾಲೆ ಬದಲಾವಣೆಗೆ ತಂದೆ ಈ ಹಿಂದೆಯೂ ಅರ್ಜಿ ಸಲ್ಲಿಸಿದ್ದರು. ಅದನ್ನು 2024ರ ಏಪ್ರಿಲ್ 27ರಂದು ಕೆಳ ನ್ಯಾಯಾಲಯ ತಿರಸ್ಕರಿಸಿತ್ತು. ಆ ವಿವಾದ ಹೈಕೋರ್ಟ್‌ಗೂ ಬಂದಿದ್ದು, ಆಗ ಮಗು ಸುರಕ್ಷಿತ ವಾತಾವರಣದಲ್ಲಿದೆ ಎಂಬ ಕಾರಣಕ್ಕೆ ಶಾಲೆ ಬದಲಾವಣೆಗೆ ಅನುಮತಿ ನೀಡಿರಲಿಲ್ಲವೆಂದು ಆದೇಶದಲ್ಲಿ ವಿವರಿಸಲಾಗಿದೆ. ಮತ್ತೊಮ್ಮೆ ಸಕ್ಷಮ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಲು ನೀಡಿದ ಅವಕಾಶವನ್ನು ಶಾಲೆ ಬದಲಿಸಲೇಬೇಕು ಎಂಬ ನಿರ್ಣಯವಾಗಿ ಅರ್ಥೈಸಲಾಗದು ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಮರುಪರಿಶೀಲನೆಗೆ ಅವಕಾಶ ನೀಡಿದ್ದರೂ, ಬದಲಾವಣೆಯನ್ನು ಸಮರ್ಥಿಸುವ ಪರಿಸ್ಥಿತಿಗಳನ್ನು ತೋರಿಸಬೇಕಾದ ಅಗತ್ಯ ನಿವಾರಣೆಯಾಗುವುದಿಲ್ಲ ಎಂದು ತಿಳಿಸಿದೆ.

ಸ್ವತಃ ತಂದೆಯೇ ವಾದಿಸಿದ್ದು, ಉದ್ದೇಶಿತ ಶಾಲೆಯಲ್ಲಿ ಐಸಿಎಸ್‌ಇ ಮತ್ತು ಐಬಿ ಪಠ್ಯಕ್ರಮಗಳು, 15,000ಕ್ಕೂ ಅಧಿಕ ಪುಸ್ತಕಗಳ ಗ್ರಂಥಾಲಯ ಹಾಗೂ ಜೀವಶಾಸ್ತ್ರ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರಕ್ಕೆ ಪ್ರತ್ಯೆಕ ಪ್ರಯೋಗಾಲಯಗಳಿವೆ. ಕ್ರಿಡೆ, ಫುಟ್‌ಬಾಲ್ ತರಬೇತಿ ಹಾಗೂ ಇತರ ಚಟುವಟಿಕೆಗಳಿಗೂ ಉತ್ತಮ ಮೂಲಸೌಕರ್ಯವಿದೆ ಎಂದು ವಾದಿಸಿದ್ದರು.

ಅರ್ಜಿಗೆ ಆಕ್ಷೇಪಿಸಿದ ತಾಯಿ ಸಮಾ ಆದಿಲ್, ಮಗು ಈಗಿನ ಶಾಲೆಯಲ್ಲಿ ನೆಮ್ಮದಿಯಿಂದಿದ್ದು, ಶೈಕ್ಷ ಣಿಕ ಮತ್ತು ಪಠ್ಯೆತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಮನೆಯಿಂದ ಕೇವಲ 900 ಮೀ. ದೂರದಲ್ಲಿದೆ. ಕಡಿಮೆ ಪ್ರಯಾಣದ ಅವಧಿ ಮಗುವಿನ ಓದು, ಫುಟ್‌ಬಾಲ್ ತರಬೇತಿ ಹಾಗೂ ಇತರ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಪ್ರಸ್ತಾವಿತ ಶಾಲೆ ಸುಮಾರು 15 ಕಿ.ಮೀ. ದೂರದಲ್ಲಿದ್ದು, ಪ್ರತಿದಿನ ಒಟ್ಟು 30 ಕಿ.ಮೀ. ಪ್ರಯಾಣಿಸಬೇಕಾಗುತ್ತದೆ ಎಂದು ಆಕ್ಷೇಪಿಸಿದ್ದರು.

ಈ ಅಂಶವನ್ನು ಪರಿಗಣಿಸಿದ ಹೈಕೋರ್ಟ್, ಹೆಚ್ಚುವರಿ ಪ್ರಯಾಣದ ಸಮಯ, ಸಾರಿಗೆ ವ್ಯವಸ್ಥೆ ಮತ್ತು ಮಗುವಿನ ದಿನಚರಿಯ ಮೇಲೆ ಅವು ಬೀರಬಹುದಾದ ಪರಿಣಾಮವನ್ನು ನಿರ್ಲಕ್ಷಿಸಲಾಗದು. ಅತ್ಯುತ್ತಮ ಸೌಲಭ್ಯಗಳಿರುವ ಶಾಲೆಯಾದರೂ, ಮಗು ಅಲ್ಲಿಗೆ ತೆರಳಬೇಕಾದ ವಾಸ್ತವ ಪರಿಸ್ಥಿತಿಯೊಂದಿಗೆ ಆ ಸೌಲಭ್ಯಗಳನ್ನು ತೂಗಿ ನೋಡಬೇಕು ಎಂದು ಹೇಳಿದೆ.