‘ಬಿ’ ರಿಪೋರ್ಟ್ ಮರು ತನಿಖೆಗೆ ಆದೇಶಿಸುವ ಅಧಿಕಾರ ಮ್ಯಾಜಿಸ್ಟ್ರೇಟ್ ಕೋರ್ಟ್‌ಗಿಲ್ಲ: ಕೆಎಸ್‌ಒಯು ರಂಗಪ್ಪ ಕೇಸಲ್ಲಿ ಹೈಕೋರ್ಟ್ ಹೇಳಿದ್ದೇನು?

ತನಿಖಾಧಿಕಾರಿಗಳು ಸಲ್ಲಿಸಿದ್ದ ’ಬಿ’ ರಿಪೋರ್ಟ್ ತಿರಸ್ಕರಿಸಿ ಮರು ತನಿಖೆಗೆ ಆದೇಶಿಸಿದ್ದ ಮೈಸೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಕ್ರಮ ಪ್ರಶ್ನಿಸಿ ರಂಗಪ್ಪ ಮತ್ತು ದೇವೇಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದ್ದು, ತನಿಖಾಧಿಕಾರಿಗಳು ಸಲ್ಲಿಸಿರುವ ’ಬಿ’ ರಿಪೋರ್ಟ್ ಅನ್ನು ಅಂಗೀಕರಿಸಿದೆ.
Karnataka high court
ಹೈಕೋರ್ಟ್Google
Published on: 

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ದಲ್ಲಿ ಟೆಂಡರ್ ಕರೆಯದೇ ಕಂಪ್ಯೂಟರ್ ಖರೀದಿ ಹಾಗೂ ನಿಯಮಬಾಹಿರವಾಗಿ ಮುಂಗಡ ಹಣ ಪಾವತಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ರಾಂತ ಕುಲಪತಿಗಳಾದ ಡಾ. ಕೆ.ಎಸ್. ರಂಗಪ್ಪ ಮತ್ತು ಡಾ. ಟಿ.ಡಿ. ದೇವೇಗೌಡ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.

ತನಿಖಾಧಿಕಾರಿಗಳು ಸಲ್ಲಿಸಿದ್ದ ’ಬಿ’ ರಿಪೋರ್ಟ್ ತಿರಸ್ಕರಿಸಿ ಮರು ತನಿಖೆಗೆ ಆದೇಶಿಸಿದ್ದ ಮೈಸೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಕ್ರಮ ಪ್ರಶ್ನಿಸಿ ರಂಗಪ್ಪ ಮತ್ತು ದೇವೇಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದ್ದು, ತನಿಖಾಧಿಕಾರಿಗಳು ಸಲ್ಲಿಸಿರುವ ’ಬಿ’ ರಿಪೋರ್ಟ್ ಅನ್ನು ಅಂಗೀಕರಿಸಿದೆ.

ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ, ಪೊಲೀಸರು ಸಲ್ಲಿಸಿದ ವರದಿಯ ಮೇಲೆ ಹೆಚ್ಚಿನ ತನಿಖೆಗೆ ಆದೇಶಿಸುವ ಅಧಿಕಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕಿದೆ. ಆದರೆ, ಹೊಸದಾಗಿ ಅಥವಾ ಮರು ತನಿಖೆಗೆ ಆದೇಶಿಸುವ ಅಧಿಕಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಕ್ಕಿಲ್ಲ. ಇಂತಹ ಅಧಿಕಾರ ಕೇವಲ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮಾತ್ರ ಇದೆ. ಹೀಗಾಗಿ ಮೈಸೂರು ನ್ಯಾಯಾಲಯದ ಆದೇಶ ಕಾನೂನು ಬಾಹಿರವಾಗಿದೆ ಎಂದು ಪೀಠ ಹೇಳಿದೆ.

ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರ ಅಧಿಕಾರಾವಧಿ 2009ರಿಂದ 2013ರ ಜನವರಿವರೆಗೆ ಮಾತ್ರ ಇತ್ತು. ಆದರೆ, ಐಇಎಂ ಸಂಸ್ಥೆಗೆ ಹಣ ಪಾವತಿಯಾಗಿರುವುದು 2013ರ ಸೆಪ್ಟೆಂಬರ್‌ನಿಂದ 2015ರ ಮೇ ನಡುವೆ, ಅಂದರೆ ರಂಗಪ್ಪ ಅವರ ನಿವೃತ್ತಿಯ 9 ತಿಂಗಳ ನಂತರ. ಅವರ ಅವಧಿಯಲ್ಲಿ ಯಾವುದೇ ಆರ್ಥಿಕ ಅವ್ಯವಹಾರ ನಡೆದಿಲ್ಲ ಎಂಬುದು ಲೆಕ್ಕಪರಿಶೋಧನಾ ವರದಿಯಿಂದಲೇ ಸ್ಪಷ್ಟವಾಗಿ ತಿಳಿಸಲಾಗಿದೆ.

ಡಾ. ಟಿ.ಡಿ. ದೇವೇಗೌಡ ಅವರ ವಿರುದ್ಧ 30 ಕಂಪ್ಯೂಟರ್‌ಗಳ ಖರೀದಿಯಲ್ಲಿ ಅಕ್ರಮ ಎಸಗಿದ ಆರೋಪವಿತ್ತು. ಆದರೆ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ವರದಿಯಲ್ಲಿ ಕಂಪ್ಯೂಟರ್ ಖರೀದಿಯಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಕ್ಲೀನ್ ಚಿಟ್ ನೀಡಲಾಗಿದೆ. ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಕ್ರಿಮಿನಲ್ ಮೊಕದ್ದಮೆ ಮುಂದುವರಿಸುವುದು ಕಾನೂನಿನ ದುರುಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ಇವರಿಬ್ಬರ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟಿದೆ.

ಪ್ರಕರಣದ ಹಿನ್ನೆಲೆ:

2012-13 ಮತ್ತು 2013-14ನೇ ಸಾಲಿನಲ್ಲಿ ಕೆಎಸ್‌ಒಯುನಲ್ಲಿ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಖರೀದಿಸಲಾಗಿದೆ ಮತ್ತು ಐಇಎಂ ಸಂಸ್ಥೆಗೆ ಒಂದು ಕೋಟಿ ರೂ. ಮುಂಗಡ ಹಣ ಪಾವತಿಸಲಾಗಿದೆ ಎಂಬ ಆರೋಪ ಎದುರಾಗಿತ್ತು.

ಈ ಸಂಬಂಧ ವಿವಿಯ ಹಣಕಾಸು ಅಧಿಕಾರಿ ಡಾ. ಎ. ಖಾದರ್ ಪಾಷಾ 2016ರಲ್ಲಿ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯಕ್ಕೆ ’ಬಿ’ ರಿಪೋರ್ಟ್ ಸಲ್ಲಿಸಿದ್ದರು.

ಇದನ್ನು ಪ್ರಶ್ನಿಸಿ ದೂರುದಾರರು ಪ್ರತಿಭಟನಾ ಅರ್ಜಿಯನ್ನು ಸಲ್ಲಿಸಿ, ವಿಶ್ವವಿದ್ಯಾಲಯದಿಂದ ಮೂಲ ದಾಖಲೆಗಳನ್ನು ಪಡೆದುಕೊಂಡ ಬಳಿಕ ಹೊಸದಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಈ ಅರ್ಜಿಯನ್ನು ಪರಿಗಣಿಸಿದ್ದ ಮೈಸೂರಿನ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯ 2022ರ ಮಾ.31ರಂದು ಮರು ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದರು.