ನಮ್ಮ ಸರ್ಕಾರ ಕಳೆದ ಎರಡುಮುಕ್ಕಾಲು ವರ್ಷಗಳಲ್ಲಿ ಮಹಿಳೆಯರ ಸಬಲೀಕರಣದ ಹಾದಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ನಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಯೋಜನೆಗಳು ಮಹಿಳಾ ಕೇಂದ್ರಿತ ಯೋಜನಗಳೇ ಆಗಿವೆ ಎನ್ನುವುದನ್ನು ಅತ್ಯಂತ ಹೆಮ್ಮೆಯಿಂದ ತಿಳಿಸಬಯಸುತ್ತೇನೆ. ಶಕ್ತಿ ಯೋಜನೆಯು ಮಹಿಳೆಯರನ್ನು ಶಿಕ್ಷಣ, ಉದ್ಯೋಗ, ಆರೋಗ್ಯ ಸಂಬಂಧಿ ಉದ್ದೇಶಗಳಿಗೆ ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ ಸ್ವಾವಲಂಬಿಗಳನ್ನಾಗಿಸಿದೆ. ಸಾರಿಗೆ ಬಸ್ಸುಗಳಲ್ಲಿ ನಾವು ಉಚಿತ ಪ್ರಯಾಣದ ಸೌಲಭ್ಯ ನೀಡಿರುವ ಕಾರಣದಿಂದಾಗಿ ಬೆಂಗಳೂರು ನಗರದಲ್ಲಿ ಉದ್ಯೋಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಶೇ.23 ಏರಿಕೆಯಾಗಿದ್ದರೆ, ರಾಜ್ಯದ ಇತರ ಭಾಗಗಳಲ್ಲಿ ಕೂಡ ಗಣನೀಯ ಪ್ರಗತಿ ಕಂಡಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಮನೆ ಯಜಮಾನಿಯರ ಕುಟುಂಬ ನಿರ್ವಹಣೆಯ ಆರ್ಥಿಕ ಭಾರವನ್ನು ತಗ್ಗಿಸಿ, ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ರಾಜ್ಯದ ಸರ್ಕಾರಿ ಹಾಗೂ ನೋಂದಾಯಿತ ಉದ್ದಿಮೆಗಳು / ಸಂಸ್ಥೆಗಳಲ್ಲಿ ಕೆಲವು ಮಾಡುವ 18 ರಿಂದ 52 ವಯೋಮಾನದ ಮಹಿಳೆಯರಿಗೆ ತಿಂಗಳಿಗೊಂದು ವೇತನ ಸಹಿತ ಕಡ್ಡಾಯ ಋತುಚಕ್ರ ರಜೆಯನ್ನು ಜಾರಿಗೊಳಿಸಿದ ಪ್ರಥಮ ರಾಜ್ಯ ಎನ್ನುವ ಹೆಮ್ಮೆ ನಮ್ಮದು. ನಮ್ಮ 2026-27ನೇ ಸಾಲಿನ ಬಜೆಟ್ ನಲ್ಲಿ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ ರೂ. 94,663 ಕೋಟಿ ಅನುದಾನ ಘೋಷಣೆ ಮಾಡಿ, ಹೆಣ್ಣುಮಕ್ಕಳನ್ನು ಸಮಾನವಾಗಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಸುವ ಪ್ರಯತ್ನ ಮಾಡಿದ್ದೇವೆ. ಜಗತ್ತಿನೆಲ್ಲೆಡೆ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನವು ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದರೆ, ಕರ್ನಾಟಕದಲ್ಲಿ ಈ ದಿನವನ್ನು ಸಾರ್ಥಕವಾಗಿಸಿದ್ದೇವೆ.