ಬೆಂಗಳೂರು : ಪ್ರಸಿದ್ಧ ಪಿಟೀಲು ವಿದ್ವಾಂಸ, ಸಂಗೀತ ಕಲಾರತ್ನ ಪ್ರೊ. ಎಚ್.ವಿ.ಕೃಷ್ಣಮೂರ್ತಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಭಾನುವಾರ (ಅ.25) ಸದಾಶಿವನಗರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಜಯ ಕಾಲೇಜ್ ಆಫ್ ಮ್ಯೂಸಿಕ್ ಹಾಗೂ ಕಲಾಪರಂಪರಾ ಫೌಂಡೇಶನ್ ಸಹಯೋಗದಲ್ಲಿ ನಡೆಯುವ ಸ್ಟ್ರಿಂಗ್ಸ್ ಅಕ್ರಾಸ್ ಟ್ರೆಡಿಷನ್ಸ್ ಕಾರ್ಯಕ್ರಮವು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಪಿಟೀಲಿನ ಮಹತ್ವವನ್ನು ಪರಿಚಯಿಸಲಿದೆ. ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ವಿದ್ಯಾರ್ಥಿಗಳ ಪ್ರಾರ್ಥನೆ, ವೆಬ್‌ಸೈಟ್ ಬಿಡುಗಡೆ, ಪಿಟೀಲು ವಾದಕರಿಗೆ ಸನ್ಮಾನ ಮತ್ತಿತರ ಕಾರ್ಯಕ್ರಮಗಳು ದಿನಪೂರ್ತಿ ನಡೆಯಲಿವೆ.
ಕಾರ್ಯಕ್ರಮದಲ್ಲಿ ಪದ್ಮವಿಭೂಷಣ ಪುರಸ್ಕೃತ ಡಾ. ಎಲ್. ಸುಬ್ರಮಣಿಯಂ ಅವರಿಗೆ ಸನ್ಮಾನ, ವೀಣಾ ಕಲಾವಿದರಿಗೆ ಗೌರವ ಹಾಗೂ ಸಂಗೀತ ವಿದ್ಯಾರ್ಥಿಗಳಿಂದ ವಿವಿಧ ಪ್ರಸ್ತುತಿಗಳು ಇರಲಿವೆ. ಸಂಜೆ 6 ಗಂಟೆಗೆ ವಾಲ್ಮೀಕಿ ರಾಮಾಯಣ ಆಧಾರಿತ ವಿಶೇಷ ದೃಶ್ಯ-ಶ್ರವ್ಯ ಪ್ರಸ್ತುತಿ ನಡೆಯಲಿದೆ. ವಿಜಯ ಕಾಲೇಜ್ ಆಫ್ ಮ್ಯೂಸಿಕ್‌ನ ಸಂಸ್ಥಾಪಕ ಪಿಟೀಲು ವಿದ್ವಾಂಸ ವಿದ್ವಾನ್ ಎಲ್.ಎಸ್. ನಾರಾಯಣಸ್ವಾಮಿ ಭಾಗವತರ್ ಅವರ ಸಂಯೋಜನೆಗಳಿಗೆ 45 ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಮೇಲಿನ ಎಲ್ಲ ಕಾರ್ಯಕ್ರಮಗಳಲ್ಲಿ ಸಂಗೀತ ಕ್ಷೇತ್ರದ ಹಲವು ದಿಗ್ಗಜರು, ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.