

ಬೆಂಗಳೂರು : ಲೇಖಕ ರವಿ ಹಂಜ್ ಅವರು ರಚಿಸಿರುವ ಬಸವ ಮಂಟಪ ಕೃತಿಯ ವಿವಾದಕ್ಕೆ ಸಂಬಂಧಪಟ್ಟಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ವಿಜಯನಗರದಲ್ಲಿರುವ ಶ್ರೀಬಸವೇಶ್ವರ ಹಾಸ್ಟೆಲ್ನಲ್ಲಿ ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ಮಾಜಿ ಉಪಮೇಯರ್ ಬಿ.ಎಸ್.ಪುಟ್ಟರಾಜು ಹಾಗೂ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೃತಿಯ ವಿಚಾರವಾಗಿ ಚರ್ಚಿಸಿ, ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಅಂಶಗಳನ್ನು ಪ್ರಕಟಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಹಿರಿಯರಾದ ಬಿ.ಎಸ್.ಪರಮಶಿವಯ್ಯ, 12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳು ಇಡೀ ಜಗತ್ತಿಗೆ ಮಾದರಿಯಾಗಿವೆ. ಇಂತಹ ಮಹಾನ್ ಮಾನವತಾವಾದಿಯ ವ್ಯಕ್ತಿತ್ವ, ಚಿಂತನೆ ಹಾಗೂ ವಚನ ಪರಂಪರೆಯ ಕುರಿತು ಆಕ್ಷೇಪಾರ್ಹ ಅಥವಾ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಅಂಶಗಳನ್ನು ಪ್ರಕಟಿಸುವುದು ಖಂಡನೀಯ ಎಂದರು.
ಕರ್ನಾಟಕ ಸರ್ಕಾರವು ಕೃತಿಯ ಸಂಪೂರ್ಣ ವಿಷಯವನ್ನು ತಜ್ಞರ ಸಮಿತಿಯ ಮೂಲಕ ಪರಿಶೀಲಿಸಬೇಕು. ಆಕ್ಷೇಪಾರ್ಹ ಅಂಶಗಳು ಕಾನೂನುಬಾಹಿರವೆಂದು ಕಂಡುಬಂದಲ್ಲಿ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ರಾಷ್ಟ್ರೀಯ ಬಸವತತ್ವ ಪರಿಷತ್ತು ಅಧ್ಯಕ್ಷ ಅರುಣಕುಮಾರ ಡಿ.ಟಿ., ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮೋಹನ್ ಕುಮಾರ್ ಬಿ., ವೀರಶೈವ ಲಿಂಗಾಯತ ಮಹಾಸಭಾ ಪಾಲಿಕೆ ಅಧ್ಯಕ್ಷ ನವೀನ್ ಕುಮಾರ್ ಸೇರಿದಂತೆ ಸಮಾಜದ ಅನೇಕ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.