ಮೈಸೂರು ದಸರಾ ಇತಿಹಾಸದಲ್ಲೇ ಹಿಂದೆಂದೂ ಹೀಗಾಗಿರಲಿಲ್ಲ! ಪ್ರಥಮ ಬಾರಿಗೆ ವಜ್ರಮುಷ್ಠಿ ಕಾಳಗ ನಿಂತಿದ್ದೇಕೆ? | Mysuru Dasara

ವಜ್ರಮುಷ್ಟಿ ಕಾಳಗದ ಬಳಿಕ ನಡೆಯಬೇಕಿದ್ದ ವಿಜಯಯಾತ್ರೆಗೆ ಮುನ್ನವೇ ಈ ಬೆಳವಣಿಗೆ ನಡೆದಿದ್ದು, ರಾಜ್ಯ ಸರ್ಕಾರ ಮತ್ತು ಅರಮನೆ ನಡುವೆ ಸಮನ್ವಯದ ಕೊರತೆ ಎದ್ದು ಕಾಣುವಂತಾಗಿದೆ.
Mysuru-Dasara
ಮೈಸೂರು ದಸರಾ ಇತಿಹಾಸದಲ್ಲೇ ಹಿಂದೆಂದೂ ಹೀಗಾಗಿರಲಿಲ್ಲ! ಪ್ರಥಮ ಬಾರಿಗೆ ವಜ್ರಮುಷ್ಠಿ ಕಾಳಗ ನಿಂತಿದ್ದೇಕೆ?
Published on: 

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾದ ವಜ್ರಮುಷ್ಟಿ ಕಾಳಗಕ್ಕೆ ಈ ಬಾರಿ ದೊಡ್ಡ ಅಡಚಣೆ ಉಂಟಾಗಿದ್ದು, ಜಟ್ಟಿ ಕಾಳಗ ನಡೆಯದೆಯೇ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆ ಹೊರಟ ಘಟನೆ ನಾಡಹಬ್ಬದ ಇತಿಹಾಸದಲ್ಲೇ ಹಿಂದೆಂದೂ ನಡೆದಿಲ್ಲ.

ವಜ್ರಮುಷ್ಟಿ ಕಾಳಗದ ಬಳಿಕ ನಡೆಯಬೇಕಿದ್ದ ವಿಜಯಯಾತ್ರೆಗೆ ಮುನ್ನವೇ ಈ ಬೆಳವಣಿಗೆ ನಡೆದಿದ್ದು, ರಾಜ್ಯ ಸರ್ಕಾರ ಮತ್ತು ಅರಮನೆ ನಡುವೆ ಸಮನ್ವಯದ ಕೊರತೆ ಎದ್ದು ಕಾಣುವಂತಾಗಿದೆ. ಅರಮನೆ ಸಂಪ್ರದಾಯದಂತೆ ನಿಗದಿತ ಮುಹೂರ್ತದೊಳಗೆ ಕಾಳಗಕ್ಕೆ ಸಿದ್ಧತೆ ನಡೆಸಬೇಕಿದ್ದ ಜಟ್ಟಿ ಪೈಲ್ವಾನರಿಗೆ ಪೊಲೀಸರು ಅಡ್ಡಿಪಡಿಸಿದರೆಂಬ ಆರೋಪವು ಕೇಳಿಬಂದಿದೆ.

ಶ್ವೇತ ವರಾಹಸ್ವಾಮಿ ದೇವಾಲಯದಲ್ಲಿ ವಜ್ರಮುಷ್ಟಿ ಕಾಳಗಕ್ಕೆ ಸಿದ್ಧರಾಗಿ ಜಟ್ಟಿ ಪೈಲ್ವಾನರು ಕಾಯುತ್ತಿದ್ದರೆ, ಇತ್ತ ಅರಮನೆಯೊಳಗೆ ಪ್ರವೇಶಿಸಲು ಪೊಲೀಸರು ತಡೆ ಒಡ್ಡಿದರೆಂದು ತಿಳಿದುಬಂದಿದೆ. ರಾಜವಂಶಸ್ಥರು ನೀಡಿದ್ದ ಪ್ರವೇಶ ಪಾಸ್‌ಗಳಿದ್ದರೂ ಜಟ್ಟಿ ಪೈಲ್ವಾನರು ಹಾಗೂ ಅವರ ಉಸ್ತಾದ್‌ಗಳಿಗೆ ಅರಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

Also Read
ಬಣ್ಣ ಬಣ್ಣದ ಸೋಪಾದ್ರೂ ಬರುವ ನೊರೆ ಮಾತ್ರ ಬಿಳಿಯೇ! ಏಕೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ | Soap Foam
Mysuru-Dasara

ನಿಗದಿತ ಮುಹೂರ್ತದೊಳಗೆ ಅರಮನೆ ಪ್ರವೇಶಿಸಿ ಕಾಳಗಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಬಹುವರ್ಷಗಳ ಸಂಪ್ರದಾಯಕ್ಕೆ ಇದೀಗ ಚ್ಯುತಿ ಉಂಟಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ಕಟ್ಟುನಿಟ್ಟಿನ ನಿರ್ಬಂಧ ಹಾಗೂ ಅಧಿಕಾರಿಗಳ ಸ್ಪಂದನೆಯ ಕೊರತೆಯಿಂದ ಜಟ್ಟಿ ಪೈಲ್ವಾನರು ಮತ್ತು ಉಸ್ತಾದ್‌ಗಳು ತೀವ್ರ ಬೇಸರಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net