ವಿಶ್ವಕ್ಕೆ ನೆಮ್ಮದಿಯ ವಾತಾವರಣ ಬೇಕಿದೆ: ಸಂಸದ ಡಾ. ಸಿ.ಎನ್. ಮಂಜುನಾಥ್ ಆಶಯ

ಸಂಸದ ಡಾ. ಸಿ.ಎನ್. ಮಂಜುನಾಥ್
ಸಂಸದ ಡಾ. ಸಿ.ಎನ್. ಮಂಜುನಾಥ್
Published on
ಬೆಂಗಳೂರು: ವಿಶ್ವದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಯುದ್ಧ ನಡೆಯುತ್ತಿದೆ. ಹಾಗಾಗಿ, ಅಶಾಂತಿ ವಾತಾವರಣ ತೊಲಗಿ ನಮ್ಮೆಲ್ಲರಿಗೆ ನೆಮ್ಮದಿ ಬೇಕಾಗಿದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ. 
ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಸ್ಥೆ, ರಾಜರಾಜೇಶ್ವರಿನಗರದ ಸಂಗಮೇಶ್ವರ ದೇವಾಲಯದಲ್ಲಿ ಶನಿವಾರ ಆಯೋಜಿಸಿದ್ದ ‘ಬಸವ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಪ್ರಸ್ತುತ ದಿನಗಳಲ್ಲಿ ಬಸವಣ್ಣನವರು ನೀಡಿದ ಜ್ಞಾನದಾಸೋಹ, ವಚನ ಸಾಹಿತ್ಯ ಅತ್ಯಗತ್ಯವಾಗಿ ಬೇಕಿವೆ. 12ನೇ ಶತಮಾನದ ಸಮಾಜ ಸುಧಾರಕರಾಗಿ ಹಲವು ಮಹತ್ವದ ಬದಲಾವಣೆಗೆ ಬಸವಣ್ಣ ಕಾರಣರಾಗಿದ್ದು, ಇಂದು ಸಮಾಜ ಸುಧಾರಣೆ ಹೆಸರಿನಲ್ಲಿ ಜನಪ್ರತಿನಿಧಿಯಾಗುವ ಪ್ರತಿಯೊಬ್ಬರೂ ಎಲ್ಲರನ್ನೂ ಪ್ರೀತಿಯಿಂದ ಕೊಂಡೊಯ್ಯಬೇಕು. ಯಾರಿಗೂ ಅಧಿಕಾರ ಶಾಶ್ವತವಲ್ಲ. ಆದರೆ, ಅವಕಾಶ ಸಿಕ್ಕಾಗ ಜನಸೇವೆ ಮಾಡಬೇಕು ಎಂದರು. 
ಕಾಂಗ್ರೆಸ್ ಮುಖಂಡ ಬಿ. ಮಲ್ಲಿಕಾರ್ಜುನ್ ಮಾತನಾಡಿ, ಸಾಮಾಜಿಕ ಸಮಸ್ಯೆ ಹೋಗಲಾಡಿಸಲು ವಿಶೇಷ ಮಾರ್ಗವನ್ನು ತೋರಿದ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನ ವಿಚಾರಧಾರೆಯ ಬಗ್ಗೆ ಯುವ ಜನಾಂಗಕ್ಕೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಸಮಾಜದಲ್ಲಿ ಬೇರೂರಿದ ಅಸಮಾನತೆ ಮತ್ತು ಅಸ್ಪೃಶ್ಯತೆಯನ್ನು ಬೇರುಸಹಿತ ಕಿತ್ತುಹಾಕಬೇಕು ಎಂದರು. 
ಕರ್ನಾಟಕ ಸಂಸ್ಕೃತಿ ವಿದ್ಯಾಪೀಠದ ಸಂಸ್ಥಾಪಕ ಡಿ.ಬಸವಾನಂದ ಪ್ರಕಾಶ್, ಕಾರದೇಶ್ವರ ಮಠದ ಶ್ರೀ ವೀರಬಸವ ಸ್ವಾಮೀಜಿ ಮತ್ತಿತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net