ಹಾಲಿನ ದರ ಏರಿಕೆ ಫಿಕ್ಸ್​! ಬಸ್ ಪ್ರಯಾಣ ದರ ಏರಿಕೆಗೂ ಸಂಪುಟ ಸಭೆಯಲ್ಲಿ ಒಮ್ಮತ

ಹಾಲಿನ ದರ ಏರಿಕೆ ಫಿಕ್ಸ್​! ಬಸ್ ಪ್ರಯಾಣ ದರ ಏರಿಕೆಗೂ ಸಂಪುಟ ಸಭೆಯಲ್ಲಿ ಒಮ್ಮತ
Published on: 

ಬೆಂಗಳೂರು: ರಾಜ್ಯದ ಹಾಲು ಉತ್ಪಾದಕರ ಅಪೇಕ್ಷೆಯಂತೆ ಕೆಎಂಎಫ್ ಹಾಲಿನ ದರ ಏರಿಕೆಗೆ ಮಂಗಳವಾರ ನಡೆದ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ. 8-10 ರೂ. ವರೆಗೆ ದರ ಏರಿಕೆ ಮಾಡಬಹುದೆಂಬ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಯಾವಾಗಿನಿಂದ ಮತ್ತು ಎಷ್ಟು ಪ್ರಮಾಣದಲ್ಲಿ ದರ ಏರಿಸಬೇಕೆಂಬ ತೀರ್ವನವನ್ನು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ. ಹಾಗೆಯೇ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಪರಿಷ್ಕರಣೆ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತಾದರೂ ದರ ಏರಿಕೆ ಕುರಿತು ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ.

ಸಚಿವರ ಸಹಮತ: ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಕಚ್ಚಾ ಪದಾರ್ಥಗಳ ಬೆಲೆ ಕೂಡ ಏರಿಕೆ ಆಗಿರುವುದರಿಂದ ಹಾಲು ಉತ್ಪಾದಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಹಾಲಿನ ಬೆಲೆ ಎರಿಕೆ ಮಾಡುವುದು ಸೂಕ್ತ ಎಂದು ಬಹುತೇಕ ಸಚಿವರು ಅಭಿಪ್ರಾಯಪಟ್ಟರೆಂದು ತಿಳಿದು ಬಂದಿದೆ.

ನೆರೆ ರಾಜ್ಯಗಳಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆ 40 ರೂ.ಗಿಂತ ಹೆಚ್ಚಿದೆ (ಉತ್ಪಾದಕರಿಗೆ ನೀಡುವ ದರ). ಆದರೆ ರಾಜ್ಯದಲ್ಲಿ 35 ರೂ. ಮಾತ್ರ ಇರುವುದರಿಂದ ರೈತರಿಗೆ ನಷ್ಟವಾಗುತ್ತಿದೆ. ಆದ್ದರಿಂದ ಹಾಲು ಉತ್ಪಾದಕರು ಮತ್ತು ಹಾಲು ಒಕ್ಕೂಟಗಳು ಪ್ರತಿ ಲೀಟರ್​ಗೆ ಕನಿಷ್ಠ 10ರಿಂದ 12 ರೂ. ಏರಿಕೆ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಂಡಿದ್ದಾರೆಂಬ ವಿಷಯವನ್ನು ಸ್ವತಃ ಮುಖ್ಯಮಂತ್ರಿಗಳೇ ಸಂಪುಟದ ಮುಂದೆ ಪ್ರಸ್ತಾಪಿಸಿದರು.

ಹೆಚ್ಚಳಕ್ಕೆ ನೀತಿಸಂಹಿತೆ ಅಡ್ಡಿ: ರೈತರ ಪರವಾಗಿ ನಿಲ್ಲಬೇಕಾಗಿರುವುದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯವೂ ಆಗಿದೆ. ಆದ್ದರಿಂದ ಕನಿಷ್ಠ 5 ರಿಂದ 8 ರೂ ತನಕ ಏರಿಕೆ ಮಾಡಬಹುದು ಎನ್ನುವ ಅಭಿಪ್ರಾಯಗಳು ಸಂಪುಟದಲ್ಲಿ ವ್ಯಕ್ತವಾಗಿವೆ.

ಜನವರಿಯಲ್ಲಿ ಲೋಕಲ್ ವಾರ್

ನಾನಾ ಕಾರಣಗಳಿಗಾಗಿ ಮುಂದೂಡಿಕೆ ಆಗುತ್ತಲೇ ಬಂದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಿಗದಿತ ಅವಧಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪದೇ ಪದೆ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಸ್ಥಳೀಯವಾಗಿಯೂ ಅಪಸ್ವರ ಕೇಳಿ ಬರುತ್ತದೆ. ಆದ್ದರಿಂದ ಚುನಾವಣೆ ಮುಂದೂಡುವುದು ಬೇಡ ಎಂಬ ಅಭಿಪ್ರಾಯ ಸಂಪುಟದಲ್ಲಿ ವ್ಯಕ್ತವಾಗಿದೆ. ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಜನವರಿಯೊಳಗೆ ನಡೆಸಲು ಸಂಪುಟದಲ್ಲಿ ಸಹಮತ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net