ಡ್ರಗ್ಸ್, ಸೈಬರ್ ಅಪರಾದ ಕಡಿವಾಣಕ್ಕೆ ಕಾರ್ಯತಂತ್ರ

ನಗರದ ಮುಖ್ಯ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ನೇರ ಸಂದರ್ಶನ
Chief Commissioner
Chief Commissioner
Published on: 

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ದಂಧೆ ಹಾಗೂ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ವಿಶೇಷ ಕಾರ್ಯತಂತ್ರ ರೂಪಿಸಿ, ಕೇವಲ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವುದಕ್ಕೆ ಸೀಮಿತವಾಗದೆ, ಡ್ರಗ್ಸ್ ದಂಧೆಯ ಹಿಂದಿರುವ ಜಾಲದ ಮೂಲ, ಪ್ರಮುಖ ಪೂರೈಕೆದಾರರು ಹಾಗೂ ದಂಧೆಕೋರರನ್ನು ಪತ್ತೆ ಹಚ್ಚಲು ಆದ್ಯತೆ ನೀಡಲಾಗುವುದು ಎಂದು ನೂತನ ನಗರ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ‘ವಿಜಯವಾಣಿ’ ಯೊಂದಿಗೆ ನಡೆಸಿದ ನೇರ ಸಂದರ್ಶನದಲ್ಲಿ ಹೇಳಿದ್ದಾರೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗುವವರು, ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವವರು ಹಾಗೂ ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವವರನ್ನು ರೌಡಿ ಪಟ್ಟಿಗೆ ಸೇರಿಸಲಾಗುವುದು.

* ದೇಶ-ವಿದೇಶದಿಂದ ನಗರಕ್ಕೆ ಸಿಂಥೆಟಿಕ್ಸ್ ಡ್ರಗ್ಸ್ ಪೂರೈಕೆ ಹೆಚ್ಚಾಗಿದೆ. ಇದರ ಕಡಿವಾಣಕ್ಕೆ ಏನು ಕ್ರಮ ಕೈಗೊಳ್ಳುವಿರಿ? ಮತ್ತು ಹೇಗೆ?

ನಗರದಲ್ಲಿ ಡ್ರಗ್ಸ್ ಸೀಜರ್‌ಗಳ ಸಂಖ್ಯೆ ಹೆಚ್ಚಾಗಿರುವುದು ನಿಜ. ಇದರ ನಿಯಂತ್ರಣಕ್ಕೆ ಸಾಧ್ಯವಾದಷ್ಟು ಪ್ರಯತ್ನ ಮೀರಿ ಕೆಲಸ ಮಾಡಲಾಗುವುದು. ಬಹಳಷ್ಟು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಅದರೆ, ಅವುಗಳ ಾಲೋಅ್ ಆಗಿಲ್ಲ. ಡ್ರಗ್ಸ್ ಕೃತ್ಯದಲ್ಲಿ ತೋಡಗಿದವರ ಮೇಲೆ ನಿಗಾ ಇಡುವ ಕೆಲಸ ನಡೆದಿಲ್ಲ. ಮುಖ್ಯವಾಗಿ ಮಾದಕ ವಸ್ತು ಪೂರೈಕೆಯ ಮೂಲದ ಪತ್ತೆ ಹಚ್ಚುವ ಕೆಲಸ ನಮ್ಮಿಂದ ನಡೆಯಬೇಕಾಗಿದೆ. ಇನ್ನೂ ಮುಂದೆ ಆ ಕಾರ್ಯವನ್ನು ಮಾಡುತ್ತೇನೆ.

* ವಿವಿಧ ಅಪರಾಧ ಪ್ರಕರಣಗಳ ಜತೆ ಸೈಬರ್ ಕ್ರೈಂ ನಗರದಲ್ಲಿ ಮೀತಿಮಿರಿದೆ. ಇದರ ನಿಯಂತ್ರಣ ಹೇಗೆ?

ನಗರ ಒಂದೇ ಅಲ್ಲದೆ ರಾಜ್ಯದಲ್ಲಿ ಮರ್ಡರ್, ರಾಬರಿ, ರೇಪ್, ಕಳ್ಳತನ, ಅತ್ಯಾಚಾರಗಳಂತಹ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದೆ. ಯಾಕೇಂದರೆ ಸಾರ್ವಜನಿಕರ ಮನೆಗಳ ಮುಂದೆ ಸಿಸಿ ಕ್ಯಾಮೆರಾ, ಟೋಲ್, ಚೆಕ್ ಪೋಸ್ಟ್‌ಗಳಲ್ಲೂ ಸಿಸಿ ಕ್ಯಾಮೆರಾ ಇರುವುದರಿಂದ ಅವುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಸೈಬರ್ ಅಪರಾಧಗಳು ಹೆಚ್ಚಳವಾಗಿವೆ. ಇದಕ್ಕೆ ಕಾರಣ ಹೆಚ್ಚಾಗಿ ಮೊಬೈಲ್ ಪೋನ್ ಬಳಕೆ, ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ಸೈಬರ್ ಪ್ರಕರಣ ಹೆಚ್ಚಾಗಿವೆ. ಇದರ ಬಗ್ಗೆ ಇಲಾಖೆ ಹೆಚ್ಚು ೆಕಸ್ ನೀಡುತ್ತಿದ್ದು ಸೈಬರ್ ಠಾಣೆಗಳು, ಸೈಬರ್ ಕಮಾಂಡ್ ರಚನೆ ಮತ್ತು ಅದಕ್ಕಾಗಿಯೆ ಪ್ರತ್ಯೇಕ ಡಿಜಿಪಿ ರಚನೆ ಮಾಡಲಾಗಿದೆ.

*ನಗರದಲ್ಲಿ ಕೌಟಂಬಿಕ ಕಲಹ, ಗಲಾಟೆ, ಮರ್ಡರ್ ಪ್ರಕರಣಗಳು ಹೆಚ್ಚಾಗುತ್ತಿವೆ ಯಾಕೆ?

ಸಾಮಾಜಿಕವಾಗಿ ಅದರ ಬಗ್ಗೆ ಅಧ್ಯಯನ ಮಾಡಬೇಕಾಗಿದೆ. ಯಾಕೆಂದರೆ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಾರಣ ಹೆಚ್ಚಾಗಿ ನಗರದಲ್ಲಿನ ಜನರು ಆನ್‌ಲೈನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅಲ್ಲದೇ ಪ್ರತಿ ಪ್ರಕರಣಕ್ಕೂ ಒಂದೊಂದು ಕಾರಣಗಳಿವೆ. ಈ ಬಗ್ಗೆ ನಿಮಾನ್ಸ್ ಅವರೊಂದಿಗೆ ಸಲಹೆ ಕೇಳುತ್ತೇವೆ. ಜಂಟಿಯಾಗಿ ಜಾಗೃತಿ ಕಾರ್ಯಕ್ರಮ ನಡೆಸಲು ಪ್ರಯತ್ನಿಸಲಾಗುವುದು. ಪೊಲೀಸರು ಸೋಶಿಯಲ್ ಸೈಂಟಿಸ್ಟ್ ರೀತಿಯಲ್ಲಿ ಹೇಳಿಕೆ ನೀಡಲು ಆಗುವುದಿಲ್ಲ.

*ನಗರದಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆ ಇದೆ? ಅದನ್ನು ಹೇಗೆ ನಿಭಾಯಿಸುತ್ತೀರಿ?

ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಈಗಿನದಲ್ಲ, ಅದು ನಿರಂತರ. ಆ ಕೂಗು ನಾವು ನೌಕರಿಗೆ ಸೇರಿದಾಗಿನಿಂದಲೂ ಇದೆ. ನಾನು ಈ ಹಿಂದೆ ಸಿಬಿಐನಿಂದ ವಾಪಸ್ ಬಂದಾಗ ರಾಜ್ಯದಲ್ಲಿ 74ಸಾವಿರ ಸಿಬ್ಬಂದಿಗಳು ಇದ್ದರು. ಈಗ 97 ಸಾವಿರ ಇದೆ. ಸರ್ಕಾರದಿಂದ 1.19 ಲಕ್ಷ ಮಂಜೂರಾತಿ ಇದೆ. 20 ಸಾವಿರ ಖಾಲಿ ಹುದ್ದೆಗಳು ಇವೆ. ಈ ವರ್ಷ 8ಸಾವಿರ ಭರ್ತಿಮಾಡುತ್ತಿದ್ದೇವೆ. ಮುಂದಿನ ವರ್ಷ ಕೂಡ 12ರಿಂದ 13 ಸಾವಿರ ಸಿಬ್ಬಂದಿ ಭರ್ತಿ ಮಾಡುವ ಗುರಿ ಹೊಂದಲಾಗಿದೆ. ಒಟ್ಟಾರೆ ಪೊಲೀಸ್ ಸಿಬ್ಬಂದಿಗಳ ಪೈಕಿ ಶೇ 33ರಷ್ಟು ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನೇಮಕಾತಿ ವೇಳೆ ಬೆಂಗಳೂರಿನವರು ಯಾರು ಬರುವುದಿಲ್ಲ. ಬೇರೆ ಬೇರೆ ಜಿಲ್ಲೆಯವರು ನೇಮಕವಾಗುತ್ತಿದ್ದಾರೆ. ಆದರೆ, ಅವರು 8ರಿಂದ 10 ವರ್ಷ ಸೇವೆ ಸಲ್ಲಿಸಿ ಅವರ ಜಿಲ್ಲೆಗೆ ವರ್ಗಾವಣೆಯಾಗುತ್ತಿದ್ದಾರೆ. ಅಲ್ಲದೇ ಬೇರೆ ಬೇರೆ ಸವಾಲುಗಳು ಇವೆ. ಪ್ರತಿ ವರ್ಷ ನೇಮಕಾತಿ ನಡೆದರೆ ಯಾವುದೇ ಸಮಸ್ಯೆ ಬರುವುದಿಲ್ಲ.

* ರೌಡಿಶಿಟರ್, ಕಾನೂನು ಬಾಹಿರ ಚಟುವಟಿಕೆ, ರೋಡ್ ರೇಜ್ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿವೆ ಇದಕ್ಕೆನು ಕ್ರಮ?

ರೌಡಿಶಿಟರ್‌ಗಳ ಬಗ್ಗೆ ಅದಕ್ಕೆ ಆದಂತಹ ಪ್ರಕ್ರಿಯೆ ಇದೆ, ಪೊಲೀಸ್ ಮ್ಯಾನ್ಯುವಲ್‌ನಲ್ಲಿ 1059 ಆರ್ಡರ್ ಇದೆ, ಅಲ್ಲದೇ ಹೈಕೋರ್ಟ್ ಆದೇಶ ಕೂಡ ಇದೆ. ಯಾರು ರೌಡಿಶಿಟರ್‌ಗೆ ಅರ್ಹರು ಎಂಬ ಮಾನದಂಡದ ಪ್ರಕಾರ ರೌಡಿಪಟ್ಟಿ ತೆಗೆದುಕೊಳ್ಳಲಾಗುವುದು. ಕಾನೂನು ಬಾಹಿರ ಉಲ್ಲಂಘನೆ ಹಾಗೂ ಶಾಂತಿಭಂಗ ಉಂಟು ಮಾಡುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು.

*ಕಳೆದ ಬಾರಿಯ ಐಪಿಎಲ್ ವೇಳೆ ಕಾಲ್ತುಳಿತ ದುರಂತ ನಡೆದಿತ್ತು? ಈ ಬಗ್ಗೆ ಏನು ಹೇಳುತ್ತೀರಿ?

ಬೆಂಗಳೂರು ದೊಡ್ಡ ನಗರ, ಹಿಂದೆ ನಡೆದ ಕಾಲ್ತುಳಿತದ ಅಚಾತುರ್ಯ ಘಟನೆಯನ್ನು ಮುಂದಿಟ್ಟುಕೊಂಡು ಇನ್ನು ಮುಂದೆ ಯಾವುದೇ ಸಭೆ, ಸಮಾರಂಭ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂಬ ನಿಲುವು ಸರಿಯಲ್ಲ. ಒಂದು ಅಹಿತಕರ ಘಟನೆ ನಡೆದ ಕಾರಣಕ್ಕೆ ಎಲ್ಲ ಕಾರ್ಯಕ್ರಮಗಳನ್ನೂ ನಿರ್ಬಂಧಿಸುವುದು ಸೂಕ್ತವಲ್ಲ ಆದರೆ, ಸಾರ್ವಜನಿಕರ ಸುರಕ್ಷತೆಯನ್ನು ನಿರ್ಲಕ್ಷಿಸಲಾಗುವುದಿಲ್ಲ. ಸೂಕ್ತ ಭದ್ರತಾ ವ್ಯವಸ್ಥೆ, ಜನಸಂದಣಿ ನಿರ್ವಹಣೆ ಹಾಗೂ ಅಗತ್ಯ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನೊಂದಿಗೆ ಐಪಿಎಲ್ ಸೇರಿ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗುವುದು.

* ನಗರ ಮುಖ್ಯ ಆಯುಕ್ತರಾಗಿ ಆಯ್ಕೆಯ ಜತೆಗೆ ಅವಕಾಶ ಸಿಕ್ಕಿರುವುದಕ್ಕೆ ನಿಮ್ಮ ಅಭಿಪ್ರಾಯವೇನು?

ಎಲ್ಲ ಐಪಿಎಸ್ ಅಧಿಕಾರಿಗಳಿಗೆ ಮತ್ತು ಕರ್ನಾಟಕ ಕೆಡರ್‌ನಲ್ಲಿರುವವರಿಗೆ ಬೆಂಗಳೂರ ನಗರದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಬೇಕೆಂಬ ಆಪೇಕ್ಷೆ ಇರುತ್ತದೆ. ನನಗೆ ಸಿಕ್ಕ ಅವಕಾಶ ಒಂದು ನನಗೆ ಸಿಕ್ಕ ಗೌರವ ಎಂದು ಭಾವಿಸುತ್ತೇನೆ. ಹಾಗಾಗಿ ಮುಖ್ಯಮಂತ್ರಿಗಳಿಗೆ, ಗೃಹಮಂತ್ರಿಗಳಿಗೆ, ಡಿಸಿಎಂ ಹಾಗೂ ಇಲಾಖೆ ಮುಖ್ಯಸ್ಥರಿಗೆ ಆಭಾರಿಯಾಗಿದ್ದೇನೆ. ಈ ಹೊಣೆಗಾರಿಕೆ ಹಾಗೂ ನನ್ನ ಜವಾಬ್ದಾರಿ ಹೆಚ್ಚಾಗಿರುವ ಕಾರಣ ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ.

ಮುಖ್ಯ ಪೊಲೀಸ್ ಆಯುಕ್ತ ಹುದ್ದೆ ಗೊಂದಲ!

ರಾಜ್ಯ ಪೊಲೀಸ್ ಆ್ಯಕ್ಟ್‌ನಲ್ಲಿ ಕಮಿಷ್ನರ್ ಡಿಜಿ ಹುದ್ದೆ ಎಂದು ಇದೆ. ಆದರೆ ನಗರದ ಮುಖ್ಯ ಪೊಲೀಸ್ ಆಯುಕ್ತರ ಹುದ್ದೆ ಹೆಸರು ಇಲ್ಲ. ಸರ್ಕಾರ ಆದೇಶದಲ್ಲೂ ಬರೆದಿಲ್ಲ. ಈ ಗೊಂದಲದ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಎರಡನೇ ಆದೇಶಲ್ಲಿ ತಿಳಿಸಿದೆ. ಎಲ್ಲ ಪೊಲೀಸ್ ಆಯುಕ್ತರುಗಳು ನಗರದ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಲು ಹೇಳಲಾಗಿದೆ. ಮುಖ್ಯ ಆಯುಕ್ತರು ಡಿಜಿ ಅವರಿಗೆ ವರದಿ ಸಲ್ಲಿಸುತ್ತಾರೆ ಹೇಳಲಾಗಿದೆ. ಅದಕ್ಕಾಗಿ ಅಪಾರ್ಥ ಕಲ್ಪಿಸಿಕೊಳ್ಳುವುದು ಅಗತ್ಯವಿಲ್ಲ.ಈ ಬಗ್ಗೆ ನಮ್ಮ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಮುಖ್ಯ ಆಯುಕ್ತ ಆರ್.ಹಿತೇಂದ್ರ ತಿಳಿಸಿದರು.