ಜಮಖಂಡಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ

ಕಲೆ, ಸಾಹಿತ್ಯ, ಸಂಸ್ಕೃತಿಯ ಅನಾವರಣ
Sri Rambhapuri Jagadguru’s Sharannavaratri Dasara Religious Conference in Jamkhandi city, Bagalkot district, starting October 11.
ಅ.11ರಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ
Published on: 

ಪ್ರಶಾಂತ ರಿಪ್ಪನ್‌ಪೇಟೆ, ಬೆಂಗಳೂರು : ಕರ್ನಾಟಕದ ಸಾಂಸ್ಕೃತಿ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವಲ್ಲಿ ಮೈಸೂರು ದಸರಾ ವಿಶ್ವಪ್ರಸಿದ್ಧವಾಗಿದೆ. ಅರಮನೆ ದಸರಾ ಸಾಂಸ್ಕೃತಿಕ, ಚಾರಿತ್ರಿಕ ಹಿನ್ನೆಲೆಯನ್ನು ಸಾರಿದರೆ; ಗುರುಮನೆ ದಸರಾವು ಸುದೀರ್ಘ ಧಾರ್ಮಿಕ ಪರಂಪರೆಯ ಪ್ರತೀಕವಾಗಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿದೆ. ಶ್ರೀರಂಭಾಪುರಿ ಜಗದ್ಗುರಗಳ 35ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಅ.11ರಿಂದ 21ರವರೆಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿನಗರದ ಶ್ರೀಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ನವರಾತ್ರಿ ದುಷ್ಟರ ಸಂಹಾರಕ್ಕೆ ಅವತರಿಸಿದ ಆದಿಶಕ್ತಿಯ ಆರಾಧನೆಗೆ ಮೀಸಲಾದ ಕಾಲ. ಧರ್ಮಪೀಠಗಳು ಅಧರ್ಮದ ನಾಶಕ್ಕಾಗಿ ಸಂಕಲ್ಪ ಮಾಡಿ, ಧರ್ಮ ಪ್ರಚಾರವನ್ನು ಕೈಗೊಳ್ಳುವ ಪರ್ವಕಾಲ. ಭಗವಂತ ಶಸ್ತ್ರವನ್ನು ಹಿಡಿದು ದುಷ್ಟರನ್ನು ಸಂಹರಿಸಿದರೆ; ಶ್ರೀಗುರು ಶಾಸ್ತ್ರವನ್ನು ಹಿಡಿದು ರಾಕ್ಷಸಿ ಗುಣಗಳನ್ನು ನಾಶ ಮಾಡಿ ಸುಸಂಸ್ಕೃತ ಸಮಾವನ್ನು ನಿರ್ಮಾಣ ಮಾಡುತ್ತಾನೆ. ಈ ಹಿನ್ನೆಲೆಯಲ್ಲಿ ನಾಡಿನ ವಿವಿಧ ಮಠ-ಪೀಠಗಳು ಶರನ್ನವರಾತ್ರಿಯನ್ನು ವಿಶೇಷವಾಗಿ ಆಚರಿಸುತ್ತವೆ.

ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀ1008 ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಪೀಠದ ಪೂರ್ವಾಚಾರ್ಯರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ದಸರಾ ಧರ್ಮ ಸಮ್ಮೇಳನವನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸಿದ್ದಾರೆ. ಪ್ರತಿವರ್ಷ ನಾಡಿನ ಬೇರೆ ಬೇರೆ ಭಾಗದಲ್ಲಿ ಆಚರಿಸುವ ಮೂಲಕ ಜಾತಿ, ಮತ, ಪಂಥಗಳ ಎಲ್ಲೆಯನ್ನು ಮೀರಿ ಸರ್ವಧರ್ಮೀಯರ ಸಾರ್ವತ್ರಿಕ ಉತ್ಸವವನ್ನಾಗಿ ಮಾರ್ಪಡಿಸಿದ್ದಾರೆ.

ಪ್ರಾಚೀನ ಕಾಲದಿಂದ ಪೀಠದ ಪರಿಸರದಲ್ಲಿ ಆಚರಣೆಗೊಳ್ಳುತ್ತಾ ಬಂದಿದ್ದ ದಸರಾ ಮಹೋತ್ಸವವು ಮೈಸೂರು ಮಹಾರಾಜರ ಬಿನ್ನಹದ ಮೇರೆಗೆ 1925ರಲ್ಲಿ ಶ್ರೀಶಿವಾನಂದ ಜಗದ್ಗುರುಗಳು ಮೈಸೂರಿನಲ್ಲಿ ಆರಂಭಿಸಿದರು. ನಂತರ ಲಿಂ.ವೀರಗಂಗಾಧರ ಜಗದ್ಗುರುಗಳ ಕಾಲದಲ್ಲಿ ಮತ್ತಷ್ಟು ವೈಭವ ಪಡೆದುಕೊಂಡು, ಶ್ರೀವೀರರುದ್ರಮುನಿ ಜಗದ್ಗುರುಗಳು ಕಾಲದಲ್ಲಿ ಕಾರ್ಯಕ್ರಮದ ವ್ಯಾಪ್ತಿ ಹೊರರಾಜ್ಯಕ್ಕೆ ವಿಸ್ತರಿಸಿತು. ಪ್ರಸ್ತುತ ಜಗದ್ಗುರುಗಳು ದಸರಾ ಮಹೋತ್ಸವವನ್ನು ಧಾರ್ಮಿಕದ ಜೊತೆಗೆ ಸಾಮಾಜಿಕವಾಗಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಕೃಷಿ ಹೀಗೆ ಎಲ್ಲ ಕ್ಷೇತ್ರದ ವಿಚಾರ ಮಂಡನೆಯ ವೇದಿಕೆಯಾಗಿ ಪರಿವರ್ತಿಸಿದ್ದಾರೆ.

ಸಾಹಿತ್ಯ ಸಂಸ್ಕೃತಿಯ ಸಂವರ್ಧನೆ

ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಅಧ್ಯಾತ್ಮದ ಅರಿವು ಅವಶ್ಯಕ. ಭೌತಿಕ ಸಂಪತ್ತು ಅಳಿದರೂ ಅಧ್ಯಾತ್ಮ ಸಂಪತ್ತು ಶಾಶ್ವತ. ಆಧ್ಯಾತ್ಮದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಸಂವರ್ಧನೆಯ ಮೂಲಕ ಸರ್ವರಿಗೂ ಶಾಂತಿ ಸಮೃದ್ಧಿಯನ್ನು ಸಾರುವ ಉದಾತ್ತ ಸಂದೇಶ ದಸರಾ ಸಮ್ಮೇಳನದ ಮೂಲ ಆಶಯ. ಸಮ್ಮೇಳನದಲ್ಲಿ ಧರ್ಮ-ಸಂಸ್ಕಾರವನ್ನು ಉದ್ದೀಪನಗೊಳಿಸುವ ಉಪದೇಶಾಮೃತಗಳು, ತಜ್ಞರ ಉಪನ್ಯಾಸ, ಕೃತಿಗಳ ಲೋಕಾರ್ಪಣೆ, ಸಂಗೀತ, ನೃತ್ಯ, ಜನಪದ ಕಲೆಯನ್ನು ಪ್ರೋತ್ಸಾಹಿಸುವ ಪ್ರದರ್ಶನಗಳು ಅನಾವರಣಗೊಳ್ಳಲಿವೆ. ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಶಿವಾಚಾರ್ಯ ರತ್ನ, ವೀರಶೈವ ಸಿರಿ, ಸಾಧನಾ ಸಿರಿ, ಸಾಹಿತ್ಯ ಸಿರಿ ಮತ್ತು ಶ್ರೀರಂಭಾಪುರಿ ಯುವಸಿರಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಇನ್ನುಳಿದಂತೆ ಪ್ರತಿನಿತ್ಯ ಬೆಳಗ್ಗೆ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ. ಸಂಜೆ ಧರ್ಮ ಸಮ್ಮೇಳನ, ನಜರ್ ಸಮರ್ಪಣೆ, ಅಡ್ಡಪಲ್ಲಕ್ಕಿ ಮಹೋತ್ಸವ, ಶಮೀ ಸೀಮೋಲ್ಲಂಘನೆ, ಸಿಂಹಾಸನಾರೋಹಣ ನಡೆಯಲಿವೆ.


The grand 'Addapallakki' (cross-palanquin) procession of the Sri Rambhapuri Jagadguru, held on Vijayadashami—the final day of the Dasara festival.
ದಸರ ಮಹೋತ್ಸವದ ಕೊನೆಯ ದಿನವಾದ ವಿಜಯ ದಶಮಿಯಂದು ನಡೆಯುವ ಶ್ರೀರಂಭಾಪುರಿ ಜಗದ್ಗುರುಗಳ ವೈಭವದ ಅಡ್ಡಪಲ್ಲಕ್ಕಿ ಮಹೋತ್ಸವ

ಕರ್ಮಭೂಮಿಯಿಂದ ಜ್ಞಾನಭೂಮಿಗೆ ಬಂದ ಉತ್ಸವ

ಶ್ರೀರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನದ ಆತಿಥ್ಯಕ್ಕೆ ಸಾಲು ಸಾಲು ಭಿನ್ನಹಗಳು ಬರುತ್ತವೆ. ಎಲ್ಲ ದೃಷ್ಟಿಯಿಂದ ಪರಿಶೀಲಿಸಿ ಜಗದ್ಗುರುಗಳು ಮುಂದಿನ ವರ್ಷದ ದಸರಾ ಮಹೋತ್ಸವ ಸ್ಥಳವನ್ನು ಈ ವರ್ಷದ ಕಾರ್ಯಕ್ರಮದಲ್ಲೇ ಘೋಷಿಸುತ್ತಾರೆ. ಅಂತೆಯೇ 2025ರಲ್ಲಿ ಬಸವಣ್ಣನ ಕರ್ಮಭೂಮಿಯಲ್ಲಿ ನಡೆದಿದ್ದ ಉತ್ಸವ, ಈ ಬಾರಿ ಬಸವಣ್ಣನ ಜ್ಞಾನಭೂಮಿ ಕೂಡಲಸಂಗಮವಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರಕ್ಕೆ ಒಲಿದು ಬಂದಿದೆ. ಪ್ರಸ್ತುತ ಇರುವ ಪಂಚಪೀಠದ ಶ್ರೀಶೈಲ ಮತ್ತು ಕಾಶೀ ಜಗದ್ಗುರುಗಳ ಜನ್ಮಸ್ಥಳ ಕೂಡ ಬಾಗಲಕೋಟೆ ಜಿಲ್ಲೆ ಎಂಬುದು ಗಮನಾರ್ಹ. ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ನೇತೃತ್ವದ ಸ್ವಾಗತ ಸಮಿತಿ ಕಾರ್ಯಕ್ರಮದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇತಿಹಾಸದ ಪುಟಗಳಲ್ಲಿ ಹೊಸ ದಾಖಲೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net