ತರ್ಪಣ ವಿಧಿ ಆಚರಣೆಗೆ ಶಾಸ್ತ್ರೀಯ ಅರಿವು ಅಗತ್ಯ

ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಮತ
Sri Veereshananda Saraswati Swamiji, Dr. S. Ahalya Sharma, Dr. Y. A. Ajith Niranjana, and others participated in the launch ceremony of the book *Tarpana Vidhi Viveka*, published by Anantharama Prakashana.
ಅನಂತರಾಮ ಪ್ರಕಾಶನದಿಂದ ಪ್ರಕಟವಾದ ತರ್ಪಣ ವಿಧಿ ವಿವೇಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಡಾ.ಎಸ್.ಅಹಲ್ಯಾ ಶರ್ಮ, ಡಾ.ವೈ.ಎ.ಅಜಿತ್ ನಿರಂಜನ ಮತ್ತಿತರರು ಪಾಲ್ಗೊಂಡಿದ್ದರು.
Published on: 

ಬೆಂಗಳೂರು : ಪಿತೃಕಾರ್ಯಗಳ ಪ್ರಮುಖ ಅಂಗವಾಗಿರುವ ತರ್ಪಣ ವಿಧಿಯನ್ನು ಕೇವಲ ಸಂಪ್ರದಾಯದ ಆಚರಣೆಯಾಗಿ ನೋಡದೆ, ಅದರ ಹಿಂದಿರುವ ಶಾಸ್ತ್ರೀಯ, ಧಾರ್ಮಿಕ ಹಾಗೂ ತಾತ್ತ್ವಿಕ ಆಶಯಗಳನ್ನು ಅರಿತು ಆಚರಿಸಬೇಕು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಮಲ್ಲೇಶ್ವರಂನ ಶೃಂಗೇರಿ ಶಂಕರ ಮಠದಲ್ಲಿ ಇತ್ತೀಚೆಗೆ ನಡೆದ ‘ತರ್ಪಣ ವಿಧಿ ವಿವೇಕ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಪಿತೃಗಳನ್ನು ಸ್ಮರಿಸುವುದು ಭಾರತೀಯ ಸಂಸ್ಕೃತಿ. ಪಿತೃಕಾರ್ಯಗಳ ಹಿಂದೆ ಕೃತಜ್ಞತೆ, ಸ್ಮರಣೆ ಹಾಗೂ ಕುಟುಂಬ ಪರಂಪರೆಯೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವ ಮೌಲ್ಯಗಳಿವೆ. ಇಂತಹ ಆಚರಣೆಗಳ ಉದ್ದೇಶ ಮತ್ತು ವಿಧಾನಗಳನ್ನು ಮುಂದಿನ ಪೀಳಿಗೆಗೆ ಸರಿಯಾದ ರೀತಿಯಲ್ಲಿ ತಿಳಿಸಿಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತರ್ಪಣ ವಿಧಿ ವಿವೇಕ ಕೃತಿ ಉಪಯುಕ್ತವಾಗಿದೆ ಎಂದು ಸ್ವಾಮೀಜಿ ವಿವರಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಅಹಲ್ಯಾ ಶರ್ಮ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಾಸ್ತ್ರಪರಂಪರೆಯ ವಿಚಾರಗಳನ್ನು ಸಾಮಾನ್ಯ ಓದುಗರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ದಾಖಲಿಸುವುದು ಇಂದಿನ ಅಗತ್ಯವಾಗಿದೆ. ತರ್ಪಣ ವಿಧಿಯಂತಹ ಆಚರಣೆಗಳ ಕುರಿತು ಇರುವ ಸಂದೇಹಗಳಿಗೆ ಶಾಸ್ತ್ರೀಯ ಆಧಾರದಲ್ಲಿ ಸ್ಪಷ್ಟತೆ ನೀಡುವ ಕೃತಿಗಳು ಇನ್ನಷ್ಟು ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ವೆಂಕಟರಾಮ ಶಾಸ್ತ್ರಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದ ಮುಖ್ಯಸ್ಥ ಡಾ.ವಿನಯಾಚಾರ್ಯ ಪಿ. ಹಾಗೂ ಜ್ಯೋತಿಷಿ ಕರಣೀಕ ನರಹರಿ ಶರ್ಮ ಮತ್ತಿತರರು ಪಾಲ್ಗೊಂಡಿದ್ದರು.

ಪಿತೃಕಾರ್ಯಗಳಿಗೆ ಸಂಬಂಧಿಸಿದ ಶಾಸ್ತ್ರೀಯ ವಿಚಾರಗಳು ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗಬೇಕು ಎಂಬ ಉದ್ದೇಶದಿಂದ ಕೃತಿಯನ್ನು ರೂಪಿಸಲಾಗಿದೆ. ತರ್ಪಣ ವಿಧಿಯ ಕುರಿತು ಜನರಲ್ಲಿ ಇರುವ ಗೊಂದಲ ಹಾಗೂ ಸಂದೇಹಗಳಿಗೆ ಶಾಸ್ತ್ರಾಧಾರಿತವಾಗಿ ಉತ್ತರ ನೀಡುವ ಪ್ರಯತ್ನವನ್ನು ಕೃತಿಯಲ್ಲಿ ಮಾಡಲಾಗಿದೆ.
ಡಾ.ವೈ.ಎ.ಅಜಿತ್ ನಿರಂಜನ, ಕೃತಿಯ ಲೇಖಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net