ಸತೀಶ್​ ಜಾರಕಿಹೊಳಿ ವಿದೇಶಿ ಹೂಡಿಕೆ ಪ್ರಕರಣ ದೆಹಲಿಗೆ

Minister Satish jarkiholi
Minister Satish jarkiholi
Published on: 

ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಅವರ ಕುಟುಂಬದ ಸದಸ್ಯರು ಹಾಗೂ ಆಪ್ತರ ನಿವಾಸ, ಕಚೇರಿಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ಬಳಿಕ ಪ್ರಕರಣದ ತನಿಖೆ ದೆಹಲಿ ಅಧಿಕಾರಿಗಳಿಂದ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿದೇಶಿ ಹೂಡಿಕೆ, ಆಫ್ರಿಕಾದ ಗಣಿಗಾರಿಕೆ ನಡೆಸಲು ಸಿದ್ಧತೆ, ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಗುತ್ತಿಗೆಯಲ್ಲಿ ಲಂಚದ ಆರೋಪ ಹಾಗೂ ವಿದೇಶಕ್ಕೆ ಹಣ ಅಕ್ರಮ ವರ್ಗಾವಣೆಯ ಅಂಶಗಳ ಕುರಿತು ಇ.ಡಿ ದಾಖಲೆ ಪರಿಶೀಲನೆಗೆ ಮುಂದಾಗಿದೆ.

ಸೆ.9 ಮತ್ತು 10ರಂದು ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ್ತಾ ಸೇರಿ ಒಟ್ಟು 21 ಸ್ಥಳಗಳಲ್ಲಿ ಇ.ಡಿ ಶೋಧ ನಡೆಸಿತ್ತು. ಈ ವೇಳೆ 3.30 ಕೋಟಿ ನಗದು ಹಾಗೂ 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿತ್ತು. ವಿದೇಶಿ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಇತರೆ ಆಕ್ಷೇಪಾರ್ಹ ದಾಖಲೆಗಳನ್ನೂ ವಶಪಡಿಸಿಕೊಂಡಿದ್ದ ಬೆಂಗಳೂರು ವಲಯದ ಅಧಿಕಾರಿಗಳು ಕೇಂದ್ರ ಕಚೇರಿಗೆ ಮಾಹಿತಿ ನೀಡಿದರು.

ಆಫ್ರಿಕಾ ದೇಶದಲ್ಲಿ ಹೂಡಿಕೆ ತನಿಖೆ:

ಇಡಿ ತನಿಖೆಯಲ್ಲಿ ಸತೀಶ್ ಜಾರಕಿಹೊಳಿ ಕುಟುಂಬದ ಸದಸ್ಯರು ವಿದೇಶಿ ಕಂಪನಿಗಳಲ್ಲಿ ಪಾಲುದಾರಿಕೆ ಹೊಂದಿರುವ ಮಾಹಿತಿ ಪತ್ತೆಯಾಗಿದೆ ಎಂದು ಸಂಸ್ಥೆ ಹೇಳಿದೆ. ಅವರ ಪುತ್ರಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಸಹೋದರಿ ಮಹಾದೇವಿ ಮಂಜುನಾಥ್ ಅವರು ಕಾಂಗೋ ಹಾಗೂ ಜಾಂಬಿಯಾದ ಮೈನಿಂಗ್ ಕಂಪನಿಗಳು ಸೇರಿ ಇತರೆ ವಿದೇಶಿ ಕಂಪನಿಗಳಲ್ಲಿ ಪಾಲು ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದರ ಜತೆಗೆ ಸತೀಶ್ ಜಾರಕಿಹೊಳಿ ಅವರು ಕಾಂಗೋದಲ್ಲಿನ ಚಿನ್ನದ ಗಣಿಗಾರಿಕೆ ಸಂಸ್ಥೆ ಅಂದಾಜು 40ರಷ್ಟು ಪಾಲು ಹೊಂದಿರುವ ಮಾಹಿತಿ ದಾಖಲೆಗಳನ್ನು ಪತ್ತೆ ಮಾಡಲಾಗಿದೆ. ಕಾಂಗೋ ಮೂಲದ ಸಂಸ್ಥೆಯೊಂದರಲ್ಲಿ ಗಣನೀಯ ಪ್ರಮಾಣದ ಹೂಡಿಕೆ ಹಾಗೂ ವೆಚ್ಚಗಳನ್ನು ಅನಧಿಕೃತ ಮಾರ್ಗದ ಮೂಲಕ ನಗದು ರೂಪದಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದಕ್ಕೆ ಸಾಕ್ಷ್ಯಗಳು ದೊರೆತಿವೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿತ್ತು.

ಸಭೆಯಲ್ಲಿ ಚರ್ಚಿಸಿ ನಿರ್ಧಾರ?

ಬೆಂಗಳೂರು ವಲಯ ಕಚೇರಿ ಅಧಿಕಾರಿಗಳು ಸತೀಶ್ ಜಾರಕಿಹೊಳಿ ಅವರ ಮೇಲಿನ ದಾಳೆ ಬೆನ್ನಲ್ಲೇ ಕೇಂದ್ರ ಕಚೇರಿ ದೆಹಲಿಯ ನಿರ್ದೇಶಕ ರಾಹುಲ್ ನವೀನ್ ಬೆಂಗಳೂರಿಗೆ ಆಗಮಿಸಿ ವಲಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈಗಾಗಲೇ ಬೆಂಗಳೂರು ವಲಯ ಕಚೇರಿಯಲ್ಲಿ ಈಗಾಗಲೇ ಹೈಪ್ರೋೈಲ್ ಪ್ರಕರಣಗಳ ತನಿಖೆ ಇವೆ. ಅವುಗಳ ತನಿಖೆ ನಡೆಯುತ್ತಿದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ದೆಹಲಿ ಅಧಿಕಾರಿಗಳು ಮುಂದುರೆಸಿಕೊಂಡು ಹೋಗಲಿದ್ದಾರೆ ಎಂಬುದಾಗಿ ಸಭೆಯಲ್ಲಿ ಚರ್ಚಿಸಿದ್ದರು ಎನ್ನಲಾಗಿದೆ. ಅದರಂತೆ ಸತೀಶ್ ಜಾರಕಿಹೊಳಿ ಮೇಲಿನ ದಾಳಿ ಪ್ರಕರಣದ ತನಿಖೆಯನ್ನು ಕೇಂದ್ರ ಕಚೇರಿ ಅಧಿಕಾರಿಗಳು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಿಡಬ್ಲ್ಯುಡಿ ಗುತ್ತಿಗೆಗಳ ಮೇಲೂ ತನಿಖೆ

ದಾಳಿ ವೇಳೆ ದೊರೆದ ಮತಹ್ವದ ಸಾಕ್ಷಾೃಧಾರಗಳು ಹಾಗೂ ಟೆಂಡರ್ ಹಂಚಿಕೆಯಲ್ಲಿ ಲಂಚ ಪಾವತಿ ಆರೋಪದ ಕುರಿತು ತನಿಖೆ ನಡೆಯಲಿದೆ. ಈ ಲಂಚದ ಹಣದಿಂದ ಜಾರಕಿಹೊಳಿ ಕುಟುಂಬಸ್ಥರು ವಿದೇಶದಲ್ಲಿ ಆಸ್ತಿ ಖರೀದಿಸಲು ಬಳಸಿರುವ ಸಾಧ್ಯತೆಯ ಬಗ್ಗೆಯೂ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಮೂರು ರಸ್ತೆ ಕಾಮಗಾರಿಗಳಿಗೆ 3,190 ಕೋಟಿ ರೂ.ಅನುಮೋದನೆ, ಕೇಂದ್ರ ಮತ್ತು ರಾಜ್ಯ ಅನುದಾನದ ಹಂಚಿಕೆಯಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ನಿರ್ದಿಷ್ಟ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಶಂಕಿಸಿರುವ ಇ.ಡಿ ತನಿಖೆಯ ಪ್ರಮುಖ ಅಂಶವೆಂದು ಪರಿಗಣಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net