

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೂಷ್ ರಾವ್ ಸಾಕ್ಷ ಹೇಳಿಕೆ ಬುಧವಾರ ಪೂರ್ಣಗೊಂಡಿದೆ. ಆ ಮೂಲಕ ಒಟ್ಟು 6 ದಿನಗಳ ಕಾಲ ಅಂದಾಜು 20 ಗಂಟೆ, 150ಕ್ಕೂ ಅಧಿಕ ಪುಟಗಳಷ್ಟು ತನ್ನ ಸಾಕ್ಷ್ಯ ಹೇಳಿಕೆಯನ್ನು ಪ್ರದೂಷ್ ದಾಖಲಿಸಿದ್ದಾರೆ.
ನಗರದ 59ನೇ ಹೆಚ್ಚುವರಿ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತಾ ಎಂ.ಸಾಂಬ್ರಾಣಿ ಅವರ ಸಮ್ಮುಖದಲ್ಲಿ ಮಾಫಿ ಸಾಕ್ಷ್ಯ ಹೇಳಿಕೆ ಮುಕ್ತಾಯಗೊಂಡಿತ್ತು. ಪ್ರದೂಷ್ ಸಾಕ್ಷ್ಯ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೈಕೋಟ್ 2026ರ ಸೆ.18ರಂದು ಹೊರಡಿಸಿರುವ ಆದೇಶದಂತೆ ದಿನಾಂಕ ನಿಗದಿಪಡಿಸುವವರೆಗೆ ಪ್ರದೂಷ್ ಅನ್ನು ಆರೋಪಿಗಳು ಪರ ವಕೀಲರು ಪಾಟಿ ಸವಾಲಿಗೆ ಒಳಪಡಿಸುವ ಪ್ರಕ್ರಿಯೆಯನ್ನು ನ್ಯಾಯಾಲಯ ಮುಂದೂಡಿದೆ. ಹಾಗೆಯೇ, ಸಾಕ್ಷಿಗಳು ನ್ಯಾಯಾಲಯ ನಿಗದಿಪಡಿಸುವ ದಿನಾಂಕಕ್ಕೆ ಬದ್ಧವಾಗಿರಬೇಕು ಎಂದು ಸ್ಪಷ್ಟಪಡಿಸಿ ವಿಚಾರಣೆಯನ್ನು ಅ.8ಕ್ಕೆ ಮುಂದೂಡಿದೆ.
ಗುರುವಾರದ (ಅ.8ರ) ವಿಚಾರಣೆಗೆ ಪ್ರವಿತ್ರಾ ಗೌಡ, ದರ್ಶನ್ ಮತ್ತ ಪ್ರದೂಷ್ ಸೇರಿ ನ್ಯಾಯಾಂಗ ಬಂಧನದಲ್ಲಿರುವ ಏಳು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಸಾಕ್ಷಿ ಗುರುತು:
ಪ್ರದೂಷ್ ರಾವ್ ಮಾಫಿ ಸಾಕ್ಷ್ಯ ಹೇಳಿಕೆ ವೇಳೆ, ಪೊಲೀಸರ ವಶದಲ್ಲಿರುವ ಕೊಲೆಯಾದ ರೇಣುಕಸ್ವಾಮಿ ಒಳ ಉಡುಪು ಸೇರಿ ಧರಿಸಿದ್ದ ಬಟ್ಟೆಗಳು ಮತ್ತು ಆರೋಪಿಗಳು ಆತನ ಹತ್ಯೆಗೆ ಬಳಸಿದ್ದ ಹಗ್ಗ, ಕಬ್ಬಿಣದ ವಸ್ತುಗಳು, ಕೊಲು ಹಾಗೂ ದರ್ಶನ್ ರೇಣುಕಸ್ವಾಮಿ ಮೈ ಮೇಲೆ ತುಳಿಯಲು ಬಳಸಿದ್ದ ಶೂ, ಆತ ಧರಿಸಿದ್ದ ಶರ್ಟ್ ಹಾಗೂ ಇತರೆ ಆರೋಪಿಗಳು ಧರಿಸಿದ್ದ ಬಟ್ಟೆಗಳನ್ನು ಪ್ರದೂಷ್ ರಾವ್ ಗುರುತಿಸಿದ್ದಾರೆ.