ರಾಜ್ಯದಲ್ಲಿ ಮಳೆ ಕೊರತೆ:178 ತಾಲ್ಲೂಕುಗಳಲ್ಲಿ ಭೀಕರ ಬರ; ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್; 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿದ ರಾಜ್ಯ ಸರ್ಕಾರ! CM DK Shivakumar

ಸಂಪುಟ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್​
ಸಂಪುಟ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್​
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕದ 178 ತಾಲೂಕುಗಳಲ್ಲಿ ಭೀಕರ ಬರ! ಕ್ಷೇತ್ರಕ್ಕೆ ತಲಾ 1 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ.
  • 15 ಸಾವಿರ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ನೀಡಿದ ಸಿಎಂ ಶಿವಕುಮಾರ್ ಸಂಪುಟ ಸಭೆ
  • ಮಂಡ್ಯ ರೈತರಿಲ್ಲಿ ವಿಶೇಷ ಮನವಿ ಮಾಡಿದ ಸಿಎಂ ಡಿಕೆ ಶಿವಕುಮಾರ್​
ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿ ಮತ್ತು ಮಳೆ ಕೊರತೆಯನ್ನು ಎದುರಿಸಲು ರಾಜ್ಯ ಸರ್ಕಾರ ಆ್ಯಕ್ಷನ್ ಪ್ಲಾನ್‌ಗೆ ಚಾಲನೆ ನೀಡಿದೆ.
ಭಾನುವಾರ (ಜು.19) ನಡೆದ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್, ರಾಜ್ಯದ ಸದ್ಯದ ಪರಿಸ್ಥಿತಿ ಹಾಗೂ ಕೈಗೊಂಡಿರುವ ಪ್ರಮುಖ ತೀರ್ಮಾನಗಳನ್ನು ಹಂಚಿಕೊಂಡಿದ್ದಾರೆ.
ಬರಗಾಲದ ಭೀತಿಯ ನಡುವೆಯೂ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಶಿಕ್ಷಕರ ನೇಮಕಾತಿಗೆ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಈ ಸಂಪುಟ ಸಭೆಯ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ.

178 ತಾಲೂಕುಗಳಲ್ಲಿ ಬರ ಭೀತಿ: ಅಧಿಕಾರಿಗಳಿಗೆ ಸಿಎಂ ವಾರ್ನಿಂಗ್!

ರಾಜ್ಯದ ಒಟ್ಟು 178 ತಾಲೂಕುಗಳಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಈ ಪೈಕಿ 158 ತಾಲೂಕುಗಳಲ್ಲಿ ಅತ್ಯಂತ ಸಾಧಾರಣ ಮಳೆಯಾಗಿದೆ. ಅದರಲ್ಲೂ ವಿಜಯನಗರ ಜಿಲ್ಲೆಯ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರವಾಗಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ.
ಭಾನುವಾರವೂ ಸಭೆ ನಡೆಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿರುವ ಸಿಎಂ, ನಮಗೆ ಕೇವಲ ಕಾಗದದ ಮೇಲಿರುವ ರಿಪೋರ್ಟ್ ಬೇಡ, ಅಧಿಕಾರಿಗಳು ಕಚೇರಿ ಬಿಟ್ಟು ಫೀಲ್ಡ್ ವಿಸಿಟ್ ಮಾಡಬೇಕು. ಯಾರೂ ಕೂಡ ಊರು ಬಿಟ್ಟು ಹೆಡ್‌ಕ್ವಾರ್ಟರ್ಸ್ ದಾಟುವಂತಿಲ್ಲ ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ. ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ಬರ ಪರಿಸ್ಥಿತಿಯ ಸಂಪೂರ್ಣ ವರದಿಯನ್ನು ಸಲ್ಲಿಕೆ ಮಾಡಲಾಗುವುದು ಹಾಗೂ ಈ ಕುರಿತು ಪ್ರಧಾನಿ ಅವರಿಗೂ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಿಗೆ 1 ಕೋಟಿ ರೂ. ಮೀಸಲು: ರೈತರಿಗೆ ಮಹತ್ವದ ಮನವಿ

ರಾಜ್ಯದ ಜಲಾಶಯಗಳಲ್ಲಿ ಸದ್ಯ ಶೇ. 40ರಷ್ಟು ಮಾತ್ರ ನೀರಿದೆ. ಕೆರೆಗಳಲ್ಲಿ ಅಂತರ್ಜಲ ಕುಸಿತವಾಗಿ ಶೇ. 50ರಷ್ಟು ನೀರು ಖಾಲಿಯಾಗಿದೆ. ಆದರೂ ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ,ಎಂದು ಸಿಎಂ ತಿಳಿಸಿದ್ದಾರೆ. ಪ್ರತಿಯೊಂದು ಕ್ಷೇತ್ರಕ್ಕೂ ಕುಡಿಯುವ ನೀರಿಗಾಗಿ ಬರೋಬ್ಬರಿ 1 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ಹಣವನ್ನು ಬಳಸಲು ಸೂಚಿಸಲಾಗಿದೆ.
ಇದೇ ವೇಳೆ ಮಂಡ್ಯ ಭಾಗದ ರೈತರಲ್ಲಿ ಮನವಿ ಮಾಡಿದ ಸಿಎಂ ಡಿಕೆಶಿ, ಕುಡಿಯುವ ನೀರಿಗಾಗಿ ಮಂಡ್ಯದಲ್ಲಿ ನೀರು ಬಿಡಲಾಗಿದೆ. ದಯವಿಟ್ಟು ರೈತರು ಹೊಸದಾಗಿ ಯಾವುದೇ ಬೆಳೆಗಳನ್ನು ಹಾಕಬೇಡಿ, ಎಂದು ಕೇಳಿಕೊಂಡಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಬೋರ್‌ವೆಲ್ ಕೊರೆಯುವಾಗ ದುರುಪಯೋಗ ತಡೆಯಲು ಕಡ್ಡಾಯವಾಗಿ ವಿಡಿಯೋ ರೆಕಾರ್ಡ್ ಮಾಡಬೇಕು ಎಂದು ಆದೇಶಿಸಲಾಗಿದೆ.

15 ಸಾವಿರ ಶಿಕ್ಷಕರ ನೇಮಕಕ್ಕೆ ಸಮ್ಮತಿ!

ಬರ ಪರಿಹಾರದ ಜೊತೆಗೆ ರಾಜ್ಯದ ಜನತೆಗೆ ಹಲವು ಕೊಡುಗೆಗಳನ್ನು ಸಂಪುಟ ಸಭೆಯಲ್ಲಿ ಅಂಗೀಕಾರ ದೊರೆತಿದೆ.
ಶಿಕ್ಷಕರ ನೇಮಕಾತಿ: ಬಹುದಿನಗಳಿಂದ ಕಾಯುತ್ತಿದ್ದ 15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ.
ಬೆಂಗಳೂರು ಮೆಡಿಕಲ್ ಕಾಲೇಜ್: ಬಿಎಂಸಿಆರ್‌ಐನಲ್ಲಿ ಹೊಸ ಹಾಸ್ಟೆಲ್ ನಿರ್ಮಾಣಕ್ಕಾಗಿ 83 ಕೋಟಿ ರೂಪಾಯಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
ಚಿತ್ರದುರ್ಗದ ಜನತೆಗೆ ಬಂಪರ್: ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯಲ್ಲಿ ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರ ಕನಸಿನ ಯೋಜನೆಯಾಗಿದ್ದ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯ ತುಂಬಿಸುವ 244 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಮೈಸೂರು ಕಪಿಲಾ ನದಿ ಅಭಿವೃದ್ಧಿ: ನಂಜನಗೂಡಿನ ಕಪಿಲಾ ನದಿ ಅಭಿವೃದ್ಧಿಗೆ 70 ಕೋಟಿ ರೂಪಾಯಿ ಅನುಮೋದಿಸಲಾಗಿದೆ.
ಇತರೆ: ರಾಯಚೂರಿಗೆ ಐಐಟಿ ಎಐ ಉತ್ಕೃಷ್ಟ ಯೋಜನೆ, ಗುಲ್ಬರ್ಗ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ. ಹಾಗೂ ಕೃಷಿ ಇಲಾಖೆಗೆ 36 ಕೋಟಿ ರೂ. ಅನುದಾನ ನೀಡಲಾಗಿದೆ. ಇನ್ನು ಕೆಪಿಎಸ್‌ಸಿ ಅಧ್ಯಕ್ಷರ ಅಮಾನತಿಗೆ ಸಂಪುಟ ಸಭೆ ಅಧಿಕೃತ ಸಮ್ಮತಿ ಸೂಚಿಸಿದೆ.

ಆಗಸ್ಟ್ ಮೊದಲ ವಾರ ಮುಂಗಾರು ಅಧಿವೇಶನ? ಕಾವೇರಿಗಾಗಿ ದೆಹಲಿ ಪ್ರವಾಸ!

ರಾಜ್ಯದ ಮುಂಗಾರು ಅಧಿವೇಶನ ಆಗಸ್ಟ್ ಮೊದಲ ವಾರದಲ್ಲಿ ಆರಂಭವಾಗುವ ಸುಳಿವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಶೀಘ್ರದಲ್ಲೇ ದಿನಾಂಕ ನಿಗದಿ ಆಗಲಿದೆ. ಇದೇ ವೇಳೆ ಕಾವೇರಿ ವಿಚಾರವಾಗಿ ಸಂಸದರನ್ನು ಭೇಟಿಯಾಗಿ ಚರ್ಚಿಸಲು ಹಾಗೂ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲು ದೆಹಲಿಗೆ ಹೋಗುವುದಾಗಿ ತಿಳಿಸಿದ್ದಾರೆ. ಕೊನೆಯದಾಗಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮಾತನಾಡಿದ ಸಿಎಂ, ಅಧಿವೇಶನದ ಒಳಗಡೆಯೇ ಸಂಪುಟ ವಿಸ್ತರಣೆ ಆಗಲಿದ್ದು, ಬಹುಶಃ ಈ ವಾರದೊಳಗೇ ಗುಡ್ ನ್ಯೂಸ್ ಸಿಗಬಹುದು ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net