ಕಡೂರಿನಲ್ಲಿ ನೀರಿಗಾಗಿ ಪರದಾಟ: ಮನವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಹೋರಾಟ; ಪಿಡಿಓ ಕಚೇರಿಯಲ್ಲಿ ಹಸು ಕಟ್ಟಿ ಗ್ರಾಮಸ್ಥರ ಆಕ್ರೋಶ! Cow in PDO Office

ಕುಡಿಯುವ ನೀರಿಗಾಗಿ ಕಡೂರಿನಲ್ಲಿ ಗ್ರಾಮಸ್ಥರ ವಿಭಿನ್ನ ಪ್ರತಿಭಟನೆ! ಪಿಡಿಒ ಕಚೇರಿಯಲ್ಲೇ ಹಸು ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು. ಘಟನೆಯ ಪೂರ್ಣ ವಿವರ ಇಲ್ಲಿದೆ.

ಹಾವೇರಿ: ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರಿಯಾದ ಸ್ಪಂದನೆ ದೊರೆಯದ ಹಿನ್ನೆಲೆ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಪಂ ಪಿಡಿಓ ಕಚೇರಿಯ ಒಳಗೆ ಹಸುಗಳನ್ನು ತಂದು ಕಟ್ಟಿ ಪ್ರತಿಭಟನೆ ನಡೆಸಿದ ಘಟನೆ ಹಾವೇರಿ ಜಿಲ್ಲೆಯ, ರಟ್ಟಿಹಳ್ಳಿ ತಾಲೂಕಿನ ಕಡೂರಿನಲ್ಲಿ ನಡೆದಿದೆ.

ಕಡೂರು ಗ್ರಾಮದಲ್ಲಿ ಕಳೆದ ಹಲವು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸುಮಾರು 25 ಕುಟುಂಬಗಳು ನೀರಿಗಾಗಿ ಪರದಾಡುವಂತಾಗಿದೆ. ಜನರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ನೀರಿನ ಕೊರತೆ ಎದುರಾಗಿದ್ದು, ಕಳೆದ 20 ವರ್ಷಗಳಿಂದ ಗ್ರಾಮಕ್ಕೆ ಸಮರ್ಪಕ ನೀರಿನ ಸೌಲಭ್ಯವಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Also Read
‘ಮೋದಿ ಫ್ಯಾನ್’ ಮೇಲೆ ಮುಗಿಬಿದ್ದ ಕೈ ಕಾರ್ಯಕರ್ತರು? ನಡು ರಸ್ತೆಯಲ್ಲಿ ಕಾಶ್ಮೀರಿ ಯುವಕನ ಮೇಲೆ ಹಲ್ಲೆ ಆರೋಪ; ವಿಡಿಯೋ ವೈರಲ್​! Modi Supporter Beaten
Villagers in Kadur protest by tying a cow inside the PDO office, demanding drinking water.

ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿ ಪಿಡಿಓಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿ ಬಾರಿ ಮನವಿ ಸಲ್ಲಿಸಲು ಹೋದಾಗ ಅನುದಾನ ಇಲ್ಲ ಎಂದು ಅಧಿಕಾರಿಗಳು ಕಾರಣ ನೀಡುತ್ತಿದ್ದು, ಇದರಿಂದ ಬೇಸತ್ತ ಗ್ರಾಮಸ್ಥರು ಗುರುವಾರ (ಅ.8) ಪಿಡಿಓ ಕಚೇರಿಯೊಳಗೆ ಹಸುವನ್ನು ತಂದು ಕಟ್ಟಿ, ಕೂಡಲೇ ಗ್ರಾಮಕ್ಕೆ ನೀರಿನ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಊರಿನಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇಲ್ಲದಿದ್ದರೆ ಜನ ಏನು ಮಾಡಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಗ್ರಾಮದಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ತಕ್ಷಣ ನೀರಿನ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net