

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಆಶಾ ಕಾರ್ಯಕರ್ತರ ಸಂಘವು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಾಲ್ಕನೇ ದಿನವಾದ ಶುಕ್ರವಾರವೂ ನಡೆಯಿತು.
ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ತೀವ್ರ ಚಳಿಗೆ ಜ್ವರ, ತಲೆ ನೋವು ಕೆಲವರಲ್ಲಿ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರ್ಯಕರ್ತರ ಆರೋಗ್ಯ ದೃಷ್ಟಿಯಿಂದ ಕೆಲ ಖಾಸಗಿ ಆಸ್ಪತ್ರೆಗಳ ವೈದ್ಯರು ಉಚಿತ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಪ್ರತಿಭಟನೆ ಹಿಂಪಡೆಯುವಂತೆ ಸಿಎಂ ಡಿ.ಕೆ.ಶಿವಕುಮಾರ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ನಡೆದ ಸಂಧಾನ ಸಭೆ ವಿಲವಾದ ಹಿನ್ನೆಲೆ ಕಾರ್ಯಕರ್ತರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ, ಮಾಸಿಕ ಗೌರವಧನ 15 ಸಾವಿರ ರೂ. ಸೇರಿ ಬೇಡಿಕೆಗಳನ್ನು ಈಡೇರಿಸಲು ಕೇಳಿರುವುದನ್ನು ಸರ್ಕಾರವು ಕೇವಲವಾಗಿ ಪರಿಗಣಿಸಿದೆ. ಬೇಡಿಕೆ ಈಡೇರುವ ತನಕ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿದರೆ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರು ಮತ್ತು ಅತಿಥಿ ಶಿಕ್ಷಕರೂ ಸೇರಿ ಇತರರೂ ಬೇಡಿಕೆ ಮುಂದಿಡುತ್ತಾರೆ ಎಂದು ಸರ್ಕಾರ ಸಬೂಬು ನೀಡಿದೆ. 15 ಸಾವಿರ ರೂ. ದೊಡ್ಡ ಮೊತ್ತ ಎಂದು ಹೇಳುತ್ತಿದೆ. ಸಮಸ್ಯೆ ಬಗೆಹರಿಸುವುದು ಬಿಟ್ಟು ಇತರೆ ದುಡಿಯುವ ವರ್ಗಗಳನ್ನು ಎತ್ತಿಕಟ್ಟುವ ಹುನ್ನಾರವನ್ನು ಸರ್ಕಾರವೇ ನಡೆಸುತ್ತಿದೆ ಎಂದು ಆರೋಪಿಸಿದರು.
ಬಹು ವರ್ಷಗಳಿಂದ ಬೇಡಿಕೆಗಳನ್ನು ಈಡೇರಿಸಲು ಕೇಳುತ್ತಿದ್ದೇವೆ. ಪ್ರತಿಭಟನೆ ನಡೆಸಿದಾಗ ಭರವಸೆ ನೀಡುತ್ತಾರೆ ಹೊರತು ಸ್ಪಂದಿಸುವುದಿಲ್ಲ. ಹಿಂದಿನ ಸಿಎಂ ಸಿದ್ದರಾಮಯ್ಯ 10 ಸಾವಿರ ರೂ. ಗ್ಯಾರಂಟಿ ನೀಡುವುದಾಗಿ ಹೇಳಿದ್ದರು. ಎರಡು ವರ್ಷ ಕಳೆದರೂ ಈಡೇರಿಲ್ಲ. ಕಳೆದ 9 ವರ್ಷಗಳಿಂದ ಹೆಚ್ಚಿಸಿರುವುದು ಕೇವಲ 1,500 ವಾತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ಪಕ್ಷಗಳ ವಿರುದ್ಧ ಆಕ್ರೋಶ
ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತರಿಗೆ 1,500 ರೂ. ಪಾವತಿ ಮಾಡುವುದಾಗಿ ಹೇಳಿ ಒಂದೂವರೆ ವರ್ಷ ಕಳೆದಿದೆ. ಇದನ್ನು ಕೊಡಿಸಲು ಬಿಜೆಪಿ ನಾಯಕರು ಎಂದು ಧ್ವನಿ ಎತ್ತಲಿಲ್ಲ. ಈಗ ನಮ್ಮ ಮೇಲೆ ಸಹಾನುಭೂತಿ ತೋರುತ್ತಿದ್ದಾರೆ. ಮುಂಚೆ ಅಧಿಕಾರದಲ್ಲಿ ಇದ್ದಾಗ ಕಾರ್ಯಕರ್ತರಿಗೆ ಮಾಡಿದ ಸಹಾಯ ಏನು ಎಂದು ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಪ್ರಶ್ನಿಸಿದರು. ಕಳೆದ 3 ವರ್ಷಗಳಲ್ಲಿ ಜಾಹೀರಾತಿಗಾಗಿ ರಾಜ್ಯ ಸರ್ಕಾರ 500 ಕೋಟಿ ರೂ. ವೆಚ್ಚ ಮಾಡಿದೆ. ಅಗತ್ಯವಿಲ್ಲದಿದ್ದರೂ ಸಂಸದರಿಗೆ 30 ಲಕ್ಷ ರೂ. ಬೆಲೆಬಾಳುವ ಕಾರುಗಳನ್ನು ನೀಡಿದೆ. ವಿವಿಧ ರಸ್ತೆಗಳ ಯೋಜನೆಗೆ 20 ಸಾವಿರ ಕೋಟಿ ರೂ. ಕೊಡುವುದಾಗಿ ಸಚಿವ ಸಂಪುಟದಲ್ಲಿ ಹೇಳಿದೆ. ಅದೇ ಸಂಪುಟ ಸಭೆಯಲ್ಲಿ ಆಶಾ ಕಾರ್ಯಕರ್ತರ ಪರವಾಗಿ ತೀರ್ಮಾನ ತೆಗೆದುಕೊಳ್ಳಲು ಆಗಲಿಲ್ಲವೇ? ಎಂದು ಕಿಡಿಕಾರಿದರು.