ಓಜೋನ್ ಗ್ರೂಪ್ ವಿರುದ್ಧ ಪ್ರಾಸಿಕ್ಯೂಷನ್‌ ದೂರು

ಗ್ರಾಹಕರಿಗೆ ಸಾವಿರಾರು ಕೋಟಿ ರೂ. ವಂಚನೆ ಪ್ರಕರಣ
ED
ED
Published on: 

ಬೆಂಗಳೂರು: ಮನೆ ಖರೀದಿದಾರರಿಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸದೆ, ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿ ಆ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಓಜೋನ್ ಗ್ರೂಪ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ)ದಿಂದ ಮತ್ತೊಂದು ಸಂಕಷ್ಟ ಎದುರಾಗಿದೆ.

ಇ.ಡಿ ಬೆಂಗಳೂರು ವಲಯ ಕಚೇರಿ ಅಧಿಕಾರಿಗಳು ನ. 25ರಂದು ಓಜೋನ್ ಗ್ರೂಪ್ ಸೇರಿ ವಿವಿಧ ಪಾಲುದಾರ ಕಂಪನಿಗಳಾದ ಅಕ್ವಾ-2 ಮತ್ತು ಅವೆನ್ಯೂ, ಪ್ರೈಮ್, ಮೆಟ್ರೋಜೋನ್, ಡಬ್ಲ್ಯುಎಫ್-48 ಹಾಗೂ ಪೋಲಿಸ್ಟಾರ್ ಸೇರಿ ವಿವಿಧ ವಸತಿ ಯೋಜನೆಗಳ ಹೆಸರಿನಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸಲಾಗಿರುವ ಕಂಪನಿಗಳ 702 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕ ಆಸ್ತಿ ಜಪ್ತಿ ಮಾಡಿಕೊಂಡಿರುವ ಬೆನ್ನಲ್ಲೇ ಎಂಟು ಮಂದಿ ಆರೋಪಿಗಳ ವಿರುದ್ಧ ಇಡಿ ವಿಶೇಷ ನ್ಯಾಯಾಲಯದಲ್ಲಿ ಪ್ರಾಷಿಕ್ಯೂಷನ್‌ಗೆ ದೂರು ದಾಖಲಿಸಿಕೊಂಡಿದೆ.

ಗ್ರೂಪ್‌ನ ವಿವಿಧ ಕಂಪನಿಗಳು ಹಾಗೂ ಅದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಎಸ್. ವಾಸುದೇವನ್ ಅವರು ಮನೆ ಖರೀದಿದಾರರಿಗೆ ಅಂದಾಜು 1,305.11 ಕೋಟಿ ವಂಚಿಸಿದ್ದಾರೆ ಎಂಬುದು ಇ.ಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸಬ್‌ವೆನ್ಷನ್, ಬೈಬ್ಯಾಕ್, ಜೀರೋ ಡೌನ್ ಪೇಮೆಂಟ್ ಸೇರಿ ಹಲವು ಆಕರ್ಷಕ ಯೋಜನೆಗಳನ್ನು ಮುಂದಿಟ್ಟು ಮನೆ ಖರೀದಿದಾರರನ್ನು ಸೆಳೆಯಲಾಗಿತ್ತು.

ಮನೆಗಳ ಹಸ್ತಾಂತರವಾಗುವವರೆಗೆ ಕಟ್ಟಡ ನಿರ್ಮಾಣ ಸಂಸ್ಥೆಯೇ ಸಾಲದ ಪೂರ್ವ ಇಎಂಐ ಮತ್ತು ಮಾಸಿಕ ಕಂತು ಪಾವತಿಸಲಿದೆ ಎಂಬ ಭರವಸೆಯನ್ನೂ ನೀಡಲಾಗಿತ್ತು. ಇದನ್ನು ನಂಬಿ ಅನೇಕರು ಫ್ಲ್ಯಾಟ್‌ಗಳನ್ನು ಬುಕ್ ಮಾಡಿದ್ದರು. ಬ್ಯಾಂಕ್‌ಗಳಿಂದ ಗೃಹ ಸಾಲ ಪಡೆದು ಹಣವನ್ನು ನೇರವಾಗಿ ನಿರ್ಮಾಣ ಸಂಸ್ಥೆಗಳಿಗೆ ಪಾವತಿಸಲಾಗಿತ್ತು. ಆದರೆ, ಯೋಜನೆಗಳು ಪೂರ್ಣಗೊಳ್ಳದೆ ಗ್ರಾಹಕರಿಗೆ ಫ್ಲ್ಯಾಟ್‌ಗಳ ಹಸ್ತಾಂತರವೂ ಆಗಿಲ್ಲ. ಸಂಗ್ರಹಿಸಿದ ಹಣವನ್ನು ಹಿಂದಿರುಗಿಸಿಯೂ ಇಲ್ಲ ಎಂದು ಇ.ಡಿ ಆರೋಪಿಸಿದೆ.

ಗ್ರಾಹಕರ ಹಣ ಬೇರೆಡೆಗೆ ವರ್ಗಾವಣೆ

ಮನೆ ಖರೀದಿದಾರರಿಂದ ಸಂಗ್ರಹಿಸಿದ ಹಣ ಆಯಾ ವಸತಿ ಯೋಜನೆಗಳ ನಿರ್ಮಾಣಕ್ಕೆ ಬಳಸುವ ಬದಲು ಓಜೋನ್ ಗ್ರೂಪ್, ಇಂಟರ್ ಕಾರ್ಪೊರೇಟ್ ಡೆಪಾಸಿಟ್ ಸೇರಿ ವಿವಿಧ ಹಣಕಾಸು ವಹಿವಾಟುಗಳ ಮೂಲಕ ಹಣವನ್ನು ಬೇರೆ ಕಂಪನಿಗಳಿಗೆ ವರ್ಗಾಯಿಸಿದೆ. ಈ ಹಣವನ್ನು ಹಳೆಯ ಸಾಲಗಳ ಮರುಪಾವತಿ, ಬಡ್ಡಿ ಮತ್ತು ಹಣಕಾಸು ವೆಚ್ಚ, ಹೂಡಿಕೆದಾರರಿಗೆ ಹಣ ಹಿಂದಿರುಗಿಸುವುದು, ಕಾರ್ಪೊರೇಟ್ ವೆಚ್ಚಗಳು ಹಾಗೂ ಇತರ ಬಾಕಿ ಪಾವತಿಗಳಿಗೆ ಬಳಸಲಾಗಿದೆ ಎಂದು ಇ.ಡಿ ತಿಳಿಸಿದೆ. ಹೀಗಾಗಿ, ಗ್ರಾಹಕರು ಮನೆಗಾಗಿ ಪಾವತಿಸಿದ ಹಣ ನಿರ್ಮಾಣ ಕಾಮಗಾರಿಗೆ ಬಳಕೆಯಾಗದೆ ಬೇರೆ ಆರ್ಥಿಕ ವ್ಯವಹಾರಗಳಿಗೆ ಬಳಕೆಯಾಗಿದೆ. ಇದರಿಂದ ಒಂದೆಡೆ ಗ್ರಾಹಕರಿಗೆ ಮನೆಗಳು ಸಿಗದೆ ಹೋದರೆ, ಮತ್ತೊಂದೆಡೆ ಬ್ಯಾಂಕ್ ಸಾಲದ ಹೊಣೆಗಾರಿಕೆಯೂ ಮುಂದುವರಿದಿದೆ.

ವಾಸುದೇವನ್ ಬಂಧನ:

ಕರ್ನಾಟಕ ಪೊಲೀಸರು ಹಾಗೂ ಸಿಬಿಐ ದಾಖಲಿಸಿರುವ ಹಲವು ಎಫ್‌ಐಆರ್‌ಗಳ ಆಧಾರದ ಮೇಲೆ ಇ.ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಆರಂಭಿಸಿತ್ತು. ಮನೆ ಖರೀದಿದಾರರಿಗೆ ವಂಚನೆ, ಕ್ರಿಮಿನಲ್ ಸಂಚು, ಅಪಾರ್ಟ್‌ಮೆಂಟ್‌ಗಳ ಹಸ್ತಾಂತರದಲ್ಲಿ ವಿಫಲತೆ ಹಾಗೂ ಸಂಗ್ರಹಿಸಿದ ಹಣವನ್ನು ಹಿಂದಿರುಗಿಸದ ಆರೋಪಗಳಿವೆ. ಈ ಸಂಬಂಧ ಓಜೋನ್ ಗ್ರೂಪ್‌ನ ಸಿಎಂಡಿ ಎಸ್. ವಾಸುದೇವನ್ ಅವರನ್ನು 2026ರ ಸೆಪ್ಟೆಂಬರ್ 30ರಂದು ಪಿಎಂಎಲ್‌ಎ ಕಾಯ್ದೆಯಡಿ ಇಡಿ ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಮುಖ ಅಂಕಿಅಂಶಗಳು:

ವಿವರ ಮೊತ್ತ, ಮನೆ ಖರೀದಿದಾರರಿಗೆ ವಂಚನೆ ಆರೋಪ

₹1,305.11 ಕೋಟಿ

2025ರಲ್ಲಿ ಜಪ್ತಿಯಾದ ಆಸ್ತಿ

₹423.37 ಕೋಟಿ

2026ರ ನವೆಂಬರ್‌ನಲ್ಲಿ ಜಪ್ತಿ

₹702.70 ಕೋಟಿ

ಒಟ್ಟು ಜಪ್ತಿಯಾದ ಆಸ್ತಿ

₹1,126.07 ಕೋಟಿ ಎಂದು ಇಡಿ ಹೇಳಿದೆ.