ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಶರ್ಮಿಳಾ ರೆಡ್ಡಿ ಪ್ಯಾಲೇಸ್‌ಗೆ ಹೋಗುವುದನ್ನು ತಡೆದ ಪೊಲೀಸರು

Shrmila reddy
Shrmila reddy
Published on: 

ಬೆಂಗಳೂರು: ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್. ಶರ್ಮಿಳಾ ರೆಡ್ಡಿ ಯಲಹಂಕದ ಪ್ಯಾಲೇಸ್‌ಗೆ ಬರುತ್ತಿದ್ದನ್ನು ಯಲಹಂಕ ಪೊಲೀಸರು ಭಾನುವಾರ ತಡೆದಿದ್ದಾರೆ.

ಬಾಗಲೂರು ಮುಖ್ಯರಸ್ತೆಯ ಕಟ್ಟಿಗೆನಹಳ್ಳಿ ಬಳಿಯ ಜಗನ್ ಪ್ಯಾಲೇಸ್‌ನಲ್ಲಿ ಶರ್ಮಿಳಾ ಅವರ ಮಗಳ ಮದುವೆ ನೆರವೇರಿಸಲು ಜಗನ್ ಮೋಹನ್ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನ್ಯಾಯಾಲಯದಿಂದ ಶರ್ಮಿಳಾ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ. ಆಂಧ್ರ ಪ್ರದೇಶದಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದ ವಿಷಯ ತಿಳಿದ ಪೊಲೀಸರು, ಶರ್ಮಿಳಾ ರೆಡ್ಡಿ ಕುಟುಂಬ ಸಮೇತ ಕಾರಿನಲ್ಲಿ ಆಗಮಿಸುತ್ತಿರುವುದನ್ನು ಅರ್ಧದಾರಿಯಲ್ಲಿ ತಡೆದು ನಿಲ್ಲಿಸಿದ್ದಾರೆ.

ಪ್ಯಾಲೇಸ್ ಪ್ರಕರಣ ಸಂಬಂಧ ಕೋರ್ಟ್ ಆದೇಶ ಇರುವುದರಿಂದ ತಾವು ಅಲ್ಲಿಗೆ ಹೋಗುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ಶರ್ಮಿಳಾ ಖಾಸಗಿ ಹೋಟೆಲ್ಗೆ ತೆರಳಿದ್ದು, ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

ಕೌಟುಂಬಿಕ ಹಾಗೂ ಆಸ್ತಿ ವಿಚಾರವಾಗಿ ಜಗನ್ ಮೋಹನ್ ರೆಡ್ಡಿ ಕೋರ್ಟ್ ಮೋರೆ ಹೋಗಿದ್ದರ ಪರಿಣಾಮ ದೇವನಹಳ್ಳಿ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ಯಾಲೇಸ್ ಮುಂಭಾಗ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಕಲ್ಪಿಸಲಾಗಿದೆ.

ಶರ್ಮಿಳಾ ಅವರ ಪುತ್ರಿ ವೈ.ಎಸ್. ಅಂಜಲಿ ರೆಡ್ಡಿ ಅವರ ವಿವಾಹವು ನ.25ರಂದು ನಿಗದಿಯಾಗಿದೆ. ಕುಟುಂಬದ ಸಂಪ್ರದಾಯದಂತೆ ಬೆಂಗಳೂರಿನ ಯಲಹಂಕ ಪ್ಯಾಲೇಸ್‌ನಲ್ಲೇ ಮದುವೆ ನಡೆಸಲು ಶರ್ಮಿಳಾ ನಿರ್ಧರಿಸಿದ್ದರು. ಮತ್ತು ಅದೇ ವಿಳಾಸವನ್ನು ಮುದ್ರಿಸಿ ಗಣ್ಯರಿಗೆ ಆಮಂತ್ರಣ ಪತ್ರಿಕೆಯನ್ನೂ ಹಂಚಿದ್ದರು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಣ್ಣ ಜಗನ್ ಮೋಹನ್ ರೆಡ್ಡಿ, ತಾವು ವಾಸವಿರುವ ನಿವಾಸದಲ್ಲಿ ಮದುವೆ ನಡೆದರೆ ಹೊರಗಿನ ಸಿಬ್ಬಂದಿ ಹಾಗೂ ಅತಿಥಿಗಳ ಓಡಾಟದಿಂದ ತಮ್ಮ ಝಡ್ ಪ್ಲಸ್ ಭದ್ರತೆ ಮತ್ತು ಕುಟುಂಬದ ಗೌಪ್ಯತೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.